Asianet Suvarna News Asianet Suvarna News

ಹುಬ್ಬಳ್ಳಿ: ಮೊಬೈಲ್‌ ಟಾವರ್‌ ನಿರ್ಮಾಣಕ್ಕೆ ಭಾರೀ ಆಕ್ರೋಶ

ಅಳವಡಿಕೆಗೆ ವಿರೋಧಿಸಿ ಹೋರಾಟದ ಹಾದಿ ಹಿಡಿಯುತ್ತಿರುವ ನಾಗರಿಕರು|ಟಾವರ್‌ ಅಳವಡಿಕೆಗೆ ಮುನ್ನ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸುವಂತಾಗಲಿ: ನಾಗರಿಕರು|ಮೊಬೈಲ್‌ ಟಾವರ್‌ ಅಳವಡಿಸಲು ಈಗ ಇರುವ ನಿಯಮಗಳೇನು ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು|

People Outrage on Mobile Tower Install in Hubballi- Dharwad
Author
Bengaluru, First Published Nov 23, 2019, 7:37 AM IST

ಹುಬ್ಬಳ್ಳಿ(ನ.23):ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲೀಗ ಮೊಬೈಲ್‌ ಟಾವರ್‌ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಜೋರಾಗಿ ಸದ್ದು ಮಾಡುತ್ತಿದೆ. ಮೊಬೈಲ್‌ ಟಾವರ್‌ ಅಳವಡಿಕೆ ವಿರುದ್ಧ ಜನತೆ ಹೋರಾಟದ ಹಾದಿ ಹಿಡಿದಿದ್ದಾರೆ. ಮೊಬೈಲ್‌ ಟಾವರ್‌ ಅಳವಡಿಕೆಗೂ ಮುನ್ನ ನಾಗರಿಕರ ಅಭಿಪ್ರಾಯ ಸಂಗ್ರಹಣೆಗೆ ಒತ್ತು ನೀಡಬೇಕು ಎಂದು ಜನತೆಯ ಒಕ್ಕೊರಲಿನ ಹಕ್ಕೊತ್ತಾಯ.

ಕಳೆದ ಮೂರು ದಿನಗಳಲ್ಲೇ ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರ, ಲಿಂಗರಾಜನಗರ, ದೀನಬಂಧು ಕಾಲನಿ ಹೀಗೆ ನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮೊಬೈಲ್‌ ಟಾವರ್‌ಗಳ ಅಳವಡಿಕೆಗೆ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಟಾವರ್‌ ಅಳವಡಿಕೆಗೆ ಆಕ್ಷೇಪಿಸಿ ಕಾಮಗಾರಿಯನ್ನೇ ಸ್ಥಗಿತಗೊಳಿಸಲಾಗುತ್ತಿದೆ. ಈ ಮೂರು ಕಡೆಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ವಾಪಸ್‌ ಕಳುಹಿಸಿದ್ದರೆ, ಇನ್ನು ಎಆರ್‌ಟಿ ನಗರದಲ್ಲಿ ಎರಡು ವರ್ಷಗಳಿಂದ ಅಳವಡಿಸಿದ್ದ ಮೊಬೈಲ್‌ ಟಾವರ್‌ನ್ನು ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೊಬೈಲ್‌ ಕಂಪನಿಗಳು ಖಾಸಗಿಯವರ ಜಾಗೆಯನ್ನು ವರ್ಷಕ್ಕೆ ಇಂತಿಷ್ಟು ಎಂದು ಬಾಡಿಗೆ ನಿಗದಿಪಡಿಸಿ ಜಾಗೆ ಪಡೆದುಕೊಳ್ಳುತ್ತವೆ. ಅಲ್ಲಿ ರಾತ್ರೋರಾತ್ರಿ ಟಾವರ್‌ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಆ ಜಾಗೆಯ ಮಾಲಿಕರು ಆ ಟಾವರ್‌ಗಳಿಂದ ಏನೇನು ಸಮಸ್ಯೆಯಾಗುತ್ತದೆ. ಸಮಾಜಕ್ಕೆ ಏನು ದುಷ್ಪರಿಣಾಮ ಆಗುತ್ತದೆ ಎಂಬುದನ್ನು ಯೋಚಿಸುವ ಗೋಜಿಗೆ ಹೋಗುತ್ತಿಲ್ಲ. ತಮಗೆ ವರ್ಷಕ್ಕೊಮ್ಮೆ ಬಾಡಿಗೆ ಬಂದರೆ ಸಾಕು ಎಂಬ ಮನಸ್ಥಿತಿ ಜಾಗೆಯ ಮಾಲಿಕರದ್ದು. ಆದರೆ ಇದಕ್ಕೆ ಅಕ್ಕಪಕ್ಕದ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುವ ಪ್ರಸಂಗಗಳು ದಿನಕ್ಕೊಂದು ಕಡೆಗಳಲ್ಲಿ ನಡೆಯುತ್ತಿವೆ.

ಏಕೆ ಏನು ಕಾರಣ:

ಮೊಬೈಲ್‌ ಟಾವರ್‌ಗಳು ರೆಡಿಯೇಶನ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತವೆ. ಇದರಿಂದ ಸುತ್ತ ಮುತ್ತಲಿನ ಜನರ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಮಕ್ಕಳು, ವೃದ್ಧರು ವಿವಿಧ ಕಾಯಿಲೆಗಳಿಂದ ಬಳಲುವಂತಾಗುತ್ತದೆ. ಆದಕಾರಣ ನಮ್ಮ ಏರಿಯಾದಲ್ಲಿ ಈ ಟಾವರ್‌ ಅಳವಡಿಸುವುದು ಬೇಡ ಎಂಬ ಒತ್ತಾಯ ನಾಗರಿಕರದ್ದು. ಇಂಥ ಪ್ರಕರಣಗಳು ಸಾಕಷ್ಟು ಆಗಿವೆ. ಕಳೆದ ವರ್ಷ ಇಂಗಳಹಳ್ಳಿಯಲ್ಲಿ ಇದೇ ತರಹದ ಮೊಬೈಲ್‌ ಟಾವರ್‌ ವಿರುದ್ಧ ಪ್ರತಿಭಟನೆ ನಡೆಸಿ ಟಾವರ್‌ ತೆಗೆಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದರು.

ಒಂದು ಪ್ರದೇಶದಲ್ಲಿ ಮೊಬೈಲ್‌ ಟಾವರ್‌ ಅಳವಡಿಸಬೇಕು ಎಂದರೆ ಮೊದಲು ಅಲ್ಲಿನ ನಿವಾಸಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಎಲ್ಲರೂ ಮೊಬೈಲ್‌ ಟಾವರ್‌ ಅಳವಡಿಸಲು ತಮ್ಮ ಒಪ್ಪಿಗೆಯಿದೆ ಎಂದು ತಿಳಿಸಿರುವ ಸಾಮೂಹಿಕ ಪತ್ರವನ್ನು ನೀಡಬೇಕು. ಅದಾದ ಬಳಿಕ ಸ್ಥಳೀಯ ಸಂಸ್ಥೆಯಿಂದ ಎನ್‌ಒಸಿ ಸರ್ಟಿಪಿಕೆಟ್‌ ಪಡೆಯಬೇಕು. ಬಳಿಕವಷ್ಟೇ ಮೊಬೈಲ್‌ ಟಾವರ್‌ ಅಳವಡಿಸಬೇಕು ಎಂಬ ಬೇಡಿಕೆ ಜನರದ್ದು. ಆದರೆ ಈಗ ಮೊಬೈಲ್‌ ಕಂಪನಿಗಳು ಜಾಗೆಯ ಮಾಲಿಕರರೊಂದಿಗೆ ಒಪ್ಪಿಗೆ ಪಡೆದು ಬಾಡಿಗೆ ನಿಗದಿಪಡಿಸಿ ಅದರ ಅರ್ಗಿಮೆಂಟ್‌ ಲಗತಿಸಿ ಸ್ಥಳೀಯ ಸಂಸ್ಥೆಗಳಿಂದ ಎನ್‌ಒಸಿ ಪಡೆದು ಟಾವರ್‌ ಅಳವಡಿಕೆಗೆ ಮುಂದಾಗುತ್ತಿವೆ. ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. ಜನತೆ ಇದರ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯುತ್ತಿದೆ. ಮೊಬೈಲ್‌ ಟಾವರ್‌ ಅಳವಡಿಕೆಗೆ ಎನ್‌ಒಸಿ ನೀಡುವ ಮುನ್ನ ನಿವಾಸಿಗಳಿಂದ ಒಪ್ಪಿಗೆ ಪತ್ರ ಪಡೆದುಕೊಂಡು ಬರಬೇಕೆಂಬ ನಿಯಮವನ್ನು ಪಾಲಿಕೆ ಜಾರಿಗೊಳಿಸಬೇಕೆಂಬುದು ನಾಗರಿಕರ ಆಗ್ರಹ.

ಒಟ್ಟಿನಲ್ಲಿ ಮಹಾನಗರದಲ್ಲೀಗ ಮೊಬೈಲ್‌ ಟಾವರ್‌ ಅಳವಡಿಕೆ ಹಾಗೂ ಅದರ ವಿರುದ್ಧ ಜನರ ಆಕ್ರೋಶ ಭಾರಿ ಸದ್ದು ಮಾಡುತ್ತಿರುವುದಂತೂ ಸತ್ಯ. ಮೊಬೈಲ್‌ ಟಾವರ್‌ ಅಳವಡಿಸಲು ಈಗ ಇರುವ ನಿಯಮಗಳೇನು ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು. ಇದರೊಂದಿಗೆ ಒಂದು ವೇಳೆ ಟಾವರ್‌ ಅಳವಡಿಸುವ ಪ್ರದೇಶದಲ್ಲಿನ ನಿವಾಸಿಗಳ ಅಭಿಪ್ರಾಯ ಪಡೆಯುವ ನಿಯಮ ಇಲ್ಲದಿದ್ದಲ್ಲಿ ಅದನ್ನು ಸೇರಿಸಬೇಕು. ಇಲ್ಲಿ ಟಾವರ್‌ ಅಕ್ಕಪಕ್ಕ ವಾಸಿಸುವ ಜನರ ಅಭಿಪ್ರಾಯ ಮುಖ್ಯವಾಗುತ್ತೆ. ಇದನ್ನು ಗಮನದಲ್ಲಿರಿಸಿಕೊಂಡು ಸ್ಥಳೀಯ ಸಂಸ್ಥೆಗಳು ಟಾವರ್‌ ಅಳವಡಿಕೆಗೆ ಎನ್‌ಒಸಿ ನೀಡಬೇಕು ಎಂದು ಸುಚಿತ ಎಂಬುವರು ಹೇಳಿದ್ದಾರೆ.
 

Follow Us:
Download App:
  • android
  • ios