Karnataka Rains: ಮತ್ತೆ ಅಬ್ಬರಿಸಿದ ವರುಣ: ಅಳಿದುಳಿದ ಬತ್ತವೂ ನಾಶ, ಕಂಗಾಲಾದ ರೈತ..!
* ನೀರಿನಲ್ಲಿ ಮುಳುಗಿದ ಕಟಾವು ಮಾಡಿದ ಬತ್ತ, ಅಡಕೆ ಒಣಗಿಸಲು ಪರದಾಟ
* ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ
* ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ
ಕಾರವಾರ(ಡಿ.03): ಉತ್ತರ ಕನ್ನಡ(Uttara Kannada) ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿಯಿಡಿ ಭಾರಿ ಮಳೆ ಸುರಿದಿದೆ. ಗುರುವಾರವೂ ಆಗಾಗ ಮಳೆಯಾಗುತ್ತಿದೆ. ಅಳಿದುಳಿದ ಬತ್ತದ ಬೆಳೆಯೂ ನಾಶವಾಗುತ್ತಿದೆ. ಅಡಕೆ ಒಣಗಿಸಲಾರದೆ ಕೃಷಿಕರು ಪರದಾಡುತ್ತಿದ್ದಾರೆ.
ಬುಧವಾರ ರಾತ್ರಿ ಕಾರವಾರದಲ್ಲಿ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ(Rain) ಶುರುವಾಯಿತು. ಆಗಾಗ ಕೆಲ ಸಮಯ ಬಿಡುವು ನೀಡಿದ್ದನ್ನು ಹೊರತುಪಡಿಸಿದರೆ ಬೆಳಗಿನ ತನಕ ಮಳೆ ಮುಂದುವರಿದಿತ್ತು. ಅದರಲ್ಲೂ ಮಧ್ಯರಾತ್ರಿ ಭಾರಿ ಗುಡುಗು ಒಮ್ಮೆಲೇ ಉಂಟಾಗಿದ್ದರಿಂದ ಜನತೆ ಬೆಚ್ಚಿಬಿದ್ದರು. ಆನಂತರ ಗುಡುಗು ಮಿಂಚು ಮುಂದುವರಿಯಿತು.
ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನಲ್ಲೂ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದೆ. ಗುರುವಾರ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಕರಾವಳಿಯಲ್ಲಿ(Coastal) ಹೆಚ್ಚು ಮಳೆಯಾಗಿದ್ದು, ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು.
Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!
ಮಳೆಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್(Electricity) ವ್ಯತ್ಯಯವಾಗಿದೆ. ಕಾರವಾರದಲ್ಲಿ(Karwar)ರಾತ್ರಿ ಇಡೀ ಕಣ್ಣುಮುಚ್ಚಾಲೆ ನಡೆದಿತ್ತು. ಗುರುವಾರ ಸಂಜೆ ವರೆಗೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿಲ್ಲ.
ಈಚೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬೆಳೆ(Paddy Crop) ನಾಶವಾಗಿತ್ತು. ಕಟಾವು ಮಾಡಿದ ಬೆಳೆ ಗದ್ದೆಯಲ್ಲೇ ಇರುವ ಸಮಯದಲ್ಲಿ ಮಳೆ ಬಂದು ನಾಶವಾಗಿತ್ತು. ಮಳೆಯಿಂದಾಗಿ ಹಲವರು ಕಟಾವನ್ನೇ ಮುಂದೂಡಿದ್ದರು. ಈಗ ಮತ್ತೆ ಕೊಯ್ಲು ಮಾಡಲಾಗಿದೆ. ಬತ್ತದ ತೆನೆಗಳು ನೀರಿನಲ್ಲಿ ಮುಳುಗಿವೆ. ಹಿಂದೆ ಮಳೆ ಬಂದಾಗ ಉಳಿದ ಬೆಳೆಯೂ ಈಗ ನಾಶವಾಗುತ್ತಿದೆ.
ಕುಮಟಾ ತಾಲೂಕಿನ ಬಾಡ, ಗುಡೇಅಂಗಡಿ, ಕಾಗಾಲ ಮತ್ತಿತರ ಕಡೆಗಳಲ್ಲಿ ಕಟಾವು ಮಾಡಿದ ಬತ್ತದ ಬೆಳೆ ನೀರಿನಲ್ಲಿ ಮುಳುಗಿ ಹಾನಿ ಉಂಟಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಬತ್ತದ ಕೊಯ್ಲನ್ನು ಕರಾವಳಿಗಿಂತ ಸ್ವಲ್ಪ ವಿಳಂಬವಾಗಿ ಮಾಡಲಾಗುತ್ತದೆ. ವಿಳಂಬವಾಗಿ ನಾಟಿ ಮಾಡುವುದೇ ಇದಕ್ಕೆ ಕಾರಣ. ಈಗ ಘಟ್ಟದ ಮೇಲಿನ ತಾಲೂಕುಗಳಲ್ಲೂ ಕೊಯ್ಲಿನ ಹಂಗಾಮು. ಆದರೆ ಮಳೆ ಬಿಟ್ಟು ಬಿಡದೆ ಕಾಡುತ್ತಿರುವುದು ರೈತರು(Farmers) ತೀವ್ರವಾಗಿ ಚಿಂತಿತರಾಗಿದ್ದಾರೆ. ಬತ್ತದ ಜತೆಗೆ ಅಡಕೆ ಕೊಯ್ಲಿನ ಹಂಗಾಮು ಸಹ ಶುರುವಾಗಿದೆ. ಕೆಲವೆಡೆ ಅಡಕೆ ಕೊಯ್ಲು ಮುಗಿದಿದೆ. ಆದರೆ ಅಡಕೆ ಒಣಗಿಸಲು ಮಳೆಯ ಕಾಟ. ಅಡಕೆ ಒಣಗಿಸಲಾರದೆ ಬೆಳೆಗಾರರು ಚಡಪಡಿಸುತ್ತಿದ್ದಾರೆ.
