Asianet Suvarna News Asianet Suvarna News

Landslide: ಬೆಂಗ್ಳೂರಲ್ಲಿ ದಿಢೀರ್‌ ಭೂಕುಸಿತ, ಕಕ್ಕಾಬಿಕ್ಕಿಯಾದ ಜನತೆ..!

*  ರವೀಂದ್ರ ಕಲಾಕ್ಷೇತ್ರ ಸಮೀಪ ದಿಢೀರ್‌ ಬಾಯ್ಬಿಟ್ಟ ರಸ್ತೆ
*  ಯಾವುದೇ ಕಾಮಗಾರಿ, ಒಳಚರಂಡಿ, ನೀರಿನ ಪೈಪ್‌ ಇಲ್ಲದಿದ್ದರೂ ಭೂಕುಸಿತ
*  ಜಲಮಂಡಳಿಮತ್ತು ಬಿಬಿಎಂಪಿ ಅಧಿಕಾರಿಗಳಿಂದ ಪರಿಶೀಲನೆ
 

People Anxiety Due to Landslide in Bengaluru grg
Author
Bengaluru, First Published Dec 17, 2021, 9:22 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.17):  ಯಾವುದೇ ಕಾಮಗಾರಿ ನಡೆಯದಿದ್ದರೂ, ಒಳಚರಂಡಿ, ನೀರಿನ ಪೈಪ್‌ಲೈನ್‌ಗಳಾಗಲೀ ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಎರಡು ಮೀಟರ್‌ನಷ್ಟು ಭೂಮಿ ಕುಸಿದ(Landslide) ಅಚ್ಚರಿಯ ವಿದ್ಯಮಾನ ನಗರದ ಜೆ.ಸಿ.ರಸ್ತೆಯಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ ರವೀಂದ್ರ ಕಲಾಕ್ಷೇತ್ರ ಸಮೀಪ ಈ ಘಟನೆ ನಡೆದಿದ್ದು ಸಾರ್ವಜನಿಕರು ಮತ್ತು ವಾಹನ ಸವಾರರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿತು. ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಿಲ್ಲ.

ಜಯನಗರ, ಬಸವನಗುಡಿ ಕಡೆಯಿಂದ ಕಾರ್ಪೊರೇಷನ್‌ ಮಾರ್ಗವಾಗಿ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಜೆ.ಸಿ.ರಸ್ತೆ ವಾಹನ ದಟ್ಟಣೆಯ ರಸ್ತೆಯಾಗಿದೆ. ಏಕಾಏಕಿ ಭೂಕುಸಿತದಿಂದ ಸಾರ್ವಜನಿಕರು ಮತ್ತು ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೇ ಮಧ್ಯಾಹ್ನದಿಂದ ಸಂಜೆಯವರೆಗೆ ವಾಹನ ದಟ್ಟಣೆಯಿಂದ ಸಂಚಾರಿ ಪೊಲೀಸರು(Traffic Police) ಪರದಾಡಿದರು. ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳು ಘಟನಾ ಸ್ಥಳದಿಂದ ದೂರದಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದರು.

Landslide in Karnataka: ಕರ್ನಾಟಕದಲ್ಲಿ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆ

ಅಧಿಕಾರಿಗಳಿಗೇ ಗೊಂದಲ:

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಂಗಳೂರು ಜಲಮಂಡಳಿ(Bengaluru Water Board) ಮತ್ತು ಬಿಬಿಎಂಪಿ(BBMP) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಭೂ ಕುಸಿತವುಂಟಾದ ಜಾಗದ ಸುತ್ತಮುತ್ತ ಯಾವುದೇ ನೀರಿನ ಪೈಪ್‌ಲೈನ್‌ ಒಡೆದು ನೀರು ಸೋರಿಕೆಯಾಗಿರಲಿಲ್ಲ. ಮೆಟ್ರೋ ಕಾಮಗಾರಿಯೂ ನಡೆಯುತ್ತಿಲ್ಲ. ಒಳಚರಂಡಿಯ ಪೈಪ್‌ಲೈನ್‌ನಿಂದಲೂ ನೀರು ಸೋರಿಕೆಯಾಗಿಲ್ಲ. ಆದರೂ ಈ ಜಾಗದಲ್ಲಿ ಭೂ ಕುಸಿತವಾಗಿದ್ದು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿತ್ತು.

ಪಾಲಿಕೆಯ ಮುಖ್ಯ ಎಂಜಿನಿಯರ್‌(ರಸ್ತೆ ಮತ್ತು ಮೂಲಸೌಕರ್ಯ) ಸಾವಿತ್ರಿ, ಬೆಂಗಳೂರು ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚೆನ್ನಪ್ಪಾಜಿ, ಬಿಬಿಎಂಪಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ರಾಜೀವ್‌ ಭೂಕುಸಿತಕ್ಕೆ ಕಾರಣವೇನೆಂದು ಪರಿಶೀಲಿಸಿದರು.

ಭೂ ಕುಸಿತವಾದ ಜಾಗದಲ್ಲಿ ಜೆಸಿಬಿಯಿಂದ ಮಣ್ಣನ್ನು ತೆಗೆಸಿ ನೋಡಲಾಗಿ ನೀರು ಬರುತ್ತಿರುವುದು ಕಂಡು ಬಂತು. ಬಹುಶಃ ಬೇರೆಲ್ಲೋ ಪೈಪ್‌ ಒಡೆದು ನೀರು ಸೋರಿಕೆಯಾಗಿರಬೇಕು ಆಥವಾ ಚರಂಡಿಯಿಂದಲೂ ಸೋರಿಕೆಯಾಗಿ ತೇವಾಂಶದಿಂದ ಮಣ್ಣು ಸಡಿಲಿಕೆಯಾಗಿ ಭೂ ಕುಸಿತವುಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಪತ್ತೆ ಕಾರ್ಯವನ್ನು ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಪೈಪ್‌ಲೈನ್‌ ಇಲ್ಲದಿರುವ ಬಗ್ಗೆ ಜಲಮಂಡಳಿ ಅನುಮತಿ ಪ್ರಮಾಣ ಪತ್ರ ಕೊಟ್ಟಿದ್ದು ಬಿಬಿಎಂಪಿಯಿಂದ ಭೂಕುಸಿತವಾದ ಜಾಗವನ್ನು ಮುಚ್ಚಲಾಗಿದೆ ಎಂದು ಮುಖ್ಯ ಎಂಜಿನಿಯರ್‌ ಸಾವಿತ್ರಿ ಅವರು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದರು.

ನಿರಂತರ ಮಳೆ ಕಾರಣ?

ಭೂ ಕುಸಿತವಾದ ಜಾಗದಲ್ಲಿ ಈ ಹಿಂದೆ ಬಾವಿ ಇದ್ದಿರಬಹುದು. ಈ ವರ್ಷ ನಿರಂತರವಾಗಿ ಮಳೆ(Rain) ಸುರಿದಿದ್ದರಿಂದ ಮಣ್ಣು ಸಡಿಲಗೊಂಡಿದ್ದು ಭೂ ಕುಸಿತವಾಗಿರಬಹುದು ಎಂಬ ಸಂಶಯವೂ ವ್ಯಕ್ತವಾಗಿದೆ. ಸೆ.16ರಂದು ವಿಧಾನಸೌಧದ ಸಮೀಪವೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಸುಮಾರು 10 ಅಡಿಗಳಷ್ಟು ಭೂ ಕುಸಿತವುಂಟಾಗಿದ್ದು, ಬಿಬಿಎಂಪಿಯಿಂದ ಗುಂಡಿಯನ್ನು ಮುಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

Landslides on Tirumala ghat: ಜಸ್ಟ್ ಮಿಸ್, 20 ಮಂದಿ ಪ್ರಣಾಪಾಯದಿಂದ ಬಚಾವ್

ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರಿನ ಪ್ರಮುಖ ಆರ್ಟೀರಿಯಲ್‌ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್‌ ಹಿಸ್ಟರ್‌ ನಿರ್ವಹಣೆ ಮಾಡಬೇಕು. ನಗರದ ಬೀದಿ ದೀಪಗಳಿಗೆ ಎಲ್‌ಇಡಿ ಲೈಟ್‌ ಅಳವಡಿಸಲು ಮರು ಟೆಂಡರ್‌ ಆಗುವವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡಬೇಕೆಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಪದೇ ಪದೇ ರಿಪೇರಿ ಮಾಡುತ್ತಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಆರ್ಟೀರಿಯಲ್‌ ರಸ್ತೆಗಳಲ್ಲಿ ನಡೆಯುವ ಕಾಮಗಾರಿಗಳ ಹಿಸ್ಟರಿ ನಿರ್ವಹಣೆಗೆ ಈಗಾಗಲೇ ಆಯುಕ್ತರಿಗೆ ಸೂಚಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಹಲವಾರು ಯೋಜನೆಗಳು ನಡೆಯುತ್ತಿದ್ದು, ಈ ಬಗ್ಗೆ ಪೂರ್ಣ ವಿವರದ ನಾಲ್ಕು ಸಾವಿರ ಪುಟಗಳ ಉತ್ತರವನ್ನು ಸಿಟಿಯಲ್ಲಿ ಒದಗಿಸಲಾಗಿದೆ. ಇದನ್ನು ಪರಿಶೀಲಿಸಿ ಸದಸ್ಯರು ಯಾವುದೇ ಸಲಹೆಗಳಿದ್ದರೆ ನೀಡಬಹುದು ಎಂದರು.

Follow Us:
Download App:
  • android
  • ios