ಕೊಪ್ಪಳದಲ್ಲಿ ‘ವಿಮಾನ ನಿಲ್ದಾಣ’ ಜಾರಿಗೆ ಕೂಗು ಜೋರು..!
ಮನವಿಗೆ ಸಕಾರಾತ್ಮಕ ಸ್ಪಂದಿಸಿದ ಸಿಎಂ| ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ| ಶೀಘ್ರದಲ್ಲೇ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಭರವಸೆ ನೀಡಿದ ಯಡಿಯೂರಪ್ಪ| 2017ರಲ್ಲಿಯೇ ಕೇಂದ್ರ ಸರ್ಕಾರ ಕೊಪ್ಪಳ ಜಿಲ್ಲೆಗೆ ಘೋಷಿಸಿದ್ದ ‘ಉಡಾನ್’ ಯೋಜನೆ|
ಕೊಪ್ಪಳ(ಫೆ.24): 2017ರಲ್ಲಿಯೇ ಕೇಂದ್ರ ಸರ್ಕಾರ ಕೊಪ್ಪಳ ಜಿಲ್ಲೆಗೆ ಘೋಷಿಸಿದ್ದ ‘ಉಡಾನ್’ ಯೋಜನೆ ನನೆಗುದಿಗೆ ಬಿದ್ದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಯೋಜನೆಯನ್ನು ಶೀಘ್ರ ಜಾರಿ ಮಾಡಬೇಕು ಎಂದು ಪಕ್ಷಾತೀತವಾಗಿ ಕೂಗೆದ್ದಿದೆ.
ಮಂಗಳವಾರ ಕೊಪ್ಪಳದಲ್ಲಿ ಈ ಕುರಿತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರ ಅಧ್ಯಕ್ಷೆಯಲ್ಲಿ ಪಕ್ಷಾತೀತವಾಗಿ ಮುಖಂಡರು ಸಭೆ ನಡೆಸಿದರೆ, ಅತ್ತ ಬೆಂಗಳೂರಿನಲ್ಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರಿಗೆ ‘ಉಡಾನ್’ ಜಾರಿಗಾಗಿ ಮನವಿ ಸಲ್ಲಿಸಲಾಯಿತು.
ಕೊಪ್ಪಳದ ಸಭೆಯಲ್ಲೇನಾಯಿತು?:
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಡಾನ್ ಯೋಜನೆಯ ಅನುಷ್ಠಾನದ ಕುರಿತು ಡಿಸಿ ವಿಕಾಸ್ ಕಿಶೋರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು. ಹಿರಿಯ ವಕೀಲ ಆಸೀಫ್ ಅಲಿ ಮಾತನಾಡಿ, ಉಡಾನ್ ಯೋಜನೆಯು ಜಿಲ್ಲೆಗೆ ಘೋಷಣೆಯಾಗಿ ಮೂರು ವರ್ಷ ಗತಿಸಿವೆ. ಯೋಜನೆಯು ಅನುಷ್ಠಾನ ವಿಳಂಬವಾಗಿದ್ದಕ್ಕೆ ನಾವೆಲ್ಲ ಪ್ರಮುಖರು ಸೇರಿ ಜಿಲ್ಲೆಗೆ ಮಂಜೂರಾದ ಯೋಜನೆಯನ್ನು ಉಳಿಸಿಕೊಳ್ಳಬೇಕಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ವೇಗ ಪಡೆದುಕೊಳ್ಳಲಿದೆ. ಹೀಗಾಗಿ ಇದನ್ನು ಜಾರಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.
ಒಂದೇ ಎಕರೆಗೆ 10 ಲಕ್ಷ ಲಾಭ : ರೈತರಿಗೆ ಭಾರೀ ಬಂಪರ್
ಹಿರಿಯ ವಕೀಲ ಆರ್.ಬಿ. ಪಾನಘಂಟಿ ಮಾತನಾಡಿ, ಉಡಾನ್ ಯೋಜನೆಯು ಯಾವ ಕಾರಣಕ್ಕೆ ವಿಳಂಬವಾಗುತ್ತಿದೆಯೂ ಗೊತ್ತಾಗುತ್ತಿಲ್ಲ. ಇದನ್ನು ಕೇವಲ ಲಾಭದಾಯಕವಾಗಿ ನೋಡದೆ ಇಲ್ಲಿನ ಕೈಗಾರಿಕೆಗಳು, ಪ್ರವಾಸಿ ತಾಣಗಳಗಳ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಚರ್ಚೆ ಮಾಡಬೇಕಿದೆ. ಕೇಂದ್ರ ಸರ್ಕಾರ ಜಿಲ್ಲೆಗೆ ಉಡಾನ್ ನೀಡುವ ಮುನ್ನ ಇಲ್ಲಿಯ ಅಗತ್ಯತೆಯನ್ನು ಗಮನಿಸಿಯೇ ನೀಡಿದ್ದಾರೆ. ಯೋಜನೆ ಜಾರಿಗೆ ಎಲ್ಲರೂ ಯತ್ನಿಸೋಣ ಎಂದರು.
