ಧಾರವಾಡ (ಮೇ.18): ಕೋವಿಡ್‌ 2ನೇ ಅಲೆ ಮಾರಕವಾಗಿದೆ. ಕೊರೋನಾ ಸೋಂಕು ಹೇಳಿ-ಕೇಳಿ ತಗುಲುವುದಿಲ್ಲ. ಅದು ಎಲ್ಲ ವಯೋಮಾನದವರನ್ನೂ ಬಾಧಿಸುತ್ತದೆ. ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿದರೆ ತೊಂದರೆ ಅನುಭವಿಸುವುದು ನಿಶ್ಚಿತ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವೈದ್ಯ ಡಾ. ಪ್ರವೀಣ್‌ ಗೌರಿ ಸೂಚಿಸಿದ್ದಾರೆ.

ಸೋಂಕನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉದಾಸೀನ ಮಾಡಿದ ಪರಿಣಾಮ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಡಾ. ಪ್ರವೀಣ್‌ ಹೇಳಿದರು.

ಕೋವಿಡ್‌ ನಿಯಮ ಪಾಲಿಸುವುದು ಮುಖ್ಯ. ಮನೆಯಲ್ಲಿಯೇ ಉಳಿದುಕೊಳ್ಳುವುದಕ್ಕಾಗಿಯೇ ಲಾಕ್ಡೌನ್‌ ಮಾಡಲಾಗಿದೆ. ಆದರೆ, ಬಹುತೇಕ ಜನರು ಹೊರಗಡೆ ಬಂದು ಅತ್ತಿತ್ತ ತಿರುಗಾಡುತ್ತಿರುವುದು ಸರಿಯಾದ ಧೋರಣೆಯಲ್ಲ. ಜನರ ಹಿತಕ್ಕಾಗಿ ಸರ್ಕಾರ ನಿರ್ಧಾರ ಕೈಗೊಂಡಿರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ. ಜೀವನ ರಕ್ಷಣೆ ಆದ್ಯ ಕರ್ತವ್ಯವಾಗಬೇಕು ಎಂದರು.

ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ಕೊಟ್ಟ ಕೇಂದ್ರ ಸಚಿವ ..

ಬೇರೆ ಕಡೆ ಉದ್ಯೋಗಕ್ಕಾಗಿ ಹೋಗಿ ಗ್ರಾಮಕ್ಕೆ ಮರಳಿದವರು ಮತ್ತು ಮರಳುವವರು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು. ಈ ರೀತಿಯ ಪರೀಕ್ಷೆಯಿಂದ ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಅನಗತ್ಯವಾಗಿ ಭಯಕ್ಕೆ ಒಳಗಾಗದೇ ನಿಯಮಗಳನ್ನು ಪಾಲಿಸಿದರೆ ರೋಗದ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ವೈದ್ಯರು ತಿಳಿಸಿದರು.

ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೊರೋನಾ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು. ಕೊರೋನಾ ತಡೆಯಲು ಸಾರ್ವಜನಿಕರು ಕೈ ಜೋಡಿಸಬೇಕು ಡಾ. ಪ್ರವೀಣ್‌ ಗೌರಿ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona