Asianet Suvarna News Asianet Suvarna News

ಹಾಸನ: ಉಪದ್ರ ಕಾಡುಪ್ರಾಣಿಗಳ ತಾಣವಾಗುತ್ತಿದೆ ಸಕಲೇಶಪುರ

ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಸಕಲೇಶಪುರ ತಾಲೂಕು ವನ್ಯಜೀವಿಗಳು ಹಾಗೂ ಜನರಿಗೆ ತೊಂದರೆ ಕೊಡುವ ಕಾಡು ಪ್ರಾಣಿಗಳ ಆಶ್ರಯ ತಾಣವಾಗಿದೆ.

People Faces Problems for Wild Animals at Sakleshpura in Hassan grg
Author
First Published Dec 17, 2023, 3:00 AM IST

ಶ್ರೀವಿದ್ಯಾ ಸಕಲೇಶಪುರ

ಸಕಲೇಶಪುರ(ಡಿ.17):  ರಾಜ್ಯದ ವಿವಿಧ ಭಾಗಗಳಲ್ಲಿ ಜನರಿಗೆ ಉಪಟಳ ನೀಡುತ್ತಾ, ರೈತರ ಬೆಳೆಗಳನ್ನು ಹಾಳು ಮಾಡುವ ಬಹುತೇಕ ಕಾಡು ಪ್ರಾಣಿಗಳನ್ನು ಹಿಡಿದು ಕಡೆಗೆ ತಂದು ಬಿಡುವುದೇ ಪಶ್ಚಿಮಘಟ್ಟಕ್ಕೆ. ಹೀಗಾಗಿ ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಸಕಲೇಶಪುರ ತಾಲೂಕು ವನ್ಯಜೀವಿಗಳು ಹಾಗೂ ಜನರಿಗೆ ತೊಂದರೆ ಕೊಡುವ ಕಾಡು ಪ್ರಾಣಿಗಳ ಆಶ್ರಯ ತಾಣವಾಗಿದೆ.

ಇಂತಹದೊಂದು ಮಾತು ತಾಲೂಕಿನ ಜನರಿಂದ ಕೇಳಿಬರುತ್ತಿದ್ದು ರಾತ್ರೋರಾತ್ರಿ ಇಲ್ಲಿಗೆ ವಿವಿಧ ಪ್ರಾಣಿಗಳನ್ನು ತಂದು ಬಿಡುವ ಮೂಲಕ ಮಲೆನಾಡಿಗರ ಬದುಕಿನೊಂದಿಗೆ ಅರಣ್ಯ ಇಲಾಖೆ ಆಟವಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಪೂರ್ಣ ಮಲೆನಾಡು ಪ್ರದೇಶ ಹೊಂದಿರುವ ತಾಲೂಕು ೨,೮,೩೭೨ ಚ ಕಿ.ಮಿ ವಿಸ್ತೀರ್ಣ ಹೊಂದಿದ್ದರೆ, ೨೦೧೧ ರಜನಗಣತಿಯಂತೆ ತಾಲೂಕಿನಲ್ಲಿ ೧,೨೮,೬೩೩ ಜನಸಂಖ್ಯೆ ಇದೆ. ಹಾಸನ ತಾಲೂಕಿನ ಪ್ರತಿ ಕಿ.ಮಿನಲ್ಲಿ ೬೮೦ ಜನಸಾಂದ್ರತೆ ಇದ್ದರೆ, ಸಕಲೇಶಪುರ ತಾಲೂಕಿನಲ್ಲಿ ಪ್ರತಿ ಕಿ.ಮೀ. ೧೨೫ ಜನರು ಮಾತ್ರ ವಾಸಿಸುತ್ತಿದ್ದು ಇತರೆ ತಾಲೂಕುಗಳಿಗೆ ಹೋಲಿಸಿದರೆ ಜನಸಾಂದ್ರತೆ ಅತ್ಯಂತ ಕಡಿಮೆ. ತಾಲೂಕಿನಗಡಿ ಸಾಕಷ್ಟು ಪಶ್ಚಿಮಘಟ್ಟವನ್ನು ಹೊಂದಿರುವುದನ್ನು ಬಂಡವಾಳ ಮಾಡಿಕೊಂಡಿರುವ ಇತರೆ ಜಿಲ್ಲೆಯ ಅರಣ್ಯ ಇಲಾಖೆಗಳು ತಾಲೂಕಿನ ಪಶ್ಚಿಮಘಟ್ಟದಂಚಿನ ಪ್ರದೇಶಗಳಿಗೆ ಅನುಪಯುಕ್ತ ಹಾಗೂ ಅಪಾಯಕಾರಿಯಾದ ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಈ ಪ್ರಾಣಿಗಳು ಆಹಾರಕ್ಕಾಗಿ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಡಿಮಠದ ಶ್ರೀಗೆ ಆಹ್ವಾನ!

