ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.01): ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ಗೆ ಈ ಸಲವಾದರೂ ಕೇಂದ್ರ ಅನುಮತಿ ಕೊಡುತ್ತದೆಯೇ? ಮುಂಬೈ- ಬೆಂಗಳೂರು ಕಾರಿಡಾರ್‌ಗೆ ಹಣ ಮೀಸಲಿಟ್ಟು ಕಾಮಗಾರಿ ಶುರುವಾಗುವುದೇ? ಫುಡ್‌ ಪ್ರಾಸಿಸಿಂಗ್‌- ಎಕ್ಸ್‌ಪೋರ್ಟ್‌ ಕ್ಲಸ್ಟರ್‌ಗೆ ದೊರೆಯುವುದೇ ಹಸಿರು ನಿಶಾನೆ? ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಇನ್ನಾದರೂ ಮುಕ್ತಿ ಸಿಗುವುದೇ?

ಇವು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ (ಫೆ. 1) ಮಂಡಿಸಲಿರುವ ಕೇಂದ್ರ ಬಜೆಟ್‌ನ ಮೇಲೆ ಇಲ್ಲಿನ ಜನಸಾಮಾನ್ಯರು ಇಟ್ಟುಕೊಂಡಿರುವ ನಿರೀಕ್ಷೆಗಳು. ಹೌದು ಕೇಂದ್ರದ ಬಜೆಟ್‌ ಬಗ್ಗೆ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯನಗರ, ರಾಜ್ಯದ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಸಾಕಷ್ಟುನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಫ್ಲೈಓವರ್‌:

ಹಾಗೇ ನೋಡಿದರೆ ಇಲ್ಲಿನ ಚನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ ನಿರ್ಮಿಸಬೇಕೆಂಬ ಬೇಡಿಕೆ ಈಗಿನದ್ದಲ್ಲ. ದಶಕಗಳಿಂದಲೂ ಇಲ್ಲಿನ ಜನರು ಫ್ಲೈಓವರ್‌ಗೆ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ ಈ ಫ್ಲೈಓವರ್‌ ನಿರ್ಮಿಸಬೇಕಿದೆ. ಆದರೆ ಈ ವರೆಗೆ ಎರಡು ಸರ್ಕಾರಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಹಸಿರು ನಿಶಾನೆ ಸಿಕ್ಕಿಲ್ಲ. 1200 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದರೆ ಜನದಟ್ಟಣೆ ಕಡಿಮೆಯಾಗಿ ಟ್ರಾಫಿಕ್‌ ಕಿರಿಕಿರಿಗೆ ಇತಿಶ್ರೀ ಹಾಡಬಹುದು. ಈ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಾದರೂ ಅನುಮತಿ ಕೊಡಬೇಕು. ಇನ್ನು ಮೇಲಾದರೂ ಫ್ಲೈಓವರ್‌ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂಬ ನಿರೀಕ್ಷೆ ಜನರದ್ದು.

ಕೈಗಾರಿಕಾ ಕಾರಿಡಾರ್‌:

ಇನ್ನು ದೇಶದಲ್ಲಿ ಐದು ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಿಸಿ ವರ್ಷಗಳೇ ಕಳೆದಿವೆ. ಮುಂಬೈ- ದೆಹಲಿ ಕೈಗಾರಿಕಾ ಕಾರಿಡಾರ್‌ನಲ್ಲಿ ಮಾತ್ರ ಹೆಚ್ಚಿನ ಕೆಲಸಗಳಾಗಿವೆ. ಅಲ್ಲಿ ಮಾತ್ರ ಸಾಕಷ್ಟುಕೈಗಾರಿಕೆಗಳು ಬಂದಿವೆ. ಈ ಕಾರಿಡಾರ್‌ ಪೈಕಿ ಮುಂಬೈ- ಬೆಂಗಳೂರು ಕಾರಿಡಾರ್‌ ಕೂಡ ಒಂದು. ಆದರೆ ಇಲ್ಲಿ ಕೈಗಾರಿಕೆ ಕಾರಿಡಾರ್‌ಗೆ ಸಂಬಂಧಪಟ್ಟಂತೆ ಯಾವುದೇ ಕೆಲಸಗಳಾಗಿಲ್ಲ. ಈ ವರೆಗೂ ಇಂತಹದ್ದೊಂದು ಕಾರಿಡಾರ್‌ ಇದೆ ಎಂಬುದು ಕೂಡ ಎಷ್ಟೋ ಜನರಿಗೆ ಗೊತ್ತಿಲ್ಲ. ಆದಕಾರಣ ಮುಂಬೈ- ಬೆಂಗಳೂರು ಕಾರಿಡಾರ್‌ಗೂ ಆದ್ಯತೆ ಸಿಗುವಂತಾಗಬೇಕು. ಈ ಕಾರಿಡಾರ್‌ ವ್ಯಾಪ್ತಿಯಲ್ಲೇ ಉತ್ತರ ಕರ್ನಾಟಕದ ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯೇಕ ಅನುದಾನ ಮೀಸಲಿಟ್ಟು ಅಭಿವೃದ್ಧಿ ಪಡಿಸಬೇಕು. ಅಂದರೆ ಕೈಗಾರಿಕೆಗಳು ಇಲ್ಲಿಗೆ ಬರುತ್ತವೆ. ಇದರಿಂದ ಈ ಭಾಗದ ಅಭಿವೃದ್ಧಿಯೂ ಆಗುತ್ತದೆ. ಪ್ರಾದೇಶಿಕ ಅಸಮಾನತೆಯೂ ನಿವಾರಣೆಯಾಗುತ್ತದೆ. ಜತೆಗೆ ಪ್ರತಿಭಾ ಪಲಾಯನವಾದಕ್ಕೂ ಬ್ರೇಕ್‌ ಬೀಳುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರೊಂದಿಗೆ ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಫೆ. 14ರಂದು ಬಂಡವಾಳ ಹೂಡಿಕೆದಾರರ ಸಮಾವೇಶವನ್ನೂ ನಡೆಸುತ್ತಿದೆ. ಒಂದು ವೇಳೆ ಈ ಕಾರಿಡಾರ್‌ಗೆ ಕೇಂದ್ರ ಸರ್ಕಾರ ಹಣ ಮೀಸಲಿಟ್ಟರೆ, ಸಮಾವೇಶಕ್ಕೆ ಇನ್ನಷ್ಟುಬಲ ಬರುತ್ತದೆ. ಕೈಗಾರಿಕೋದ್ಯಮಿಗಳು ಹೆಚ್ಚು ಆಕರ್ಷಿತರಾಗುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಕೈಗಾರಿಕಾ ಕಾರಿಡಾರ್‌ಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯ ಕೈಗಾರಿಕೋದ್ಯಮಿಗಳದ್ದು.

ಎಕ್ಸ್‌ಪೋರ್ಟ್‌ ಕ್ಲಸ್ಟರ್‌:

ಇನ್ನೂ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೃಷಿಯೇ ಪ್ರಧಾನ. ಉತ್ತಮ ಗುಣಮಟ್ಟದ ಬೆಳೆಯನ್ನೂ ಇಲ್ಲಿನ ರೈತರು ಬೆಳೆದರೂ ಅದನ್ನು ರಫ್ತು ಮಾಡುವ ಮಾಹಿತಿ ಇಲ್ಲಿನ ರೈತರಿಗೆ ಸರಿಯಾಗಿ ಇಲ್ಲ. ಇದರೊಂದಿಗೆ ವ್ಯವಸ್ಥೆಯೂ ಇಲ್ಲಿಲ್ಲ. ಹೀಗಾಗಿ ಸಿಕ್ಕಷ್ಟು ಬೆಲೆಗೆ ಬೆಳೆ ಮಾರಾಟ ಮಾಡಿ ಬರುವಂತಹ ಪರಿಸ್ಥಿತಿ ರೈತರದ್ದು. ಇನ್ನು ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಫುಡ್‌ ಪ್ರೊಸೆಸಿಂಗ್‌ ಯುನಿಟ್‌ಗಳನ್ನು ಸ್ಥಾಪಿಸಬೇಕು. ಎಕ್ಸ್‌ಪೋರ್ಟ್‌ ಕ್ಲಸ್ಟರ್‌ ಕೇಂದ್ರವನ್ನಾಗಿ ಮಾಡಬೇಕು. ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೂ ಅನುಕೂಲವಾಗುತ್ತದೆ. ಮಧ್ಯವರ್ತಿಗಳ ಹಾವಳಿಯೂ ತಪ್ಪಿ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು ಎಂಬ ಬೇಡಿಕೆ ರೈತಾಪಿ ವರ್ಗದ್ದು.

ಹುಬ್ಬಳ್ಳಿ-ಅಂಕೋಲಾ ರೈಲು:

ಇನ್ನು ರೈಲ್ವೆ ಬಜೆಟ್‌ಗೆ ಸಂಬಂಧಪಟ್ಟಂತೆ ಕಳೆದ 67 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹಸಿರು ನಿಶಾನೆಯೇ ಸಿಗುತ್ತಿಲ್ಲ. ಸದ್ಯ ಇದಕ್ಕೆ ವನ್ಯಜೀವಿ ಮಂಡಳಿ ಆಕ್ಷೇಪಿಸಿದೆ ಎಂದು ಹೇಳಲಾಗುತ್ತಿದೆ. ಆದಕಾರಣ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇರುವ ಕಾರಣ ಈ ಸಮಸ್ಯೆಬಗೆಹರಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್‌ನಲ್ಲಿ ಈ ಯೋಜನೆಗೆ ಮೊದಲು ಹಣ ಮೀಸಲಿಡಬೇಕು. ವನ್ಯಜೀವಿ ಮಂಡಳಿಯಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.

ಇದರೊಂದಿಗೆ ಹುಬ್ಬಳ್ಳಿ- ಕಿತ್ತೂರು -ಬೆಳಗಾವಿ ರೈಲು ಸೇವೆ ಆರಂಭವಾಗಬೇಕೆಂದು ಬಹುವರ್ಷಗಳ ಬೇಡಿಕೆ. ಪ್ರಾಥಮಿಕ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಆದರೆ ಅಂತಿಮ ಸಮೀಕ್ಷೆ ಇನ್ನೂ ಆಗಿಲ್ಲ. ಆ ಕೆಲಸವೂ ಈ ಬಜೆಟ್‌ನಲ್ಲಿ ಆಗಬೇಕು.

ಹೊಸ ರೈಲುಗಳ ನಿರೀಕ್ಷೆ

ಹುಬ್ಬಳ್ಳಿ-ಮಂಗಳೂರು, ಹುಬ್ಬಳ್ಳಿ-ಪುಣೆ- ಮುಂಬೈ ಸೂಪರ್‌ ಫಾಸ್ಟ್‌, ಹುಬ್ಬಳ್ಳಿ- ಬೆಂಗಳೂರು ಇಂಟರ್‌ಸಿಟಿ (ಗದಗ- ಗುಂತಕಲ್‌ ಮಾರ್ಗವಾಗಿ), ಹುಬ್ಬಳ್ಳಿ -ಪುಣೆ ಇಂಟರ್‌ಸಿಟಿ, ಯಶವಂತಪುರ- ದೆಹಲಿ (ಗದಗ, ಬಾಗಲಕೋಟೆ, ಹುಬ್ಬಳ್ಳಿ ಮಾರ್ಗವಾಗಿ) ಹೊಸ ರೈಲುಗಳನ್ನು ಪರಿಚಯಿಸಬೇಕು. ಇದರೊಂದಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿ ಮಾಡಲು ವಿವಿಧ ಅಭಿವೃದ್ಧಿ ಕೆಲಸ ಮಾಡಬೇಕು. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಜನರದ್ದು.
ಇವುಗಳಿಗೆ ಕೇಂದ್ರ ಬಜೆಟ್‌ನಲ್ಲಿ ಎಷ್ಟು ಸ್ಪಂದನೆ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!.