Asianet Suvarna News Asianet Suvarna News

ಪಟಾಕಿ ದುಬಾರಿ : ಅಂಗಡಿಗಳು ಖಾಲಿ ಖಾಲಿ

ಬೆಳಕಿನ ಹಬ್ಬ ದೀಪಾವಳಿಯ ಪ್ರಧಾನ ಆಕರ್ಷಣೆಯಾಗಿದ್ದ ಪಟಾಕಿ ವರ್ಷದಿಂದ ವರ್ಷಕ್ಕೆ ಜನರಿಂದ ದೂರವಾಗುತ್ತಲೇ ಇದೆ. ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಬೆಲೆ ಮಾತ್ರ ಗಗನಮುಖಿಯಾಗುತ್ತಲೇ ಇದೆ.

People Not interested To Bye Crackers  For Deepavali snr
Author
First Published Oct 24, 2022, 4:57 AM IST

 ಮಂಡ್ಯ(ಅ.24): ಬೆಳಕಿನ ಹಬ್ಬ ದೀಪಾವಳಿಯ ಪ್ರಧಾನ ಆಕರ್ಷಣೆಯಾಗಿದ್ದ ಪಟಾಕಿ ವರ್ಷದಿಂದ ವರ್ಷಕ್ಕೆ ಜನರಿಂದ ದೂರವಾಗುತ್ತಲೇ ಇದೆ. ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಬೆಲೆ ಮಾತ್ರ ಗಗನಮುಖಿಯಾಗುತ್ತಲೇ ಇದೆ. ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಬಿಗಿಯಾದ ನಿಯಮಾವಳಿಗಳು ಮಾರಾಟಗಾರರು ಗ್ರಾಹಕರನ್ನು ಆಕರ್ಷಿಸಲಾಗದೆ ಅಂಗಡಿಗಳು ಭಣಗುಡುವಂತೆ ಮಾಡಿವೆ.

ಪಟಾಕಿಗಳಿಂದ (Crackers)  ಉಂಟಾಗಿರುವ ಅಪಾಯವನ್ನು ಅರಿತಿರುವ ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಖರೀದಿಸದೆ ಮಕ್ಕಳಿಗೆ (Children) ಅಪಾಯವಾಗದಂತಹ ಸಣ್ಣಪುಟ್ಟಪಟಾಕಿಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಕೊಳ್ಳುತ್ತಿದ್ದಾರೆ. ಲಕ್ಷ್ಮೇಪಟಾಕಿ, ಆಟಂಬಾಂಬ್‌, ರಾಕೆಟ್‌, ಡಬ್ಬಲ್‌ ಸೌಂಡ್‌ ಪಟಾಕಿ ಸೇರಿದಂತೆ ಭಾರೀ ಸದ್ದು ಮಾಡುವ ಪಟಾಕಿಗಳನ್ನು ಕೊಳ್ಳುವುದಕ್ಕೆ ಯಾರೂ ಆಸಕ್ತಿಯನ್ನೇ ತೋರದಿರುವುದರಿಂದ ಪಟಾಕಿಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ಕಂಡುಬರುತ್ತಿಲ್ಲವಾಗಿದೆ.

ಬೆಲೆ ಹೆಚ್ಚಳ:

ಪಟಾಕಿಗಳ ಬೆಲೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. ಪ್ರಸಕ್ತ ವರ್ಷ ಶೇ.35 ರಿಂದ 40ರಷ್ಟುಬೆಲೆ ಹೆಚ್ಚಳವಾಗಿದೆ. ಪಟಾಕಿ ಸಿಡಿಸುವವರ ಆಸಕ್ತಿಯೇ ಕಡಿಮೆಯಾಗಿರುವಾಗ ಬೆಲೆ ಹೆಚ್ಚಳವಾದರೆ ಕೊಳ್ಳಲು ಯಾರು ಬರುತ್ತಾರೆ ಎನ್ನುವುದು ವ್ಯಾಪಾರಸ್ಥರ ಅಳಲಾಗಿದೆ. ಹಸಿರು ಪಟಾಕಿಗಳನ್ನು ಸಿಡಿಸುವ ಕಚ್ಚಾ ಸಾಮಗ್ರಿಗಳ ಕೊರತೆ ಇರುವುದರಿಂದ ಅವುಗಳ ಉತ್ಪಾದನೆ ಕ್ಷೀಣಿಸಿದೆ.

ಇನ್ನು ಪಟಾಕಿಗಳನ್ನು ಉತ್ಪಾದನೆ ಮಾಡುವ ಕಂಪನಿಗಳು ಕಡ್ಡಾಯವಾಗಿ ಪಾಕೆಟ್‌ಗಳ ಮೇಲೆ ಗ್ರೀನ್‌ ಫೈರ್‌ ವರ್ಕ್ಸ್ ಎಂದು ಮುದ್ರಿಸಿರಬೇಕು. ಇಲ್ಲದಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಿಕ್ಕಿ ಹಾಕಿಕೊಂಡರೆ ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವರು. ಈ ಕಾರಣದಿಂದ ಅನೇಕ ಕಂಪನಿಗಳು ಪಟಾಕಿಗಳನ್ನು ಉತ್ಪಾದನೆಗೆ ಮುಂದಾಗಲಿಲ್ಲ.

ಅಂಗಡಿಗಳ ಕಡೆ ಮುಖ ಮಾಡದ ಗ್ರಾಹಕರು:

ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗಿರುವ ಪಟಾಕಿಗಳಿಗೆ ಬೆಲೆ ಹೆಚ್ಚಳವಾಗಿದೆ. ಸ್ಥಳೀಯ ಮಾರಾಟಗಾರರು ಶಿವಕಾಶಿಗೆ ಹೋಗಿ ಲಕ್ಷಾಂತರ ರು. ಮೌಲ್ಯದ ಪಟಾಕಿಯನ್ನು ತಂದು ಮಾರಾಟಕ್ಕಿಟ್ಟಿದ್ದಾರೆ. ಕೊಳ್ಳುವುದಕ್ಕೆ ಗ್ರಾಹಕರೇ ಅಂಗಡಿಗಳ ಕಡೆ ಮುಖ ಮಾಡುತ್ತಿಲ್ಲ. ಕೆಲವೇ ಕೆಲವು ಜನರು ಬಂದರೂ ಸಣ್ಣ ಪುಟ್ಟಪಟಾಕಿಗಳನ್ನು ಆರಿಸಿಕೊಂಡು ಹೋಗುತ್ತಿರುವುದರಿಂದ ಮಾರಾಟಗಾರರಿಗೆ ಅಂತಹ ಲಾಭವೇನೂ ಆಗುತ್ತಿಲ್ಲ.

ಪ್ರತಿ ಅಂಗಡಿಗೆ 30 ಸಾವಿರ ಖರ್ಚು:

ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ ಪಟಾಕಿ ಮಾರಾಟಗಾರರು ವ್ಯಾಪಾರ ಮಾಡುವುದಕ್ಕೆ ಒಂದು ಮಳಿಗೆಗೆ 25 ಸಾವಿರ ರು. ಕೊಟ್ಟು ನಗರಸಭೆಯಿಂದ ಏಳು ದಿನಗಳಿಗೆ ಅಂಗಡಿಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಒಟ್ಟು 21 ಮಳಿಗೆಗಳಿದ್ದು, ಅಗ್ನಿ ಶಾಮಕದಳದ ಪರವಾನಗಿ, ಆಕಸ್ಮಿಕ ಅವಘಡಗಳನ್ನು ತಡೆಯಲು ವಹಿಸಲು ಮುಂಜಾಗ್ರತೆ ಇನ್ನಿತರ ವೆಚ್ಚ ಸೇರಿ 30 ಸಾವಿರ ರು. ಆಗಲಿದೆ.

ದೀಪಾವಳಿ ಹಬ್ಬದ ಮುನ್ನಾ ದಿನವಾದ ಭಾನುವಾರ ರಜಾ ದಿನವಾಗಿದ್ದರಿಂದ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಟಾಕಿ ಖರೀದಿಗೆ ಬರುವರೆಂದು ಮಾರಾಟಗಾರರು ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಯಿತು. ಭಾನುವಾರದ ದಿನವೂ ಜನರಿಲ್ಲದೆ ಅಂಗಡಿಗಳು ಭಣಗುಡುತ್ತಿದ್ದವು.

ಕಳೆದ ವರ್ಷ ಕೊರೋನಾ ನಡುವೆಯೂ ಪಟಾಕಿ ವ್ಯಾಪಾರ ನಷ್ಟವಾಗದಂತೆ ನಡೆದಿತ್ತು. ಆದರೆ, ಈ ಬಾರಿ ಪಟಾಕಿಗಳ ಬೆಲೆ ಹೆಚ್ಚಳ ಆಗಿರುವುದರಿಂದ ಖರೀದಿಗೆ ಹೆಚ್ಚಿನ ಆಸಕ್ತಿ ಇಲ್ಲಿಯವರೆಗೆ ತೋರಿಸಿಲ್ಲ. ನರಕ ಚತುರ್ದಶಿಯ ದಿನವಾದ ಸೋಮವಾರದಿಂದ ಗ್ರಾಹಕರು ಪಟಾಕಿ ಅಂಗಡಿಗಳ ಕಡೆ ಸುಳಿಯಬಹುದೆಂಬ ಭಾವನೆಯಿಂದ ವ್ಯಾಪಾರಸ್ಥರು ಎದುರುನೋಡುತ್ತಿದ್ದಾರೆ.

ಪಟಾಕಿ ಬೆಲೆ ದುಬಾರಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಂದೆ ಬರುತ್ತಿಲ್ಲ. ನಿಯಮಾವಳಿಗಳು ಕಠಿಣವಾಗಿರುವುದರಿಂದ ಪಟಾಕಿಗಳ ಉತ್ಪಾದನೆಯೂ ಕಡಿಮೆಯಾಗಿದೆ. ಯುವಕರೂ ಮೊದಲಿನಂತೆ ಪಟಾಕಿ ಸಿಡಿಸಿ ಸಂಭ್ರಮಿಸಲು ಆಸಕ್ತಿ ತೋರದಿರುವುದರಿಂದ ವ್ಯಾಪಾರ ಕ್ಷೀಣಿಸಿದೆ.

- ಪರಮೇಶ್‌, ಅಧ್ಯಕ್ಷರು, ಪಟಾಕಿ ಮಾರಾಟಗಾರರ ಸಂಘ

ಭಾನುವಾರವಾಗಿದ್ದರಿಂದ ಪಟಾಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಜನರು ಅಂಗಡಿಗಳ ಕಡೆ ಸುಳಿಯುತ್ತಿಲ್ಲ. ಹಬ್ಬದ ದಿನವಾದ ಸೋಮವಾರದಿಂದ ಪಟಾಕಿಗಳ ಮಾರಾಟ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ. ಕಳೆದ ವರ್ಷ ಕೊರೋನಾ ನಡುವೆ ವ್ಯಾಪಾರ ನಷ್ಟವಿಲ್ಲದಂತೆ ನಡೆದಿತ್ತು.

- ಶೀತಲ್‌, ವ್ಯಾಪಾರಸ್ಥ

Follow Us:
Download App:
  • android
  • ios