ಹುಲಿ- ಚಿರತೆ:

ತಾಲೂಕಿನ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯ ವ್ಯಾಪ್ತಿ ಸಾಕಷ್ಟು ಪಶ್ಚಿಮಘಟ್ಟದಂಚಿಗೆ ಹೊಂದಿಕೊಂಡಿದ್ದು ಈ ಭಾಗದ ಹಲವು ಗ್ರಾಮಗಳಲ್ಲಿ ಹುಲಿಗಳು ಸಂಚಾರ ನಡೆಸಿ ಸಾಕಷ್ಟು ಜಾನುವಾರುಗಳನ್ನು ತಿನ್ನುವ ಮೂಲಕ ಜನರ ನಿದ್ರೆಗೆಡಿಸಿದ್ದರೆ ಚಿರತೆಗಳು ಸಹ ಅಲ್ಲಲ್ಲಿ ಪ್ರತ್ಯಕ್ಷಗೊಂಡು ಮಲೆನಾಡಿಗರ ನೆಮ್ಮದಿಗೆ ಭಂಗ ತಂದಿವೆ. ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಸೆರೆ ಹಿಡಿಯಲಾದ ಎರಡು ಚಿರತೆಗಳನ್ನು ಹೇಮಾವತಿ ನದಿ ದಂಡೆಗೆ ತಂದು ಬಿಡಲಾಗಿದ್ದು, ಸದ್ಯ ಹೇಮಾವತಿ ನದಿ ದಂಡೆಯಲ್ಲಿನ ಗ್ರಾಮಗಳ ಜನರ ನೆಮ್ಮದಿಗೆ ಕೊಳ್ಳಿ ಇಡಲಾಗಿದೆ.

ಜಾನುವಾರುಗಳ ಬೇಟೆಯಾಡುತ್ತಿರುವ ಚಿರತೆ ಸೆರೆಗೆ ಕಳೆದ ೧೦ ದಿನಗಳಿಂದ ಮಾವಿನಹಳ್ಳಿ ಗ್ರಾಮದಲ್ಲಿ ಬೋನ್‌ಗಳನ್ನಿಟ್ಟಿದ್ದರು ದಿನವೊಂದಕ್ಕೆ ಏಳು ಊರು ಸುತ್ತುವ ಚಿರತೆ ಸೆರೆ ಅಸಾದ್ಯವಾಗಿದೆ. ಇದರಿಂದಾಗಿ ಮಾವಿನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಸ್ಥರು ಒಂಟಿಯಾಗಿ ಕಾಫಿತೋಟಗಳಿಗೆ ಹೋಗಲು ಭಯಪಡುವ ವಾತಾವಾರಣ ನಿರ್ಮಾಣವಾಗಿದೆ.

ತಾಲೂಕಿಗೆ ಕೇರಳದ ಆನೆಗಳು: 

ರಾಜ್ಯದಲ್ಲಿ ಜಾನುವಾರುಗಳ ಸಾಕಾಣಿಕೆ ಮಾಡಿದಂತೆ ಕೇರಳ ರಾಜ್ಯದಲ್ಲಿ ಆನೆಗಳನ್ನು ಸಾಕುವುದು ವಾಡಿಕೆಯಾಗಿತ್ತು. ಹೆಚ್ಚಾಗಿ ಆನೆಗಳನ್ನು ಟಿಂಬರ್‌ ಎಳೆಯಲು ಬಳಸುತ್ತಿದ್ದ ಜನರಿಗೆ ಈಗ ಆಧುನಿಕ ಯಂತ್ರಗಳ ಬಳಕೆ ಹೆಚ್ಚಾದ ನಂತರ ಆನೆಗಳಿಗೆ ಕೆಲಸವಿಲ್ಲದೆ ಆನೆ ಸಾಕುವುದು ಬಾರದ ಕೆಲಸವಾಗಿದೆ. ಇದರಿಂದಾಗಿ ಕೇರಳದ ಆನೆಗಳನ್ನು ರಾತ್ರೋರಾತ್ರಿ ತಾಲೂಕಿಗೆ ತಂದು ಬಿಡಲಾಗುತ್ತಿದೆ. ಇದರಿಂದಾಗಿಯೇ ತಾಲೂಕಿನ ಆನೆಗಳ ಸಂಖ್ಯೆ ಅಗಣಿತವಾಗಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿದ್ದು, ಹೀಗೆ ತಂದು ಬಿಟ್ಟಿರುವ ಆನೆಗಳು ಸಾಮಾನ್ಯವಾಗಿ ಜನವಸತಿ ಪ್ರದೇಶದ ಸುತ್ತಮುತ್ತ ಸಂಚರಿಸುತ್ತ ಜನರು ಹಾಕಿದ ಆಹಾರವನ್ನು ತಿನ್ನುತ್ತಿವೆ. ಇವುಗಳ ಸಮೀಪ ಹೋದರು ತೊಂದರೆ ನೀಡುವುದಿಲ್ಲ ಎಂಬ ಮಾತುಗಳಿವೆ.

ವಿಷಕಾರಿ ಹಾವು -ಹೆಬ್ಬಾವು: 

ರಾಷ್ಟ್ರೀಯ ಹೆದ್ದಾರಿ ೭೫ ಶಿರಾಡಿಘಾಟ್‌ ಹಾವುಗಳನ್ನು ತಂದು ಬಿಟ್ಟುಹೋಗುವ ಪ್ರಮುಖ ತಾಣವಾಗಿದ್ದು ಮಂಡಲ, ನಾಗರಹಾವು ಸೇರಿದಂತೆ ಹಲವು ವಿಷಕಾರಿ ಹಾವುಗಳು ಕಾಡಂಚಿನ ಗ್ರಾಮಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತಿವೆ. ಇತ್ತೀಚೆಗೆ ರಕ್ಷಿದಿ ಗ್ರಾಮದಲ್ಲಿ ಕಳೆದೊಂದು ವಾರದಲ್ಲಿ ಸರ್ಕಾರಿ ಶಾಲೆಯ ಸಮೀಪವೇ ಎರಡು ಹೆಬ್ಬಾವುಗಳು ಕಾಣಿಸಿಕೊಂಡಿದ್ದು ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿರುವ ಹೆಬ್ಬಾವುಗಳನ್ನು ಬೇರೆಡೆಯಿಂದ ತಂದುಬಿಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಜೀವಭಯದಲ್ಲಿ ದಿನ ಕಳೆಯುವಂತೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಮಂಗಗಳ ಹಾವಳಿ: 

ಬಯಲು ನಾಡಿನಲ್ಲಿ ಉಪಟಳ ನೀಡುವ ಮಂಗಗಳನ್ನು ಪಶ್ಚಿಮಘಟ್ಟದ ಅರಣ್ಯಗಳಿಗೆ ತಂದು ಬಿಡಲಾಗುತ್ತಿದೆ. ಆದರೆ, ದಟ್ಟಾರಣ್ಯದಲ್ಲಿ ಆಹಾರ ಹುಡುಕಲು ವಿಫಲವಾಗುವ ಈ ಮಂಗಗಳು ಗ್ರಾಮಗಳಿಗೆ ಲಗ್ಗೆ ಇಡುವ ಮೂಲಕ ಸಿಕ್ಕಿದಲ್ಲೆ ಮುಕ್ಕುವ ಕೆಲಸ ಮಾಡುತ್ತಿರುವುದರಿಂದ ಬಾಳೆ, ಏಲಕ್ಕಿ, ತರಕಾರಿಯಂತ ಬೆಳೆಯನ್ನು ಬೆಳೆಯುದವುನ್ನೆ ರೈತರು ಬಿಡುವಂತಾಗಿದೆ. ತಾಲೂಕಿನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದ ಮಂಗಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಗಡಿದಾಟಿದ್ದು ಉಪಟಳ ಹೇಳದಂತಾಗಿದೆ.

