ಕೊಡಗು[ಜು.06]: ಪ್ರೀತಿಸಿ ಮದುವೆಯಾದ ಜೋಡಿಗೆ ಧರ್ಮ ಅಡ್ಡಿಯಾಗಿದೆ.  ಹೌದು ಪ್ರೀತಿಸಿ ಮದುವೆಯಾಗಿದ್ದ ತಮ್ಮ ಮಗಳನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆದೊಯ್ದ ಹೆತ್ತವರು ಈಗ ಆಕೆಯನ್ನು ಕಳುಹಿಸಿಕೊಡಬೇಕಾದರೆ, ನೀನು ಮತಾಂತರ ಆಗಬೇಕು ಎಮಬ ಕಂಡೀಷನ್ ಹಾಕಿದ್ದಾರೆ.

ಕಳೆದ ಏಳು ವರ್ಷಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ತಿರುಮಲಾಪುರ ನಿವಾಸಿ ಸಿದ್ದಲಿಂಗಸ್ವಾಮಿ ಹಾಗೂ ಶಿಫಾನಿ ಜ.19 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮದುವೆಯಾಗಿದ್ದರು.  ಸಿದ್ದಲಿಂಗಸ್ವಾಮಿ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆದರೆ ಈ ಮದುವೆ ಶಿಫಾನಿ ಪೋಷಕರಿಗೆ ಇಷ್ಟವಿರಲಿಲ್ಲ. 

ಹೀಗಾಗಿ ಮದುವೆಯಾದ ನಾಲ್ಕು ತಿಂಗಳಿಗೆ ಬಂದಿದ್ದ ರಂಜಾನ್ ಹಬ್ಬಕ್ಕೆಂದು ಶಿಫಾನಿ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ಆದರೆ ಹಲವಾರು ದಿನಗಳು ಕಳೆದಿದ್ದರೂ ಹೆಂಡತಿಯನ್ನು ಕಳುಹಿಸದಾಗ ಸಿದ್ದಲಿಂಗಸ್ವಾಮಿ ತಾನೇ ಖುದ್ದಾಗಿ ವರ ಮನೆಗೆ ತೆರಳಿ ಹೆಂಡತಿಯನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾನೆ.  ಈ ವೇಳೆ ಶಿಫಾನಿ ಪೋಷಕರು ಸಿದ್ದಲಿಂಗಸ್ವಾಮಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಂಡೀಷನ್ ಹಾಕಿದ್ದಾರೆ. ಆದರೆ ಆತ ಇದಕ್ಕೆ ಒಪ್ಪದಾಗ ಶಿಫಾನಿಯನ್ನು ಕಳುಹಿಸಲು ಸಾಧ್ಯವಿಲ್ಲವೆಂದಿದ್ದಾರೆ.

ಅತ್ತ ಶಿಫಾನಿಯೂ ನೀನಿಲ್ಲದೆ ನಾನು ಬದುಕಲ್ಲ ಎಂದು ಕೀಟನಾಶಕ ಕುಡಿಯುವ ವಿಡಿಯೋ ಒಂದನ್ನು ಗಂಡನಿಗೆ ಕಳುಹಿಸಿದ್ದಾಳೆ. ಇದರಿಂದ ಆತಂಕಕ್ಕೀಡಾದ ಸಿದ್ದಲಿಂಗಸ್ವಾಮಿ ಬೈಲುಕುಪ್ಪೆ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದಾನೆ.