ಕೆಸಿಎನ್‌ ಕೈ ಹಿಡಿವ ಮುನ್ನವೇ ಕೋಲಾಹಲ..!

ಜಿಲ್ಲೆಯ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನೊಂದಿಗೆ ದಾಖಲೆ ಸೃಷ್ಟಿಸಿದ್ದ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆ ವದಂತಿ ಕೈ ಪಕ್ಷದಲ್ಲಿ ಕೋಲಾಹಲ ಸೃಷ್ಟಿಸಿದೆ.

Pandemonium before KC Narayana Gowda Join Congress  snr

ಮಂಡ್ಯ ಮಂಜುನಾಥ

 ಮಂಡ್ಯ :  ಜಿಲ್ಲೆಯ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನೊಂದಿಗೆ ದಾಖಲೆ ಸೃಷ್ಟಿಸಿದ್ದ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆ ವದಂತಿ ಕೈ ಪಕ್ಷದಲ್ಲಿ ಕೋಲಾಹಲ ಸೃಷ್ಟಿಸಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಾಂತರ ರಾಜಕಾರಣ ಬಿರುಸುಗೊಂಡಿದ್ದು, ಬಿಜೆಪಿ ಸಚಿವರೇ ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧತೆ ನಡೆಸುತ್ತಿರುವುದು ಪರೋಕ್ಷವಾಗಿ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಕೆ.ಆರ್‌.ಪೇಟೆ ಕಾಂಗ್ರೆಸ್‌ನಲ್ಲಿ ಆರು ಮಂದಿ ಆಕಾಂಕ್ಷಿತರಿದ್ದು, ಅವರಲ್ಲೇ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹಂತದಲ್ಲಿ ಸಚಿವ ನಾರಾಯಣಗೌಡರ ಏಳನೇ ಎಂಟ್ರಿಯ ಸದ್ದು ಕಾಂಗ್ರೆಸ್‌ನಲ್ಲಿ ಗೊಂದಲ, ಗದ್ದಲಕ್ಕೆ ಸಾಕ್ಷಿಯಾಗಿದೆ.

ಪ್ರಬಲ ವಿರೋಧ:

ಪ್ರಜಾಧ್ವನಿ ಸಮಾವೇಶದ ಸಂದರ್ಭದಲ್ಲೇ ಕೆ.ಸಿ.ನಾರಾಯಣ ಗೌಡರು ಕಾಂಗ್ರೆಸ್‌ ಸೇರುವರೆಂಬ ವದಂತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಅಧ್ಯಕ್ಷರ ಕಾರಿಗೆ ಮೊಟ್ಟೆಯೊಡೆದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದು ನಾರಾಯಣಗೌಡರ ಪಕ್ಷ ಸೇರ್ಪಡೆಗಿರುವ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದೆ.

ಕೆ.ಆರ್‌ ಪೇಟೆ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್‌ ಎಚ್‌.ಟಿ.ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಮತ್ತೋರ್ವ ಟಿಕೆಟ್‌ ಆಕಾಂಕ್ಷಿ ಬಿ.ಎಲ್‌.ದೇವರಾಜು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡರನ್ನೇ ಅಭ್ಯರ್ಥಿಯನ್ನಾಗಿ ಜಿಲ್ಲೆಯೊಳಗೆ ತನ್ನ ಅಸ್ತಿತ್ವ ಮುಂದುವರೆಸಿಕೊಳ್ಳುವ ಸಿದ್ಧತೆಯಲ್ಲಿದೆ.

ಹದಿನೈದು ವರ್ಷದಿಂದ ವಿರೋಧ:

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿತ ಆರು ಮಂದಿಯ ಪೈಕಿ ಕೆ.ಬಿ.ಚಂದ್ರಶೇಖರ್‌ ಸೇರಿದಂತೆ ಇತರೆ ಆಕಾಂಕ್ಷಿಗಳ ಮನವೊಲಿಸಿ ಉದ್ಯಮಿ ವಿಜಯ್‌ರಾಮೇಗೌಡರಿಗೆ ಟಿಕೆಟ್‌ ಕೊಡುವರೆಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ನಾರಾಯಣಗೌಡರ ಕಾಂಗ್ರೆಸ್‌ ಪ್ರವೇಶದ ವದಂತಿ ಹಬ್ಬಿದ್ದು, ಕಳೆದ ಹದಿನೈದು ವರ್ಷಗಳಿಂದ ಕೆ.ಸಿ.ನಾರಾಯಣಗೌಡರ ವಿರುದ್ಧ ಕೆಲಸ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಸಹಜವಾಗಿಯೇ ಕೆರಳಿದ್ದಾರೆ.

ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಪೂರ್ವಸಿದ್ಧತೆ ನಡೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಬಲವಾಗಿ ವಿರೋಧಿಸುತ್ತಿರುವುದರಿಂದ ನಾರಾಯಣಗೌಡರ ಪಕ್ಷ ಸೇರ್ಪಡೆ ವಿಳಂಬವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನಾರಾಯಣಗೌಡರನ್ನು ಒಪ್ಪುತ್ತಿಲ್ಲ:

2013ರ ವಿಧಾನಸಭಾ ಚುನಾವಣೆಯಿಂದಲೂ ಸತತ ಮೂರು ಬಾರಿ ಗೆಲುವು ಸಾಧಿಸಿರುವ ಕೆ.ಸಿ.ನಾರಾಯಣಗೌಡರನ್ನೇ ಪಕ್ಷಕ್ಕೆ ಕರೆತಂದರೆ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಲಿದೆ. ಕಾಂಗ್ರೆಸ್ಸಿಗರನ್ನು ಒಗ್ಗೂಡಿಸಿ ಜೆಡಿಎಸ್‌ ವಿರುದ್ಧ ಸುಲಭವಾಗಿ ಜಯಸಾಧಿಸಬಹುದು ಎನ್ನುವುದು ಕಾಂಗ್ರೆಸ್‌ ವರಿಷ್ಠರ ಲೆಕ್ಕಾಚಾರವಾದರೆ ಕಳೆದ ಹಲವು ವರ್ಷಗಳಿಂದ ನಾರಾಯಣಗೌಡರನ್ನು ವಿರೋಧಿಸುತ್ತಾ, ಹಲವು ಸವಾಲುಗಳನ್ನು ಎದುರಿಸಿಕೊಂಡು ಬಂದಿರುವ ಕಾಂಗ್ರೆಸ್‌ ಕಾರ್ಯಕರ್ತರು ನಾರಾಯಣಗೌಡರನ್ನು ಹೇಗೆ ಒಪ್ಪಿಕೊಳ್ಳುವುದು ಎಂಬ ಪ್ರಶ್ನೆಯನ್ನು ಮುಂದಿಟ್ಟು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾಧ್ವನಿ ದಿಢೀರ್‌ ಮುಂದೂಡಿಕೆ

ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆಗೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಾ.13ರಂದು ಕೆ.ಆರ್‌.ಪೇಟೆಯಲ್ಲಿ ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಲಾಗಿದೆ. ಪ್ರಜಾಧ್ವನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಡೆದ ಪ್ರತಿಯೊಂದು ಬೆಳವಣಿಗೆಗಳನ್ನು ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ತಡರಾತ್ರಿಯವರೆಗೆ ಸಭೆ ನಡೆಸಿ ಸಮಾವೇಶವನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ. ನಾರಾಯಣಗೌಡರ ಪಕ್ಷ ಸೇರ್ಪಡೆ ವಿಷಯ ಎಐಸಿಸಿ ಮಟ್ಟದಲ್ಲಿ ತೀರ್ಮಾನವಾಗಿದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಕೆಲವು ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ಕೆ.ಸಿ.ನಾರಾಯಣಗೌಡರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳುವುದರಿಂದ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಲಿದೆ ಎಂದು ಕಾಂಗ್ರೆಸ್‌ ಮುಖಂಡರಿಗೆ ತಿಳಿಹೇಳಿದ್ದಾರೆಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

Latest Videos
Follow Us:
Download App:
  • android
  • ios