Asianet Suvarna News Asianet Suvarna News

Kodagu: ಎರಡು ಕೋಟಿ ಮೌಲ್ಯದ ಪಾರ್ಕ್ ಜಾಗ ನುಂಗಿದ ಕುಡ ಅಧ್ಯಕ್ಷ

ಕೊಡಗು ಜಿಲ್ಲೆಯ  ಕುಶಾಲನಗರದ ಬಡಾವಣೆಯೊಂದರಲ್ಲಿ ಉದ್ಯಾನವನಕ್ಕಾಗಿ ಬಿಟ್ಟಿದ್ದ ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆಬಾಳುವ ಜಾಗವನ್ನು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ನುಂಗಿರುವ ಗಂಭೀರ ಆರೋಪ ಕೇಳಿ ಬಂದಿದೆ.

park land mining case against kushalnagar urban development authority president  gow
Author
First Published Dec 10, 2022, 7:37 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್ 

ಕೊಡಗು (ಡಿ.10): ಕೊಡಗು ಜಿಲ್ಲೆಯ ವಾಣಿಜ್ಯ ನಗರಿಯೆಂದೇ ಪ್ರಸಿದ್ಧವಾಗಿರುವ ಕುಶಾಲನಗರ ಅತೀ ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣ. ಇಲ್ಲಿನ ಬಡಾವಣೆಯೊಂದರಲ್ಲಿ ಉದ್ಯಾನವನಕ್ಕಾಗಿ ಬಿಟ್ಟಿದ್ದ ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆಬಾಳುವ ಜಾಗವನ್ನು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ನುಂಗಿರುವ ಗಂಭೀರ ಆರೋಪ ಕೇಳಿ ಬಂದಿದೆ. ಊರು ಕಾದು ಅಭಿವೃದ್ಧಿ ಮಾಡಿ ಎಂದು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಕುಶಾಲನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ ಚರಣ್ ಎದುರಿಸುತ್ತಿದ್ದಾರೆ.   ತಾಲೂಕು ಕೇಂದ್ರವಾಗಿರುವ ಕುಶಾಲನಗರದಲ್ಲಿ ಒಂದು ಸೆಂಟ್ ಜಾಗಕ್ಕೆ ಲಕ್ಷ ಲಕ್ಷ ಬೆಲೆ ಇದೆ.

ಹೀಗಾಗಿ 20 ಸೆಂಟ್ ಉದ್ಯಾನವನದ ಜಾಗವನ್ನು ಚರಣ್ ಅವರು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಪಟ್ಟಣದ ಬದ್ದುನ್ನೀಸಾ ಎಂಬುವರು 2001 ರಲ್ಲಿ 2 ಏಕರೆ 20 ಸೆಂಟು ಜಾಗವನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿ ಅದರಲ್ಲಿ 2 ಎಕರೆಯಷ್ಟು ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದರು. 20 ಸೆಂಟ್ ಜಾಗವನ್ನು ಉದ್ಯಾನವನಕ್ಕಾಗಿ ರಾಜ್ಯಪಾಲರ ಹೆಸರಿಗೆ ದಾನಪತ್ರ ಮಾಡಿ ಅಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಹಾಗೂ ಇಂದಿನ ಮಡಿಕೇರಿ ತಹಶೀಲ್ದಾರ್ ಆಗಿರುವ ಪಿ.ಎಸ್ ಮಹೇಶ್ ಅವರಿಗೆ ದಾಖಲೆ ಹಸ್ತಾಂತರಿಸಿದ್ದಾರೆ.

ಅಂದಿನಿಂದಲೂ ಉದ್ಯಾನವನದ ಜಾಗವಾಗಿಯೇ ಇದ್ದ 20 ಸೆಂಟ್ ಜಾಗವನ್ನು ಕಳೆದ ಆರು ತಿಂಗಳ ಹಿಂದೆ ಕುಶಾಲನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಂ.ಎಂ ಚರಣ್ ಅವರು ನಾಗಪ್ಪಶೆಟ್ಟಿ ಎಂಬುವರು ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ ಎರಡು ನಿವೇಶನ ಖರೀದಿಸಿದ್ದೇನೆ ಎಂದು ಉದ್ಯಾನವನದ ಜಾಗವನ್ನು ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

2001 ರಿಂದಲೂ ಇದು ಪಾರ್ಕ್ ಜಾಗವಾಗಿ ಇತ್ತು. ಆದರೆ ನಾಗಪ್ಪಶೆಟ್ಟಿ ಎನ್ನುವವರು ಬಡಾವಣೆ ಅಭಿವೃದ್ಧಿಪಡಿಸುವಾಗ ಈ ಜಾಗವನ್ನು ತಮ್ಮ ಜಾಗವೆಂದು ಒತ್ತುವರಿ ಮಾಡಿಕೊಂಡು ಚರಣ್ ಅವರಿಗೆ ಮಾರಾಟ ಮಾಡಿರಬಹುದು. ಇದರಿಂದ ಕುಶಾಲನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಚರಣ್ ಅವರು ಮೋಸ ಹೋಗಿರಬಹುದು. ಈ ಕುರಿತು ತನಿಖೆಯಾಗಲಿ ಎಂದು ಪಟ್ಟಣ ಪಂಚಾಯಿತಿ ಎರಡನೇ ಬ್ಲಾಕ್ ವಾರ್ಡಿನ ಸದಸ್ಯ ಪ್ರಮೋದ್ ಒತ್ತಾಯಿಸಿದ್ದಾರೆ. ಮತ್ತೊಂದೆರೆ ಬಡಾವಣೆ ಜನರು ಇದುವರೆಗೆ ಪಾರ್ಕ್ ಆಗಿಯೇ ಇತ್ತು. ಇಲ್ಲಿ ಉದ್ಯಾನವನದ ಜಾಗವೆಂದು ಬೋರ್ಡ್ ಕೂಡ ಹಾಕಲಾಗಿತ್ತು. ಆದರೆ ಕೆಲವು ವ್ಯಕ್ತಿಗಳು ಅದನ್ನು ತೆಗೆದು ನದಿಯ ದಂಡೆಯಲ್ಲಿ ಹಾಕಿದ್ದಾರೆ. ಈಗ ನಮ್ಮ ಬಡಾವಣೆಗೆ ಉದ್ಯಾನವೇ ಇಲ್ಲದಂತೆ ಆಗಿದೆ. ಇದನ್ನು ಮುನ್ಸಿಪಾಲಿಟಿಯವರು ಬಿಡಿಸಿಕೊಡಲಿ ಎಂದು ಒತ್ತಾಯಿಸಿದ್ದಾರೆ.

Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು

2022 ರ ಆಗಸ್ಟ್ ತಿಂಗಳಲ್ಲಿಯೂ ಇದೇ ಕುಶಾಲನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರವೇ ಅನುಮೋದನೆ ಮಾಡಿರುವ ನಕ್ಷೆಯಲ್ಲಿ ಬದ್ರುನ್ನೀಸಾ ಬಡಾವಣೆಯಲ್ಲಿ 20 ಸೆಂಟ್ ಜಾಗ ಉದ್ಯಾನವನದ ಜಾಗವಾಗಿಯೇ ಉಳಿದಿದೆ. ಆದರೆ ಅದೇ ಕುಡ ಅಧ್ಯಕ್ಷರಾಗಿರುವ ಚರಣ್ ಅವರು ಹೇಳುವುದೇ ಬೇರೆ. ಬದ್ರುನ್ನೀಸಾ ಅವರು 2 ಎಕರೆ ಜಾಗವನ್ನು ನಿವೇಶನವಾಗಿ ಪರಿವರ್ತನೆ ಮಾಡಿದ್ದಾರೆ. ಅದರಲ್ಲಿ ಪಾರ್ಕ್ ಜಾಗವನ್ನೇ ಬಿಟ್ಟಿರಲಿಲ್ಲ. ಆದರೆ ಅಂದು ಕುಶಾಲನಗರ ಗ್ರಾಮ ಪಂಚಾಯಿತಿಗೆ ಬರೆದುಕೊಡುವಾಗ 2 ಎಕರೆ 20 ಎಂಟ್ ಎಂದು ಬರೆದುಕೊಟ್ಟಿದ್ದಾರೆ.

Karnataka Legislative Assembly Election 2023: ಕೊಡಗಿನ ಬಿಜೆಪಿ ಸಕಲ ಸಿದ್ಧತೆ, ನಾಲ್ಕು ಸರ್ವೆಯಲ್ಲೂ ಶಾಸಕರು ಪಾಸ್

ಈಗಾಗಲೇ ನಾಗಪ್ಪ ಶೆಟ್ಟಿ ಬಡಾವಣೆ ಅಭಿವೃದ್ಧಿ ಆದ ಬಳಿಕ ನಾನು ಕೊಂಡುಕೊಂಡಿರುವ ಜಾಗವನ್ನು ಪಾರ್ಕ್ ಜಾಗವೆಂದು ಹೇಳುತ್ತಿದ್ದಾರೆ. ಇದು ರಾಜಕೀಯ ದುರುದ್ದೇಶಕ್ಕಾಗಿ ಮಾಡುತ್ತಿರುವ ಆರೋಪ ಎಂದಿದ್ದಾರೆ. ಉದ್ಯಾನವನಕ್ಕೆ ಜಾಗ ಬಿಡದೆ ಬಡಾವಣೆ ನಿರ್ಮಿಸಿದರೋ, ಇಲ್ಲ ಉದ್ಯಾನವನಕ್ಕೆ ಬಿಟ್ಟ ಜಾಗವನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲಾಗಿದೆಯೋ ಗೊತ್ತಿಲ್ಲ. ಏನೇ ಆದರೂ ಬಡಾವಣೆಯ ನಾಗರಿಕರ ಬಳಕೆಗೆ ಉಳಿಯಬೇಕಾಗಿದ್ದ ಬರೋಬ್ಬರಿ 2 ಕೋಟಿ ಮೌಲ್ಯದ ಜಾಗ ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಉಳ್ಳವರ ಪಾಲಾಗುತ್ತಿರುವುದಂತು ಸತ್ಯ.

Follow Us:
Download App:
  • android
  • ios