ಮಳೆ ವಿವರ
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬುಧವಾರ ಮುಂಜಾನೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ಪ್ರಮಾಣ (ಮಿ.ಮೀ.ಗಳಲ್ಲಿ) ಹೀಗಿದೆ. ಅಂಕೋಲಾ 72.2, ಹಳಿಯಾಳ 72.8, ಕಾರವಾರ 64.2, ಮುಂಡಗೋಡ 44.6, ಶಿರಸಿ 19.5, ಯಲ್ಲಾಪುರ 26.2, ಭಟ್ಕಳ 33.4, ಹೊನ್ನಾವರ 20.4, ಕುಮಟಾ 58.4, ಸಿದ್ದಾಪುರ 2.4 ಹಾಗೂ ಜೋಯಿಡಾ 19.5 ಮಿ.ಮೀ.
6 ವರ್ಷ ಬಳಿಕ ಕಾಳುಮೆಣಸು ದರ ಭಾರೀ ಏರಿಕೆ : ರೈತರ ಹರ್ಷ
ಕೊಯ್ಲು ಮಾಡಿಟ್ಟ ಬತ್ತದ ಬೆಳೆ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿದೆ. ಕೊರೋನಾದಿಂದ(Coronavirus) ರೈತರು ತೊಂದರೆಗೊಳಗಾಗಿದ್ದರು. ಆನಂತರ ಪ್ರವಾಹ ಬಂತು. ಈಗ ಅಕಾಲಿಕ ಮಳೆಯಿಂದ ಮತ್ತೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು.
ನಿಲ್ಲದ ಮಳೆ, ಮುಗಿಯದ ರೈತರ ಸಂಕಷ್ಟ
ಜೋಯಿಡಾ(Joida) ತಾಲೂಕಿನ ರೈತರಿಗೆ ಈ ವರ್ಷದ ಅಕಾಲಿಕ ಮಳೆಯಿಂದ ತುಂಬಲಾರದಷ್ಟು ನಷ್ಟಉಂಟಾಗಿದೆ. ಎಲ್ಲಿ ನೋಡಿದರೂ ಮಳೆಯಿಂದಾದ ಹಾನಿಯೇ ಕಂಡು ಬರುವಂತಾಗಿದೆ.
ತಾಲೂಕಿನಲ್ಲಿ ಈಗ ಬತ್ತ ಕಟಾವಿನ ಹಂತದಲ್ಲಿದ್ದು, ಹಲವಾರು ರೈತರು ಬತ್ತ ಕಟಾವು ಮಾಡಿದ್ದಾರೆ. ಆದರೆ ನಿರಂತರ ಮಳೆಯಿಂದ ಕಟಾವು ಮಾಡಿದ ಬತ್ತ ಕೊಳೆತು ಹೋಗುತ್ತಿದೆ. ಬತ್ತದ ಕಾಳುಗಳೆಲ್ಲ ಉದುರಿ ಹೋಗಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕಟಾವು ಮಾಡದೆ ಇದ್ದ ಬತ್ತದ ಗದ್ದೆಗಳು ಕೂಡ ಮಳೆಯಿಂದ ಅಡ್ಡಬಿದ್ದಿವೆ. ಇವು ಕಟಾವು ಮಾಡಲಿಕ್ಕೂ ಸಿಗದೆ ಮಣ್ಣಿನಲ್ಲಿ ಹೂತು ಕೊಳೆದಿವೆ. ಹಂದಿಕಾಟ ಬೇರೆ ಇದೆ.
ಅಡಕೆ ಬೆಳೆಗಾರರ ಸ್ಥಿತಿಯೂ ಭಿನ್ನವಾಗಿಲ್ಲ. ಮಳೆಯ ರಭಸಕ್ಕೆ 3, 4 ಸಲ ಔಷಧ ಸಿಂಪಡಿಸಿದರೂ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಳಿದುಳಿದ ಅಡಕೆ ಒಣಗಿಸಲು ಸಾಧ್ಯವಾಗದೆ ಕೊಳೆತು ಹೋಗುತ್ತಿವೆ. ಜೋರಾದ ಮಳೆಯ ರಭಸಕ್ಕೆ ಬಿದ್ದ ಅಡಕೆಗಳೂ ನೀರಿನಲ್ಲಿ ತೇಲಿ ಹೋಗುತ್ತಿವೆ. ಒಟ್ಟಾರೆ ಕಷ್ಟಪಟ್ಟು ಬೆಳೆದ ರೈತರಿಗೆ ಸಂಕಷ್ಟನೀಗುತ್ತಿಲ್ಲ. ಮುಂದೇನು ಎಂದು ತಿಳಿಯದೆ ರೈತವಲಯ ಕಂಗಾಲಾಗಿದೆ. ಕಾಲಮಾನ ಬದಲಾವಣೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆಗಾಲದ ಆರಂಭದಿಂದಲೂ ನಮಗೆ ಮಳೆ ಪ್ರವಾಹದ ರೀತಿಯಲ್ಲಿ ದಾಳಿ ಮಾಡುತ್ತಿದೆ. ಈಗ ಬೆಳೆದ ಬೆಳೆಯೂ ಮಣ್ಣು ಪಾಲಾಗಿದೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ.