ಉತ್ತರಕನ್ನಡ: ಸರ್ವರ್ ಸಮಸ್ಯೆ, ಜನಸಾಮಾನ್ಯರಿಗೆ ದಕ್ಕದ ಸರ್ಕಾರಿ ಸೇವೆ

ಆಗಾಗ ಕೈಗೊಡುವ ಸರ್ವರ್ ಸಮಸ್ಯೆಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ಸಣ್ಣ ಕೆಲಸಕ್ಕೆ ಮೂರ್ನಾಲ್ಕು ದಿನ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣ. 

People Not Get Government Service Due to Server Problem in Uttara Kannada grg

ಭರತ್‌ ರಾಜ್, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಫೆ.25): ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಬಹುತೇಕ ಇಲಾಖೆಗಳಲ್ಲಿ ಆನ್ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಅದರಂತೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯಲ್ಲಿ ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ ಇತ್ಯಾದಿ ಸೇವೆ ನೀಡಲಾಗುತ್ತದೆ. ಆದರೆ, ಕಳೆದ ಒಂದೂವರೆ ತಿಂಗಳಿಂದ ಜಿಪಿಎಸ್ ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಒಂದು ಅರ್ಜಿಯೂ ಇತ್ಯರ್ಥವಾಗದ ಪರಿಸ್ಥಿತಿ ಉಂಟಾಗಿದೆ. ಪ್ರತಿ ದಿನ ಸರತಿ ಸಾಲಿನಲ್ಲಿ ನಿಲ್ಲುವ ಜನರು ಕೊನೆಗೆ ಹೈರಾಣಾಗಿ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು, ರಾಜ್ಯ ಸರ್ಕಾರ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ಜನರಿಗೆ ಅವಶ್ಯವಿರುವ ದಾಖಲಾತಿಗಳನ್ನು ಪೂರೈಸಲು  ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕವೇ ಸರ್ಕಾರದ ವಿವಿಧ ಸೇವೆಗಳನ್ನು ನೀಡುತ್ತಿದ್ದು, ಜನರು ಕೂಡಾ ಈ ಮೂಲಕವೇ ಯಾವುದೇ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆಹಾರ, ನಾಗರಿಕ‌ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯಿಂದಲೂ ಪಡಿತರಕ್ಕೆ ಸಂಬಂಧಿಸಿದಂತೆ ಹೊಸ ಅರ್ಜಿ ಸ್ವೀಕಾರ, ಹೊಸ ಹೆಸರು ಸೇರ್ಪಡೆ, ಹೆಸರು ಡಿಲೀಟ್ ಮಾಡುವುದು, ವಿಳಾಸ ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಇತ್ಯಾದಿ ಸೇವೆಗಳನ್ನು ಆನ್‌ಲೈನ್ ಮೂಲಕವೇ ಒದಗಿಸಲಾಗುತ್ತದೆ. ಆದರೆ, ಕಳೆದ ಒಂದೂವರೆ ತಿಂಗಳಿಂದ ಕಾರವಾರ ಜನತೆಗೆ ಈ ಸೇವೆಗಳು ದೊರಕದಂತಾಗಿದೆ. ನಿತ್ಯವೂ ತಹಶೀಲ್ದಾರ್ ಕಚೇರಿಗೆ ನೂರಾರು ಜನರು ಅಲೆದಾಡುತ್ತಿದ್ದರೂ ದಿನಕ್ಕೆ ಒಂದೆರಡು ಅರ್ಜಿ ಮಾತ್ರ  ವಿಲೇವಾರಿಯಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಸಮಸ್ಯೆ ಕಾರಣ ನೀಡಿ ಅಸಹಾಯಕತೆ ತೋಡಿಕೊಳ್ಳುತ್ತಿದ್ದು, ನಿತ್ಯ ಕೆಲಸ ಕಾರ್ಯ ಬಿಟ್ಟು ದಿನವಿಡೀ ನಿಂತರೂ ಸೇವೆ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ ಎನ್ನುತ್ತಾರೆ ಜನರು.

Uttara Kannada: ಶಾಲೆಯಲ್ಲಿ ಕುಡಿಯುವ ನೀರು ಒದಗಿಸಲು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

ಇನ್ನು ಪಡಿತರ ಆನ್ಲೈನ್ ಸೇವೆ ಒದಗಿಸುವ ಸಂಬಂಧ ಎನ್ ಐಸಿ  ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಹಿಂದೆ ದಿನವೊಂದಕ್ಕೆ 70 ಅರ್ಜಿಗಳವರೆಗೆ ವಿಲೇವಾರಿ ಆಗುತಿತ್ತಾದ್ರೂ ಪ್ರಸ್ತುತ, ಒಂದು-ಎರಡು ಅರ್ಜಿ ಮಾತ್ರ ವಿಲೇವಾರಿಯಾಗುತ್ತಿದೆ. ಇದರಿಂದ ಜನಸಾಮಾನ್ಯರು ನಿತ್ಯವೂ ಪರದಾಡಬೇಕಾಗಿದೆ. ಈ ಬಗ್ಗೆ ಪ್ರತಿಕ್ರಯಿಸುವ ಅಧಿಕಾರಿಗಳು, ಸರ್ಕಾರ ಸೇವೆಯನ್ನು ಎನ್ ಐಸಿ ಕಂಪೆನಿಗೆ ಗುತ್ತಿಗೆ ನೀಡಿದ್ದು ಅವರು ನಿರ್ವಹಣೆ ಮಾಡುತ್ತಿದ್ದಾರೆ. ಇದರಿಂದ ಜಿಪಿಎಸ್ ಸರ್ವರ್ ಸಮಸ್ಯೆ ಎದುರಾಗಿದೆ. ಈಗಾಗಲೇ ಸಮಸ್ಯೆಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿಯೇ ಬಗೆಹರಿಸುವ ಭರವಸೆ ನೀಡಿದ್ದರು. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಇದೀಗ ಪೆಂಡಿಗ್ ಇರುವ 400ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಹಶೀಲ್ದಾರ್ ಶ್ರೀದೇವಿ ಭಟ್ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಆಗಾಗ ಕೈಗೊಡುವ ಸರ್ವರ್ ಸಮಸ್ಯೆಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ಸಣ್ಣ ಕೆಲಸಕ್ಕೆ ಮೂರ್ನಾಲ್ಕು ದಿನ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.

Latest Videos
Follow Us:
Download App:
  • android
  • ios