ಬಳ್ಳಾರಿ(ಏ.12): ನಗರ ಸೇರಿದಂತೆ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸು​ತ್ತಿ​ರು​ವ​ವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ವಿನಾಕಾರಣ ಹೊರಗಡೆ ಓಡಾಡುವವರನ್ನು ಲಾಠಿ ಮೂಲಕ ನಿಯಂತ್ರಿಸುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

ನಗರದ ಕಪ್ಪಗಲ್‌ ರಸ್ತೆ, ಸುಧಾ ಕ್ರಾಸ್‌, ಮೀನಾಕ್ಷಿ ವೃತ್ತ, ಶ್ರೀಕನಕದುರ್ಗಮ್ಮ ವೃತ್ತ ಸೇರಿದಂತೆ ಅನೇಕ ಕಡೆ ಜನರಿಗೆ ಲಾಠಿ ಏಟು ನೀಡುತ್ತಿರುವ ದೃಶ್ಯಗಳು ಶನಿವಾರ ಕಂಡು ಬಂದವು. ಜನರ ನಿರ್ಲಕ್ಷ್ಯದಿಂದ ತೀವ್ರ ಬೇಸರಗೊಂಡಿರುವ ಪೊಲೀಸರು ಅನೇಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಗೆ ಕಳಿಸುತ್ತಿರುವುದು ಕಂಡು ಬಂತು.

ಕೊರೋನಾ ಕಾಟ: ಆಹಾರ ಸಿಗದೆ ಲೈಂಗಿಕ ಕಾರ್ಯಕರ್ತೆಯರ ಪರದಾಟ!

ನಗರದ ಒಳ ರಸ್ತೆಗಳಲ್ಲಿ ಬ್ಯಾರಿಕೇಡ್‌ ನಿರ್ಮಿಸಿ ಜನರ ಓಡಾಟವನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಹರಸಾಹಸ ಮಾಡುತ್ತಿದೆ. ಆದಾಗ್ಯೂ ಜನರ ನಿಯಂತ್ರಣ ಪೊಲೀಸರಿಗೆ ಕಷ್ಟ ಸಾಧ್ಯವಾಗಿ ಪರಿಣಮಿಸಿದೆ.

ಬೆಳಗ್ಗೆಯೇ ಓಡಾಟ ಹೆಚ್ಚು

ಬೆಳಗ್ಗೆ 6 ಗಂಟೆಯಿಂದಲೇ ಜನರ ಓಡಾಟ ಶುರುವಾಗುತ್ತಿದ್ದು, ಪೊಲೀಸರು ಲಾಠಿ ಬೀಸುವ ವರೆಗೆ ವಿನಾಕಾರಣದ ತಿರುಗಾಟ ಕಂಡು ಬರುತ್ತದೆ. 11 ಗಂಟೆಯ ಬಳಿಕ ಮನೆಯಿಂದ ಹೊರಗಡೆ ಬರಬಾರದು ಎಂದು ಸೂಚನೆ ನೀಡಿದ್ದಾಗ್ಯೂ ನಿಯಂತ್ರಣ ಸಾಧ್ಯವಾಗಿಲ್ಲ. ಹೊರಗಡೆ ಓಡಾಡುವ ಚಾಳಿ ಮೈಗೂಡಿಸಿಕೊಂಡಿರುವವರ ಬೈಕ್‌ಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಜಿಲ್ಲೆಯಲ್ಲಿ ಮುಂದುವರಿದಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು ಬೈಕ್‌ಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ಸೀಜ್‌ ಮಾಡಿದೆ. ಬರೀ ಲಾಠಿ ಏಟಿಗೆ ಜನರು ಮಾತು ಕೇಳುವುದಿಲ್ಲ ಎಂದು ವಾಹನಗಳನ್ನು ಸೀಜ್‌ ಮಾಡುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರ ಅಳಲು.

ಸೋಂಕಿತ ಪ್ರದೇಶದ ಕಡೆ ಗಮನ

ಜಿಲ್ಲೆಯ ಹೊಸಪೇಟೆಯ ಎಸ್‌.ಆರ್‌. ನಗರ, ಬಳ್ಳಾರಿಯ ಗುಗ್ಗರಹಟ್ಟಿಪ್ರದೇಶ ಹಾಗೂ ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಗಮನ ನೀಡಲಾಗಿದ್ದು, ಮನೆ ಮನೆ ಸಮೀಕ್ಷೆ ಹಾಗೂ ಸೋಂಕು ನಿಯಂತ್ರಣ ಔಷಧಿ ಸಿಂಪಡಣೆ ಕಾರ್ಯ ಮುಂದುವರಿದಿದೆ. ಸೋಂಕಿತ ಪ್ರದೇಶದ ನಿವಾಸಿಗಳು ಯಾರೂ ಹೊರಗಡೆ ಬರದಂತೆ ಹಾಕಿರುವ ನಿರ್ಬಂಧ ಸಡಿಲಗೊಳಿಸಿಲ್ಲ. ಸೋಂಕು ಹಬ್ಬದಂತೆ ತಡೆಯಲು ಸೋಂಕಿತರು ಕಂಡು ಬರುವ ಪ್ರದೇಶದಲ್ಲಿ ಮತ್ತಷ್ಟೂ ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಹಂತದ ಕಾರ್ಯ ಯೋಜನೆ ಕುರಿತು ಜಿಲ್ಲಾಡಳಿತ ಚರ್ಚೆ ನಡೆಸಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಒಪಿಡಿ ಸೇವೆ

ನಗರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇದ್ದು, ಖಾಸಗಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಚಿಕಿತ್ಸೆ ಮುಂದುವರಿದಿದೆ. ಗ್ರಾಮೀಣ ಭಾಗದಿಂದ ಆರೋಗ್ಯ ಸಮಸ್ಯೆಯಿಂದಾಗಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಖಾಸಗಿ ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ನೀಡುತ್ತಿರುವುದರಿಂದ ಜನರ ಓಡಾಟ ಅಲ್ಲಲ್ಲಿ ಕಂಡು ಬರುತ್ತಿದೆ. ಇನ್ನು ಸಾರ್ವಜನಿಕರು ಹೊರಗಡೆ ಬರದಂತೆ ತಡೆಯಲು ನಗರದ ಭಾರತೀಯ ವೈದ್ಯಕೀಯ ಸಂಘ ಹಮ್ಮಿಕೊಂಡಿರುವ ಮೊಬೈಲ್‌ ಕನ್ಸಲ್ಟೇಷನ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ವೈದ್ಯರ ಸಂಖ್ಯೆಯನ್ನು ನೀಡಲಾಗಿದ್ದು ನಿತ್ಯ ನೂರಾರು ಜನರು ಮೊಬೈಲ್‌ ಮೂಲಕ ಕನ್ಸಲ್ಟೇಷನ್‌ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಶನಿವಾರ ಜಿಲ್ಲೆಯಲ್ಲಿ 2446 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 115695 ಜನರ ಆರೋಗ್ಯ ತಪಾಸಣೆ ಕಾರ್ಯ ಮಾಡಿದಂತಾಗಿದೆ. 60 ಜನರ ಗಂಟಲು ದ್ರವ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ಈ ವರೆಗೆ 309 ಜನರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ 225 ನೆಗೆಟೀವ್‌ ಹಾಗೂ 6 ಪಾಸಿಟೀವ್‌ ಬಂದಿದೆ. ಇನ್ನು 78 ಜನರ ವೈದ್ಯಕೀಯ ಪರೀಕ್ಷೆಯ ವರದಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದ್ದಾರೆ.

ಶನಿವಾರ 32 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. 1136 ಜನರನ್ನು ಈ ವರೆಗೆ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ 1097 ಜನರು 14 ದಿನಗಳು ಹಾಗೂ 198 ಜನರು 28 ದಿನಗಳನ್ನು ಪೂರೈಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.