ರೋಣ: ಎಕ್ಸೆಲ್ ಕಟ್ಟಾಗಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್, ತಪ್ಪಿದ ಭಾರೀ ದುರಂತ
* ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಬಳಿ ನಡೆದ ಘಟನೆ
* ಬಸ್ಸಿನಲ್ಲಿದ್ದ ನಾಲ್ವರಿಗೆ ಗಾಯ, 35 ಪ್ರಯಾಣಿಕರು ಪಾರು
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ರೋಣ(ಆ.05): ಸಾರಿಗೆ ಬಸ್ ಎಕ್ಸೆಲ್ ಪಾಟಾ ಧಿಡೀರ್ ತುಂಡಾದ ಪರಿಣಾಮ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿದ್ದು, ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬಸ್‌ನಲ್ಲಿದ್ದ 35 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕೊತಬಾಳ ಗ್ರಾಮದ ಬಳಿ ಸಂಭವಿಸಿದೆ.
ಗದಗ ಸಾರಿಗೆ ಡಿಪೋಗೆ ಸೇರಿರುವ ಬಸ್ ಗದಗದಿಂದ ರೋಣ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಕೊತಬಾಳ ಹತ್ತಿರ ಬಸ್ಸಿನ ಎಕ್ಸೆಲ್ ಪಾಟಾ ಕಟ್ಟಾಗಿದ್ದು, ತಕ್ಷಣವೇ ಚಾಲಕ ಸಿದ್ದು ಬಿರಾದಾರ ಸಮಯಪ್ರಜ್ಞೆಯಿಂದ ರಸ್ತೆಯ ಪಕ್ಕದ ಕಂದಕ್ಕಿಳಿಸಿದ್ದು, ಹೆಚ್ಚಿನ ಅನಾಹುತ ತಪ್ಪುವಂತಾಯಿತು.
ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಅಪಘಾತ: ಮೂವರ ದುರ್ಮರಣ
ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರನ್ನು ಕೆಳಗಿಳಿಸಿ, ಗಾಯಾಳುಗಳನ್ನು ಆರೋಗ್ಯ ರಕ್ಷಾ ವಾಹನ ಮೂಲಕ ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಕಳುಹಿಸಲಾಯಿತು. ಉಳಿದ ಪ್ರಯಾಣಿಕರೆಲ್ಲರನ್ನು ರೋಣ ಸಾರಿಗೆ ಡಿಪೋ ಬಸ್ ಮೂಲಕ ಬಾಗಲಕೋಟೆಗೆ ಕಳುಹಿಸಲಾಯಿತು. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.