ಭರದಿಂದ ನಡೀತಿದೆ ಮಂಗಳೂರಿನ ಮೊದಲ ಪಾದಚಾರಿ ಅಂಡರ್‌ಪಾಸ್‌

ಅಂಡರ್‌ಪಾಸ್‌ನಿಂದಾಗಿ ರಸ್ತೆ ದಾಟುವ ಹರಸಾಹಸಕ್ಕೆ ಬೀಳಲಿದೆ ಬ್ರೇಕ್‌| ಸೆಂಟ್ರಲ್‌ ರೈಲು ನಿಲ್ದಾಣ, ಮಿನಿ ವಿಧಾನಸೌಧ, ತಾಲೂಕು ಪಂಚಾಯಿತಿ, ಲೇಡಿಗೋಶನ್‌, ಕೇಂದ್ರ ಮಾರುಕಟ್ಟೆ ಮೊದಲಾದ ಕಡೆಗಳಿಗೆ ಸಾಗುವ ಪಾದಚಾರಿಗಳಿಗೆ ಅಂಡರ್‌ಪಾಸ್‌ ಉಪಯೋಗ| ಅಂಡರ್‌ಪಾಸ್‌ ಕಾಮಗಾರಿ 6 ಕೋಟಿ ರು. ವೆಚ್ಚ| 

Pedestrian Underpass Work Start in Mangaluru

ಮಂಗಳೂರು(ಡಿ.12): ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಇರುವಂತೆ ಪಾದಚಾರಿಗಳ ಅಂಡರ್‌ಪಾಸ್‌ ಈಗ ಮಂಗಳೂರಿನ ಹೃದಯ ಭಾಗದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ. ನಗರದ ಕುದ್ಮುಲ್‌ ರಂಗರಾವ್‌ ಪುರಭವನದ ಮುಂಭಾಗದ ಗಾಂಧಿ ಪಾರ್ಕ್‌ನಿಂದ ಸೆಂಟ್ರಲ್‌ ರೈಲು ನಿಲ್ದಾಣ ಕಡೆಗೆ ಮುಖ್ಯರಸ್ತೆ ಅಡಿಯಲ್ಲಿ ಅಂಡರ್‌ಪಾಸ್‌ ನಿರ್ಮಿಸುವ ಕಾಮಗಾರಿ ಸ್ಮಾರ್ಟ್‌ಸಿಟಿ ವತಿಯಿಂದ ಭರದಿಂದ ನಡೆಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಪ್ರದೇಶದಲ್ಲಿ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಸ್ತೆ ದಾಟಲು ಅನನುಕೂಲವಾಗುತ್ತಿತ್ತು. ಇದೀಗ ಅಂಡರ್‌ಪಾಸ್‌ನಿಂದಾಗಿ ರಸ್ತೆ ದಾಟುವ ಹರಸಾಹಸಕ್ಕೆ ಬ್ರೇಕ್‌ ಬೀಳಲಿದೆ. ಸೆಂಟ್ರಲ್‌ ರೈಲು ನಿಲ್ದಾಣ, ಮಿನಿ ವಿಧಾನಸೌಧ, ತಾಲೂಕು ಪಂಚಾಯಿತಿ, ಲೇಡಿಗೋಶನ್‌, ಕೇಂದ್ರ ಮಾರುಕಟ್ಟೆ ಮೊದಲಾದ ಕಡೆಗಳಿಗೆ ಸಾಗುವ ಪಾದಚಾರಿಗಳಿಗೆ ಅಂಡರ್‌ಪಾಸ್‌ ಉಪಯೋಗವಾಗಲಿದೆ.

ವಾಹನ ಸಂಚಾರ ನಿರ್ಬಂಧ: 

ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿಸರ್ಕಲ್‌ ರಸ್ತೆಯ ಅಡಿ ಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಲಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಎ.ಬಿ. ಶೆಟ್ಟಿಸರ್ಕಲ್‌ನಿಂದ ಕ್ಲಾಕ್‌ಟವರ್‌ನತ್ತ ಬರುವ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಅಂಡರ್‌ಪಾಸ್‌ನ ಒಟ್ಟು ಉದ್ದ 33 ಮೀ. ಮತ್ತು ಅಗಲ 10 ಮೀ. ಆಗಿದ್ದು, ಎತ್ತರ 4.5 ಮೀ. ಇರಲಿದೆ. ಅಂಡರ್‌ಪಾಸ್‌ನ ಎರಡೂ ಬದಿಗಳಲ್ಲಿ ಮೆಟ್ಟಿಲುಗಳು ಇರಲಿವೆ. ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಮೆಜೆಸ್ಟಿಕ್‌ನಂತೆ ವ್ಯವಸ್ಥೆ: 

ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಮೀಪದಲ್ಲಿರುವ ಅಂಡರ್‌ಪಾಸ್‌ ಮಾದರಿಯಲ್ಲಿ ಈ ಅಂಡರ್‌ಪಾಸ್‌ ಇರಲಿದೆ. ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಇಂತಹ ಅಂಡರ್‌ಪಾಸ್‌ ನಿರ್ಮಾಣವಾಗುತ್ತಿದೆ. ಎ.ಬಿ. ಶೆಟ್ಟಿ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗಿನ ರಸ್ತೆಯನ್ನು ಸ್ಮಾರ್ಟ್‌ ರೋಡ್‌ ಆಗಿ ಈಗಾಗಲೇ ಘೋಷಿಸಲಾಗಿದ್ದು, ಈ ರಸ್ತೆಯ ಸುಂದರೀಕರಣ ಕಾಮಗಾರಿಗಳೂ ನಡೆಯುತ್ತಿವೆ.

6 ಕೋಟಿ ರು. ವೆಚ್ಚ: 

ಅಂಡರ್‌ಪಾಸ್‌ ಕಾಮಗಾರಿ 6 ಕೋಟಿ ರು. ವೆಚ್ಚದ್ದಾಗಿದ್ದು, ಅದರಲ್ಲಿ 4.5 ಕೋಟಿ ರು.ನಲ್ಲಿ ಸಿವಿಲ್‌ ವರ್ಕ್, 4.34 ಲಕ್ಷ ರು.ನಲ್ಲಿ ಮಣ್ಣು ಅಗೆದು ತೆಗೆಯುವ ಕಾಮಗಾರಿ (ಲ್ಯಾಂಡ್‌ಸ್ಕೇಪ್‌ ವರ್ಕ್), ವಿದ್ಯುತ್‌ ಸಂಬಂಧಿತ ಕೆಲಸಗಳಿಗೆ 9.41 ಲಕ್ಷ ರು. ವೆಚ್ಚ ನಿಗದಿಗೊಳಿಸಲಾಗಿದೆ.

ಸ್ಕೈವಾಕ್‌ ರದ್ದು: 

ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಈ ಹಿಂದೆ ಸ್ಕೈವಾಕ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. 1.57 ಕೋಟಿ ರು. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 2016ರ ಆ.23ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಕಾರ್ಯಗತವಾಗದೆ ಬಾಕಿಯಾಗಿತ್ತು.

ಗಾಂಧಿ ಪಾರ್ಕ್ ಗತಿಯೇನು?

ಅಂಡರ್‌ಪಾಸ್‌ಗಾಗಿ ಈಗಾಗಲೇ ಗಾಂಧಿ ಪಾರ್ಕ್‌ನ ಒಂದು ಭಾಗವನ್ನು ಕತ್ತರಿಸಿ, ಮಣ್ಣು ಅಗೆಯುವ ಕೆಲಸ ಆರಂಭವಾಗಿದ್ದು, ಪಾರ್ಕ್‌ನ ಸೌಂದರ್ಯಕ್ಕೆ ಧಕ್ಕೆಯಾಗಿದೆ. ನಡುವೆ ಆಳೆತ್ತರದ ರಾಷ್ಟ್ರಪಿತನ ಪ್ರತಿಮೆ ಸುತ್ತಲೂ ನೆರಳು ನೀಡುವ ಮರಗಳು, ಕೂರಲು ಕಲ್ಲುಬೆಂಚು ದಾರಿಹೋಕರಿಗೆ ವಿಶ್ರಾಂತಿ ಪಡೆಯುವ ತಾಣವಾಗಿತ್ತು. ಇದೀಗ ಈ ಕಾಮಗಾರಿ ಮುಕ್ತಾಯ ಆಗುವಾಗ ಗಾಂಧಿ ಪಾರ್ಕ್‌ನ ಪರಿಸ್ಥಿತಿ ಏನಾದೀತು ಎನ್ನುವ ಆತಂಕ ಸಾರ್ವಜನಿಕರನ್ನು ಕಾಡಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಪುರಭವನದ ಬಳಿ ಚಾಲನೆ ನೀಡಲಾಗಿದೆ. ಹೆಚ್ಚಿನ ವಾಹನ ದಟ್ಟಣೆಯಿರುವ ಈ ರಸ್ತೆಯನ್ನು ದಾಟಲು ಪಾದಚಾರಿಗಳು ಪ್ರಾಯಾಸ ಪಡಬೇಕಿತ್ತು. ಅಂಡರ್‌ಪಾಸ್‌ ನಿರ್ಮಾಣ ಪಾದಚಾರಿಗಳಿಗೆ ಹೆಚ್ಚು ಸುರಕ್ಷಿತವಾಗಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ನಝೀರ್‌ ಅವರು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios