Asianet Suvarna News Asianet Suvarna News

ಅಂಕೋಲಾ: ಕಳ್ಳ ಗಣಪತಿ ಪ್ರತಿಷ್ಠಾಪನೆಗೂ ಕೊರೋನಾ ಅಡ್ಡಿ!

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿರುವ ವಿಶೇಷ ಪದ್ಧತಿ| ಕಳ್ಳ ಗಣಪತಿಯು ತಮ್ಮ ಮನೆ ಮುಂದೆ ಎಲ್ಲಿ ಪ್ರತಿಷ್ಢಾಪನೆಗೊಳ್ಳುತ್ತದೆಯೋ ಎಂಬ ಆತಂಕದಲ್ಲಿ ಅನೇಕರು ತಮ್ಮ ಮನೆಯ ಮುಂದೆ ಜಾಗರಣೆ ಮಾಡುತ್ತಾರೆ| 

People not Celebrate Ganesha Festival in Ankola in Uttara Kannada District
Author
Bengaluru, First Published Aug 21, 2020, 12:01 PM IST

ರಾಘು ನಾಯ್ಕ ಕಾಕರಮಠ

ಅಂಕೋಲಾ(ಆ.21): ಜಗತ್ತಿನ ಆದಿಪೂಜಿತ ಗಣಪನಿಗೆ, ಲಂಬೋಧರ, ವಿನಾಯಕ, ಏಕದಂತ, ಗಜಾನನ ಹೀಗೆ ಹಲವು ನಾಮಗಳಿವೆ. ಆದರೆ ಅಂಕೋಲಾದಲ್ಲಿ ಕಳ್ಳ ಗಣಪ ಎಂಬ ಬಿರುದಾಂಕಿತ ಗಣೇಶನೂ ಇದ್ದಾನೆ. ಹಾಗೆಂದು ನಮ್ಮ ಮುದ್ದು ಗಣಪ ಕಳ್ಳನಲ್ಲ. ತುಂಟಾಟದ ಯುವಕರು ಚವತಿಯ ಹಿಂದಿನ ರಾತ್ರಿ ಗಣೇಶನನ್ನು ಮನೆಯ ಮುಂದೆ ಕಳ್ಳತನದಲ್ಲಿಯೇ ಪ್ರತಿಷ್ಠಾಪಿಸುವುದರಿಂದ ಇಲ್ಲಿ ಕಳ್ಳ ಗಣಪ ಎಂದು ಕರೆಯಲಾಗುತ್ತದೆ. ಆದರೆ ಈ ವರ್ಷ ಕಳ್ಳ ಗಣಪತಿಯ ಆಚರಣೆಯ ಸಂತಸಕ್ಕೆ ಕೊರೋನಾ ಕೊಕ್ಕೆ ಹಾಕಿದ್ದು ನಿರಾಶೆ ಮೂಡಿಸಿದೆ.

ಏನಿದು ಆಚರಣೆ:

ಗಣಪತಿ ಮೂರ್ತಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪ್ರತಿಷ್ಠಾಪಿಸುವದಿಲ್ಲ. ಯಾರ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಮಾಡಲಾಗವುದಿಲ್ಲವೊ ಅಂತಹ ಮನೆಯನ್ನು ಊರಿನ ಯುವಕರು ಗುಪ್ತವಾಗಿ ಗುರುತಿಸಿ ಚವತಿ ಪಾಡ್ಯದ ಘಳಿಗೆ ಪ್ರಾರಂಭವಾಗುತ್ತಲೇ ರಾತ್ರಿ 12 ಗಂಟೆಯ ನಂತರ ಮನೆಯವರೆಲ್ಲರೂ ನಿದ್ದೆಗೆ ಜಾರಿದ ನಂತರ, ಮನೆಯ ಎದುರಿನ ತುಳಸಿ ಕಟ್ಟೆಯ ಮುಂದೆ, ಒಂದು ಪೂಜೆಯ ಸಾಮಾನಿನೊಂದಿಗೆ ಗಣಪನ ಮೂರ್ತಿಯನ್ನು ಕಳ್ಳತನದಲ್ಲಿಯೆ ಇಟ್ಟು, ಪಟಾಕಿ ಹೊಡೆದು ನಾಪತ್ತೆಯಾಗುತ್ತಾರೆ.

ಕುಮಟಾ: ಮುಳುಗಿದ ಬೋಟ್‌, ಮೀನುಗಾರರ ರಕ್ಷಣೆ, ತಪ್ಪಿದ ಭಾರೀ ಅನಾಹುತ

ಪಟಾಕಿಯ ಶಬ್ದಕ್ಕೆ ಮನೆಯವರು ಹೊರ ಬಂದು ನೋಡಿದರೆ, ಮನೆಯ ಮುಂದಿನ ತುಳಸಿ ಕಟ್ಟೆಯ ಎದುರು ಗಣಪ ಪತ್ಯಕ್ಷನಾಗಿರುತ್ತಾನೆ. ಗಣಪನನ್ನು ಕಂಡ ಕೂಡಲೇ ಏನು ಮಾಡಬೇಕೆಂದು ತೋಚದೆ ಮನೆಯ ಮುಂದೆ ಗಣಪನ ಮೂರ್ತಿಗೆ ಕಾವಲಿದ್ದು ಬೆಳಗ್ಗೆಯವರೆಗೆ ಕಾಯುತ್ತಾರೆ. ಗಣಪನನ್ನು ಇಟ್ಟುಕೊಳ್ಳುವವರು ಮನೆಯನ್ನು ಶುದ್ಧೀಕರಿಸಿ ಪೂಜೆ ಮಾಡಿ ಗಣಪನನ್ನು ಸ್ವಾಗತಿಸಿಕೊಳ್ಳುತ್ತಾರೆ. ಗಣಪನನ್ನು ಇಟ್ಟುಕೊಳ್ಳಲು ಅಡಚಣೆಯಾದವರು ಮನೆಯ ಮುಂದಿನ ತುಳಸಿ ಕಟ್ಟೆಯ ಮುಂದೆ ವಿಶೇಷ ಪೂಜೆ ಸಲ್ಲಿಸಿ ವಿದಾಯ ಸಲ್ಲಿಸುತ್ತಾರೆ.

ಕಳ್ಳ ಗಣಪತಿಯನ್ನು ಇಟ್ಟುಕೊಂಡು ಪೂಜಿಸುವವರು, ರಾತ್ರಿ ಮೂರ್ತಿ ಇಟ್ಟು ನಾಪತ್ತೆಯಾದ ಯುವಕರ ತಂಡವನ್ನು ಪತ್ತೆ ಹಚ್ಚಿ ಅವರಿಗೆ ಸಾಂಪ್ರದಾಯಿಕವಾಗಿ ಗೌರವಿಸುವ ಪ್ರತೀತಿ ಸಹ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ.
ಕಳ್ಳ ಗಣಪತಿಯನ್ನು ಇಡುವ ಯುವಕರು ಗುಡಿಗಾರರಲ್ಲಿ ಚವತಿ ಹಬ್ಬದ ಒಂದು ತಿಂಗಳ ಕಾಲದ ಹಿಂದೆಯೇ ತೆರೆಳಿ ಕಳ್ಳ ಗಣಪತಿಯ ಮೂರ್ತಿಯನ್ನು ಸಿದ್ಧ ಪಡಿಸಲು ವೀಳ್ಯದೆಲೆ ನೀಡಿ ಬರುತ್ತಾರೆ. ಪ್ರತಿ ವರ್ಷವು ತಾಲೂಕಿನಲ್ಲಿ ಕನಿಷ್ಠ 20 ಕಳ್ಳ ಗಣಪತಿಯ ಮೂರ್ತಿಗಳು ತಯಾರಾಗುತ್ತಿದ್ದವು. ಆದರೆ, ಪ್ರಸಕ್ತ ವರ್ಷ ಕೇವಲ ಮೂರೇ ಕಳ್ಳ ಗಣಪತಿಯ ಮೂರ್ತಿಗಳು ಗುಡಿಗಾರರ ಕೈಯಲ್ಲಿ ಅರಳಿರುವುದು, ಕಳ್ಳ ಗಣಪತಿಯ ಆಚರಣೆಗೂ ವಿಘ್ನ ಎದುರಿಸುವ ಸಂದರ್ಭಕ್ಕೆ ಸಾಕ್ಷಿ ಒದಗಿಸಿದೆ.

ನಮ್ಮ ಪೂರ್ವಜರ ಕಾಲದಿಂದಲೂ ನಾವು ಕಳ್ಳ ಗಣಪತಿಯನ್ನು ಸಿದ್ಧಪಡಿಸುತ್ತ ಬಂದಿದ್ದೇವೆ. ಆದರೆ, ಈ ವರ್ಷ ಕೊರೋನಾ ಕಾರಣದಿಂದ ಒಂದೆರಡು ಮೂರ್ತಿಗಳನ್ನು ತಯಾರಿಸಲು ಮಾತ್ರ ಆರ್ಡರ್‌ ಬಂದಿದೆ. ಇತಂಹ ವಿಶಿಷ್ಠ ಆಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ಕಲಾಕಾರ ರಾಘು ಗುಡಿಗಾರ ಅವರು ಹೇಳಿದ್ದಾರೆ.  

ನಾವು ಕಳ್ಳ ಗಣಪತಿಯನ್ನು ಅನೇಕ ವರ್ಷಗಳಿಂದ ಯಾರಿಗೂ ತಿಳಿಯದಂತೆ ಇಟ್ಟು, ಸಂಪ್ರದಾಯ ಮುಂದುವರೆಸಿಕೊಂಡು ಬರುತ್ತೀದ್ದೇವೆ. ಆದರೆ ಪ್ರಸಕ್ತ ವರ್ಷ ಕೊರೋನಾದಿಂದ ನಮ್ಮ ಹುಮ್ಮಸ್ಸಿಗೆ ತಣ್ಣೀರು ಎರಚಿದಂತಾಗಿದೆ ಎಂದು ಪ್ರಪ್ಪು ನಾಯಕ ಕಾಕರಮಠ ಅವರು ಹೇಳಿದ್ದಾರೆ. 

ಕಳ್ಳ ಗಣಪತಿಗೆ ಹೆದರಿ ಜಾಗರಣೆ ;

ಕಳ್ಳ ಗಣಪತಿಯು ತಮ್ಮ ಮನೆ ಮುಂದೆ ಎಲ್ಲಿ ಪ್ರತಿಷ್ಢಾಪನೆಗೊಳ್ಳುತ್ತದೆಯೋ ಎಂಬ ಆತಂಕದಲ್ಲಿ ಅನೇಕರು ತಮ್ಮ ಮನೆಯ ಮುಂದೆ ಜಾಗರಣೆ ಮಾಡುತ್ತಾರೆ. ಈ ಜಾಗರಣೆಯ ಕಣ್ಣು ತಪ್ಪಿಸಿಯೂ ಯುವಕರ ತಂಡ ಕಳ್ಳ ದಾರಿಯಿಂದ ಗಣಪನನ್ನು ತಂದು ಇಡಲು ಹೊಂಚು ಹಾಕುತ್ತಾರೆ. ಒಟ್ಟಾರೆ ಕಳ್ಳತನದಿಂದಲೆ ಗಣಪ ಮನೆಗೆ ಬರುವದರಿಂದ ವಿಘ್ನೇಶನಿಗೆ ಕಳ್ಳ ಗಣಪತಿ ಎಂಬ ಪಟ್ಟ ಇಲ್ಲಿ ಜಗಜಾಹಿರ.
 

Follow Us:
Download App:
  • android
  • ios