ಚಿತ್ರದುರ್ಗದಲ್ಲಿ ತಲೆನೋವಾದ ಗಣಿ ಲಾರಿಗಳು..!
* ನಿಯಮ ಮೀರಿ ಮೈನ್ಸ್ ಸರಬರಾಜು ಮಾಡುವ ಲಾರಿಗಳ ವಿರುದ್ಧ ಸ್ಥಳೀಯರ ಹಿಡಿಶಾಪ
* ದಾರಿಯುದ್ದಕ್ಕೂ ಸಾಲುಗಟ್ಟಿ ಓಡಾಡುವ ಗಣಿ ಲಾರಿಗಳು
* ಗಣಿಗಾರಿಕೆಯಿಂದ ಕೋಟೆನಾಡಿನ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.06): ಗಣಿನಾಡು ಅಂದ್ರೆ ಸಾಕು ಎಲ್ಲರಿಗೂ ತಟ್ಟನೇ ನೆನಪಾಗೋದು ಬಳ್ಳಾರಿ ಜಿಲ್ಲೆ. ಆದ್ರೆ ಬಳ್ಳಾರಯನ್ನೇ ಮೀರಿಸುವಂತೆ ನಿಯಮಬಾಹಿರವಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಲಾರಿಗಳ ಓಡಾಟದಿಂದ ಜನರು ಹೈರಾಣಾಗಿದ್ದಾರೆ.
ದಾರಿಯುದ್ದಕ್ಕೂ ಸಾಲುಗಟ್ಟಿ ಓಡಾಡುವ ಗಣಿ ಲಾರಿಗಳು
ಕೋಟೆನಾಡು ಚಿತ್ರದುರ್ಗದ ಭೀಮಸಮುದ್ರ ಗ್ರಾಮದ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 300 ರಿಂದ 400 ಅಡಿ ಆಳದವರೆಗೂ ಸುರುಳಿ ಸುರುಳಿ ಆಕಾರದಲ್ಲಿ ನಡೆಯುತ್ತಿರೋ ಕಬ್ಬಿಣದ ಗಣಿಗಾರಿಕೆಯನ್ನು ಖಾಸಗೀ ಗಣಿ ಕಂಪನಿಯೊಂದು ಯಾರ ಭಯವಿಲ್ಲದೇ ನಿಯಮಬಾಹಿರವಾಗಿ ನಡೆಸುತ್ತಿದೆಯಂತೆ. ಅಲ್ಲದೇ ಈ ಗಣಿಯಿಂದ ಪ್ರತಿದಿನ ಸಾವಿರಾರು ಲೋಡ್ ಮೈನ್ಸನ್ನು ನಿಯಮಬಾಹಿರವಾಗಿ ತುಂಬಿಕೊಂಡು ಬರುವ ಲಾರಿಗಳು, ವೇಗದ ಮಿತಿಯಿಲ್ಲದೇ ಸಾಗುತ್ತವೆ. ಹೀಗಾಗಿ ರಸ್ತೆ ಬದಿಯ ಜಮೀನಿನಲ್ಲಿರುವ ಬಾಳೆ, ಮೆಕ್ಕೆಜೋಳ, ಸೂರ್ಯಕಾಂತಿಸೇರಿದಂತೆ ವಿವಿಧ ಬೆಳೆಗಳು ಸರ್ವನಾಶವಾಗ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ, ಅಲ್ಲದೇ ಈ ಲಾರಿಗಳ ಓಡಾಟದಿಂದ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚುಮಾಡಿ ನಿರ್ಮಾಣ ಮಾಡಿರೋ ರಸ್ತೆಗಳು ಕೆಲವೇ ದಿನಗಳಲ್ಲಿ ಹಾಳಾಗ್ತಿವೆ.
CHITRADURGA ಜಿಲ್ಲೆಯ ಹಲವೆಡೆ ಚಿರತೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ಈ ಬಗ್ಗೆ ಸ್ಥಳೀಯ ಶಾಸಕ ತಿಪ್ಪಾರೆಡ್ಡಿಯವ್ರೇ ಈ ಹಿಂದೆ ಗಣಿ ಕಂಪನಿಗಳ ವಿರುದ್ಧ ಕಿಡಿಕಾರಿದ್ರೂ ಕೂಡ ಪ್ರಯೋಜನವಾಗಿಲ್ಲ. ಅಕ್ರಮ ಗಣಿಗಾರಿಕೆ ಹಾಗೂ ನಿಯಮ ಬಾಹಿರವಾಗಿ ಓಡಾಡುವ ಲಾರಿಗಳ ಓಡಾಟ ನಿಂತಿಲ್ಲ. ಹೀಗಾಗಿ ಕೋಟೆನಾಡಿನ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಈ ಅಕ್ರಮಕ್ಕೆ ಬ್ರೇಕ್ ಹಾಕದಿದ್ರೆ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಭೀಮಸಮುದ್ರ, ಹಿರೇಗುಂಟನೂರು, ಮಾನಂಗಿ, ಹಾಗೂ ಸಿದ್ದಾಪುರ ಗ್ರಾಮಗಳ ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುವ 10 ಕಿಲೋಮೀಟರ್ ರಸ್ತೆ ನರಕಕ್ಕೆ ಸಮ ಎನ್ನುವಂತಾಗಿದೆ. ಅಲ್ಲದೇ ಅಕ್ಕಪಕ್ಕದ ಜಮೀನು ಗಳ ರೈತರಿಗೆ ಈ ಗಣಿಗಾರಿಕೆ ಕಂಟಕವಾಗಿದೆ ಈ ಬಗ್ಗೆ ಗಣಿಗಾರಿಕೆ ಸಚಿವ ಹಾಲಪ್ಪ ಆಚಾರ್ ಅವರನ್ನು ಕೇಳಿದಾಗ, ಅಕ್ರಮಕ್ಕೆ ಬ್ರೇಕ್ ಹಾಕೋದು ಪೊಲೀಸರು ಹಾಗೂ ಆರ್ ಟಿಓ ಅಧಿಕಾರಿಗಳ ಕೆಲಸ. ಅದನ್ನು ಚಾಚು ತಪ್ಪದೇ ಎಲ್ಲರೂ ಪಾಲಿಸಬೇಕು. ಹಾಗೂ ನಿಯಮಬಾಹಿರವಾಗಿ ಓಡಾಡುವ ಲಾರಿಗಳ ಅಕ್ರಮ ತಡೆಯಲು ಅಗತ್ಯವಿರುವ ಜಿಪಿಎಸ್ ಅಳವಡಿಸಿ ಗಣಿ ಅಕ್ರಮಕ್ಕೆ ಬ್ರೇಕ್ ಹಾಕುವುದಾಗಿ ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದ್ದಾರೆ.
ಒಟ್ಟಾರೆ ಗಣಿಗಾರಿಕೆಯಿಂದ ಕೋಟೆನಾಡಿನ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಜಮೀನಿನಲ್ಲಿ ಬೆಳೆದ ಬೆಳೆ ಹಾಳಾಗ್ತಿದೆ. ರಸ್ತೆಗಳು ವಿನಾಶದ ಅಂಚಿನಲ್ಲಿವೆ, ಹೀಗಾಗಿ ವೇಗವಾಗಿ ಓಡಾಡುವಗಣಿ ಲಾರಿಗಳ ಮದ್ಯೆ ಜನರು ಆತಂಕದಿಂದ ಓಡಾಡುವಂತಾಗಿದ್ದೂ, ನಿಯಮ ಬಾಹಿರವಾಗಿ ಓಡಾಡುವ ಗಣಿ ಲಾರಿಗಳ ಓಡಾಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿದೆ.