ಶಿವಮೊಗ್ಗ(ಜು.23): ಬಿದನೂರಿನ ಹೊಸನಗರದಲ್ಲಿ ಕಾಡು ಬಿಟ್ಟು ನಾಡಿಗೆ ಬಂದ ನವಿಲೊಂದು ಯಾವುದೇ ಭೀತಿಯಿಲ್ಲದೇ ಪೇಟೆ ರಸ್ತೆಯಲ್ಲಿ ಹಾರಾಡಿ, ಸಂಚರಿಸಿ ಜನರಲ್ಲಿ ಬೆರಗು ಮೂಡಿಸಿತು.

ತಾಲೂಕಿನ ಬಿದನೂರು ನಗರದ ಚಿಕ್ಕಪೇಟೆ ವೃತ್ತದಲ್ಲಿ ಮುಸ್ಸಂಜೆ ಹೊತ್ತಲ್ಲಿ ಡಾಂಬರ್‌ ರಸ್ತೆಯಲ್ಲಿ ಮಯೂರವೊಂದು ರಾಜಗಾಂಭೀರ್ಯದಲ್ಲಿ ನಡೆಯುತ್ತಿತ್ತು. ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಿದ್ದರೂ, ಯಾವುದೇ ಆತಂಕವಿಲ್ಲದೇ ನಡೆದು ಎಲ್ಲರ ಗಮನ ಸೆಳೆಯಿತು.

ಮೊಬೈಲ್, ಕ್ಯಾಮೆರಾಗಳಿಗೆ ಫೋಸು:

ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೂ ಕ್ಯಾರೆ ಎನ್ನದೆ ಸಂಜೆ ವಿಹಾರಕ್ಕೆ ಬಂದಂತೆ ರಸ್ತೆಯಲಿ ನಡೆಯುತ್ತಲೇ ಇತ್ತು. ಅಕ್ಕಪಕ್ಕಗಳ ಅಂಗಡಿಗಳತ್ತ ಬಂದು ಕುಡಿನೋಟ ಬೀರಿ, ಮತ್ತೆ ತನ್ನ ದಾರಿಯಲ್ಲಿ ಸಾಗಿ, ಜನರ ಗಮನ ತನ್ನೆಡೆಗೆ ಸೆಳೆಯಿತು. ಯಾವುದೇ ಅಳುಕು, ಅಂಜಿಕೆಯಿಲ್ಲದ ರಾಷ್ಟ್ರಪಕ್ಷಿ ನಡೆಯನ್ನು ಕಂಡ ಸುತ್ತಮುತ್ತಲಿನವರು ತಮ್ಮ ಮೊಬೈಲ್‌ನಲ್ಲಿ, ಕ್ಯಾಮೆರಾದಲ್ಲಿ ಆ ನವಿಲಿನ ಹತ್ತಿರ ಬಂದು ಫೋಟೋ ತೆಗೆಯುತ್ತಿದ್ದರು. ಆದರೂ ಭಯವೇ ಇಲ್ಲದೆ ಪಡದ ನವಿಲು ತರಹೇವಾರಿ ಭಂಗಿಗಳ ಫೋಸು ನೀಡಿ, ಎಲ್ಲರನ್ನು ಖುಷಿಪಡಿಸಿತು.

ನಗರದ ಚಿಕ್ಕಪೇಟೆ ಸರ್ಕಲ್‌ ಸ್ವಲ್ಪಮಟ್ಟಿನ ಜನನಿಬಿಡ ಪ್ರದೇಶ. ನವಿಲು ಕೂಡ ನಗರವಾಸಿಯಂತೆ ಗಾಂಭೀರ್ಯದಲ್ಲೇ ಸಂಜೆಯ ವಿಹಾರ ಮಾಡಿದ್ದು ಸ್ಥಳೀಯರ ರೋಮಾಂಚನಕ್ಕೆ ಕಾರಣವಾಗಿತ್ತು. ಸಂಜೆ ವಿಹಾರದ ನಂತರ ಮನೆಗಳ ಮೇಲ್ಚಾವಣಿಗಳ ಮೇಲೆ ಹಾರುತ್ತ ಕತ್ತಲು ಆವರಿಸುವ ತನಕ ಚಿಕ್ಕಪೇಟೆಯ ಸುತ್ತಮುತ್ತಲು ನಲಿದಾಡಿತು. ಬಳಿಕ ಕಾನನದತ್ತ ಹಾರಿತು.