Asianet Suvarna News Asianet Suvarna News

ಮೀಸಲು ಹೋರಾಟ; ಸಿಎಂ ಬಿಎಸ್‌ವೈ ಹೊಗಳಿ ಎಲ್ಲ ಭಾರ ಹಾಕಿದ ನಿರಾಣಿ!

ಸಿಎಂ ಅವರಿಂದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಸಿಗಲಿದೆ/ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ/ ಯಡಿಯೂರಪ್ಪನವರು ನುಡಿದಂತೆ ನಡೆಯುವ ನಾಯಕರು/ ಹಿಂದುಳಿದ ವರ್ಗಗಳಿಂದ ಸೂಕ್ತ ನ್ಯಾಯ ಸಿಗುವ ಭರವಸೆ/ ಸಮುದಾಯಕ್ಕೆ ಬೇಡಿಕೆ ಈಡೇರಿಸಲು ತಾವು ಎಲ್ಲ ರೀತಿಯ ಹೋರಾಟಕ್ಕೆ ‌ಸಿದ್ದ 

Panchamasali reservation Minister Murugesh nirani praises CM BS Yediyurappa mah
Author
Bengaluru, First Published Feb 21, 2021, 6:41 PM IST

ಬೆಂಗಳೂರು (ಫೆ. 21)  ಸಮಾಜದ  ಬಹುದಿನಗಳ ಬೇಡಿಕೆಯಂತೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾಯ ಒದಗಿಸಿ ಕೊಡಲಿದ್ದು, ಎಲ್ಲರೂ ವಿಶ್ವಾಸವಿಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ  ವಿಶ್ವಾಸ ವ್ಯಕ್ತಪಡಿಸಿದರು. 

"

ನಗರದ  ಅರಮನೆ ಮೈದಾನದಲ್ಲಿ  ನಡೆದ ಪಂಚಮಸಾಲಿ ಮಠ ಐತಿಹಾಸಿಕ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಯಕರಾದ ಯಡಿಯೂರಪ್ಪನವರು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದು  ಬಣ್ಣಿಸಿದರು. 
ಈಗಾಗಲೇ ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆಯೋಗವು ಕೂಡ ಅಧ್ಯಯನ ನಡೆಸಿ ಸರ್ಕಾರದಕ್ಕೆ ವರದಿ ನೀಡಲಿದೆ ಎಂದರು.

ಪಂಚಮಸಾಲಿ ಹೋರಾಟದ  ಮುಂದಿನ ಹೆಜ್ಜೆ ಏನು? 

ಸಮುದಾಯದ ಒತ್ತಾಸೆಯಂತೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗವು ಘೋಷಿಸಿದ ನಂತರ ಕಾನೂನು ತೊಡಕು ಆಗಬಾರದೆಂಬ ಕಾರಣಕ್ಕಾಗಿ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಲಿಂಗಾಯಿತ ಪಂಚಮಸಾಲಿ  ಸಮಾಜವನ್ನು 2ಎಗೆ ಸೇರಿಸಬೇಕೆಂಬುದು ಅವರ ಉದ್ದೇಶವಾಗಿದೆ ಎಂದು ಹೇಳಿದರು. 

ಲಿಂಗಾಯತ ಪಂಚಮಸಾಲಿ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದೆ ಎಂಬ ಒಂದೇ ಕಾರಣಕ್ಕೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಸಾಮಾನ್ಯವರ್ಗದಲ್ಲಿ ನಮ್ಮ ಸಮಾಜವನ್ನು 3ಬಿಗೆ ಸೇರ್ಪಡೆ ಮಾಡಿದರು. 

ಸಮುದಾಯದ ಒತ್ತಾಯದಂತೆ 2ಎ ವರ್ಗಕ್ಕೆ ಸೇರಿಸಲು ಸರ್ವ ಪ್ರಯತ್ನ ನಡೆಸಿದರೂ ಕೆಲವು ತಾಂತ್ರಿಕಕಾರಣದಿಂದ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕೆಂದು ಮೂರು ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಡಾ.ಹನುಮನಾಳ ಅವರಿಂದ ಆರಂಭವಾದ ಈ ಹೋರಾಟ ಇದೀಗ ಪರಮಪೂಜ್ಯ ಜಯಮೃತ್ಯುಂಜಯ ಮಹಾಸ್ವಾಮೀಜಿ ಹಾಗೂ  ವಚನಾನಂದ ಮಹಾಸ್ವಾಮಿಗಳು ಸುಮಾರು 700 ಕಿ.ಮೀ ಪಾದಯಾತ್ರೆ ಮಾಡುವ  ಮೂಲಕ ಸಮಾಜದಲ್ಲಿ  ಜಾಗೃತಿ  ಉಂಟು ಮಾಡಿದ್ದಾರೆ ಎಂದು ಹೇಳಿದರು. 

ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅನುಕೂಲವಾಗಬೇಕೆಂಬ ಒಂದೇ ಕಾರಣಕ್ಕಾಗಿ ಈ ಬೃಹತ್ ಹೋರಾಟ ಆರಂಭವಾಗಿದೆ ಹೊರತು ನಾವೇನು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. 

ರಾಜ್ಯದಲ್ಲಿ ಅತಿದೊಡ್ಡ   ಸಮುದಾಯವಾದ ಲಿಂಗಾಯತ ಪಂಚಮಸಾಲಿ ಸಮುದಾಯವು  ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಸೇರಿದಂತೆ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು. 

ನಮ್ಮ ಸಮುದಾಯವು ಮೂಲತಃ ರೈತಾಪಿ ವರ್ಗಕ್ಕೆ ಸೇರಿದೆ. ಕೆಲವರು ಸರ್ಕಾರಿ, ಅರೆಸರ್ಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆರಳಣಿಕೆಯಷ್ಟು ಉದ್ಯಮಿದಾರರಾಗಿದ್ದು, 2ಎಗೆ ಸೇರ್ಪಡೆ ಮಾಡಬೇಕೆಂದು ನಡೆಸುತ್ತಿರುವ ಹೋರಾಟ ಕಾನೂನುಬದ್ದವಾಗಿದೆ. 

ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ಸಚಿವರು, ಶಾಸಕರು, ಇಡೀ ಸಮುದಾಯ ಅವರ ಬೆಂಬಲಕ್ಕೆ ನಿಂತಿದೆ. ನಮ್ಮ ಸಮುದಾಯಕ್ಕೆ ಬೇಡಿಕೆ ಈಡೇರಿಸಲು ತಾವು ಎಲ್ಲ ರೀತಿಯ ಹೋರಾಟ ಮಾಡುತ್ತೇವೆ ಎಂದು ನಿರಾಣಿ ಶಪಥ ಮಾಡಿದರು.

 

Follow Us:
Download App:
  • android
  • ios