ವಾರಸುದಾರರಿಲ್ಲದ ಕುದುರೆಗಳು: ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದ ಕುದುರೆಗಳಿಗೆ ಸದ್ಯ ಕೆಲಸವಿಲ್ಲದ ಕಾರಣ ತಾಲೂಕಿನ ಹಲವು ಗ್ರಾಮಗಳಿಗೆ ಕುದುರೆಗಳನ್ನು ರಾತ್ರೋರಾತ್ರಿ ತಂದು ಬಿಡಲಾಗುತ್ತಿದೆ. ಇದರಿಂದಾಗಿ ವಾರಸುದಾರರಿಲ್ಲದ ಕುದುರೆಗಳು ತಾಲೂಕಿನ ಅಲ್ಲಲ್ಲಿ ಗುಂಪುಗುಂಪಾಗಿ ಕಂಡು ಬರುತ್ತಿವೆ. ಹೀಗೆ ತಂದುಬಿಟ್ಟ ಕುದುರೆಗಳು ಯಥೇಚ್ಚವಾಗಿರುವ ಹುಲ್ಲು ತಿಂದು ಕೊಬ್ಬಿ ಮನುಷ್ಯರನ್ನು ಕಚ್ಚುವ ಮೂಲಕ ಜನರಿಗೆ ತೊಂದರೆ ನೀಡುತ್ತಿವೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಡಿಯಲಾಗುವ ಪ್ರಾಣಿಗಳನ್ನು ತಾಲೂಕಿಗೆ ತಂದು ಬಿಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.  

ಸಂಸತ್ ಭವನದಲ್ಲಿ ದಾಳಿ: ಹಾಸನದಲ್ಲಿ ಜಮೀನು ಹೊಂದಿರುವ ಮನೋರಂಜನ್‌ ಕುಟುಂಬ

ರಾತ್ರೋರಾತ್ರಿ ಅಪಾಯಕಾರಿ ಪ್ರಾಣಿಗಳನ್ನು ತಾಲೂಕಿಗೆ ತಂದು ಬಿಡುತ್ತಿರುವುದರಿಂದ ಇವುಗಳನ್ನು ಮತ್ತೆ ಸೆರೆಹಿಡಿಯುವ ಕೆಲಸವನ್ನು ನಾವು ಮಾಡಬೇಕಿದೆ. ಒಟ್ಟಿನಲ್ಲಿ ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಶ್ರಾಂತಿಎಂಬುದು ಮರೀಚಿಕೆಯಾಗಿದೆ ಎಂದು ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪ ತಿಳಿಸಿದ್ದಾರೆ.  

ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಮಾಣ ಹೆಚ್ಚಿದ್ದು ಒಂದು ಅಂದಾಜಿನ ಪ್ರಕಾರ ತಾಲೂಕಿನ ಪಶ್ಚಿಮಘಟ್ಟಕ್ಕೆ ತುಮಕೂರು, ಅರಸೀಕೆರೆ ಸೇರಿದಂತೆ ಹಲವೆಡೆಯಿಂದ ಕನಿಷ್ಠ ೩೦ಕ್ಕೂ ಅಧಿಕ ಚಿರತೆಗಳನ್ನು ತಂದು ಬಿಡಲಾಗಿದೆ. ಮೊದಲೇ ಕಾಡಾನೆಗಳೊಂದಿಗೆ ಸಂಘರ್ಷದಲ್ಲಿ ಜೀವಭಯದಲ್ಲಿ ದಿನ ಕಳೆಯುತ್ತಿರುವ ಜನರು ಈಗ ಅಪಾಯಕಾರಿ ಪ್ರಾಣಿಗಳಾದ ಹುಲಿ, ಚಿರತೆ, ಹಾವು, ಮಂಗಳಗಳಂತ ಪ್ರಾಣಿಗಳ ಸಮಸ್ಯೆಯನ್ನು ಎದುರಿಸಬೇಕಾಗಿದೆ.

Follow Us:
Download App:
  • android
  • ios