ಬೆಂಗಳೂರು(ಅ.01): ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಾಯಂಡಹಳ್ಳಿಯ ನಿವಾಸಿ ಸಿದ್ದಪ್ಪ ಬುಧವಾರ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಾಕಿ ಹಣ ಪಾವತಿಸುವವರೆಗೆ ಮೃತದೇಹ ನೀಡದೇ ಸೇಂಟ್‌ ಜಾನ್ಸ್‌ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸೇಂಟ್‌ ಜಾನ್ಸ್‌ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ಹೊಸದೇನಲ್ಲ. ಈ ಹಿಂದೆ ಇದೇ ರೀತಿ ಅನೇಕ ಬಾರಿ ಮೃತದೇಹ ನೀಡದ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಬುಧವಾರವೂ ಮತ್ತೆ ಅಂತಹದೇ ಘಟನೆ ಪುನರಾವರ್ತನೆಯಾಗಿದೆ ಎಂದು ತಿಳಿದುಬಂದಿದೆ.

ಸೆ.13ರಂದು ಜಯನಗರದ ತಿಲಕ್‌ನಗರ ಪೊಲೀಸ್‌ ಠಾಣೆಯ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಸಿದ್ದಪ್ಪ ಅವರ ಮೇಲೆ ಮರ ಕೊಂಬೆ ಬಿದ್ದಿತ್ತು. ಇದರಿಂದ ಸಿದ್ದಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ತಿಲಕ್‌ ನಗರ ಪೊಲೀಸರು ಸಿದ್ದಪ್ಪ ಅವರು ತಕ್ಷಣ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗ್ಗೆ 9ರ ಸುಮಾರಿಗೆ ಮೃತಪಟ್ಟಿದ್ದಾರೆ.

ಒಟ್ಟು .6.5 ಲಕ್ಷ ಬಿಲ್‌ ಆಗಿದ್ದು, ಈ ಹಿಂದೆ ಕುಟುಂಬಸ್ಥರು 3 ಲಕ್ಷ ಕಟ್ಟಿದ್ದರು. ಉಳಿದ 3.5 ಲಕ್ಷ ಪಾವತಿ ಮಾಡುವವರೆಗೆ ಮೃತದೇಹ ನೀಡುವುದಿಲ್ಲ ಎಂದು ಸೇಂಟ್‌ ಜಾನ್ಸ್‌ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಕುಟುಂಬ ಸದಸ್ಯರು ಅಷ್ಟೊಂದು ಹಣ ಇಲ್ಲ. ಮೃತದೇಹ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಒಪ್ಪಿಲ್ಲ.

ಖಾಸಗಿ ಆಸ್ಪತ್ರೆ ಬಿಲ್‌ ಪಾವತಿಸಲಾಗದೆ ವ್ಯಕ್ತಿಯ ಪರದಾಟ: ನೆರವಿಗೆ ಮೊರೆ

ಮರ ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು 8 ಲಕ್ಷ ಚಿಕಿತ್ಸಾ ವೆಚ್ಚ ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದರು. ಹಾಗಾಗಿ, ಬುಧವಾರ ಕುಟುಂಬಸ್ಥರು ಆಸ್ಪತ್ರೆಗೆ ಬಾಕಿ ಹಣ ಪಾವತಿಗಾಗಿ ಬಿಬಿಎಂಪಿಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದಿಸಿಲ್ಲ. ಕೊನೆಗೆ ಸಾಲ ಮಾಡಿ ಆಸ್ಪತ್ರೆಗೆ ಬಾಕಿ 3.5 ಲಕ್ಷ ಪಾವತಿ ಮಾಡಿ ಮೃತದೇಹ ಪಡೆದುಕೊಂಡು ಘಟನೆ ನಡೆದಿದೆ.

ಚಿಕಿತ್ಸೆ ವಿಳಂಬದಿಂದ ರೋಗಿ ಸಾವು: ಕುಟುಂಬಸ್ಥರ ದೂರು

ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಜಿಗಣಿಯಲ್ಲಿ ನಡೆದಿದ್ದು, ಸುಹಾಸ್‌ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತರ ಕುಟುಂಬಸ್ಥರು ದೂರಿದ್ದಾರೆ.

ಮೆಳೆ ನಲ್ಲಸಂದ್ರ ನಿವಾಸಿ ಮಂಜುನಾಥ್‌(40)ಗೆ ಎದೆನೋವು ಕಾಣಿಸಿಕೊಂಡಿದ್ದು, ಸುಹಾಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಸೂಕ್ತವಾದ ಸ್ಪಂದನೆ ದೊರೆಯದ ಕಾರಣ ಮಂಜುನಾಥ್‌ ಬೇರೆ ಆಸ್ಪತ್ರೆಗೆ ತೆರಳುತ್ತೇನೆಂದು ಆಸ್ಪತ್ರೆಯಿಂದ ಹೊರಬರುವ ವೇಳೆ ಕುಸಿದು ಬಿದ್ದಿದ್ದು, ತಕ್ಷಣ ಹೆಚ್ಚಿನ ಚಿಕಿತ್ಸೆಗೆಂದು ಫೋರ್ಟಿಸ್‌ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮಂಜುನಾಥ್‌ ಕೊನೆಯುಸಿರೆಳೆದರು. ಮೊದಲೇ ಸೂಕ್ತ ಚಿಕಿತ್ಸೆ ನೀಡಿದ್ದರೆ, ಅವಘಡ ಉಂಟಾಗುತ್ತಿರಲಿಲ್ಲ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ನಮ್ಮದೇನು ತಪ್ಪಿಲ್ಲ: 

ಸ್ಪಷ್ಟನೆ ನೀಡಿರುವ ಆಸ್ಪತ್ರೆ ಸಿಬ್ಬಂದಿ, ವೈದ್ಯಕೀಯ ಸಲಹೆಯನ್ನು ಪರಿಗಣಿಸದೇ ಬೇರೆಡೆ ಚಿಕಿತ್ಸೆಗೆ ಹೋಗುವುದಾಗಿ ಹೇಳಿ ಹೊರಟರು. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕುಸಿದು ಬಿದ್ದರು. ಕೂಡಲೇ ಅಗತ್ಯ ಚಿಕಿತ್ಸೆ ನೀಡಿ ಫೋರ್ಟಿಸ್‌ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು ಎಂದಿದ್ದಾರೆ.