ಡಿಸಿ ವಿಕಾಸ್ ಕಿಶೋರ್ ಮಾತನಾಡಿ, ಉಡಾನ್ ಯೋಜನೆಯ ಕುರಿತು ಚರ್ಚೆ ನಡೆದಿದೆ. ಇಲ್ಲಿನ ಜನರಲ್ಲಿ ಯೋಜನೆ ಜಾರಿಗೆ ಆಸಕ್ತಿಯ ಜತೆಗೆ ಪ್ರೋತ್ಸಾಹ ಹೆಚ್ಚಿದೆ. ಯೋಜನೆ ಅನುಷ್ಠಾನಕ್ಕೆ ವಿವಿಧ ಆಯಾಮದಲ್ಲಿ ಸಮಾಲೋಚನೆ ಮಾಡಬೇಕಿದೆ. ವಿವಿಧ ಇಲಾಖೆಗಳ ಸಮ್ಮತಿಯ ಜತೆಗೆ ಆರ್ಥಿಕ ಇಲಾಖೆಯ ಸಮ್ಮತಿಯು ಬಹುಮುಖ್ಯ. ಸರ್ಕಾರವೇ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲ್ಲ. ಈಗಿರುವ ಎಂಎಸ್‌ಪಿಎಲ್ ಕಂಪನಿಯೇ ನಿರ್ವಹಿಸಬೇಕಿದೆ. ಅಗತ್ಯ ಸೌಲಭ್ಯ ಸರ್ಕಾರದಿಂದ ಕಲ್ಪಿಸಬೇಕಾಗುತ್ತದೆ. ಕಂಪನಿಗೆ ಉಡಾನ್ ಯೋಜನೆಯಡಿ ಅನುಷ್ಠಾನಕ್ಕೆ ಬೇಕಾಗಿರುವ ಅಗತ್ಯತೆಯ ಕುರಿತು ಲಿಖಿತವಾಗಿ ಮಾಹಿತಿ ನೀಡಿದರೆ ಖಂಡಿತವಾಗಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದರು.
ಯೋಜನೆಯ ಅನುಷ್ಠಾನದಲ್ಲಿ ಕಂಪನಿಯ ನಿಲುವೇನು? ಕಂಪನಿಯು ಸಹ ಸಕಾರಾತ್ಮಕ ಸ್ಪಂದಿಸಬೇಕಾಗಿದೆ ಎಂದರು.
ಎಂಎಸ್‌ಪಿಎಲ್ ಕಂಪನಿ ಪ್ರತಿನಿಧಿ ಪ್ರಭು ಮಾತನಾಡಿ, 140 ಕಿಮೀ ಅಂತರದಲ್ಲಿ ಹುಬ್ಬಳ್ಳಿ ಹಾಗೂ ತೋರಣಗಲ್ ಬಳಿ ಎರಡು ವಿಮಾನ ನಿಲ್ದಾಣಗಳಿವೆ. ಹಾಗಾಗಿ ಎರಡೂ ನಿಲ್ದಾಣಕ್ಕೆ ಇಲ್ಲಿನ ಜನತೆ ರಸ್ತೆ ಮೂಲಕವೇ ಒಂದು ಗಂಟೆಯೊಳಗೆ ವಿಮಾನ ನಿಲ್ದಾಣ ತಲುಪಬಹುದು. ಇದೆಲ್ಲ ಸಾಧ್ಯತೆಗಳಿವೆ. ಇಲ್ಲಿ ವಿಮಾನ ನಿಲ್ದಾಣದ ಅಗತ್ಯವೆನಿಸಲ್ಲ ಎಂದರು. ಇದು ಸಭೆಯಲ್ಲಿದ್ದವರ ಆಕ್ರೋಶಕ್ಕೆ ಕಾರಣವಾಯಿತು.
ಪಕ್ಕದಲ್ಲಿಯೇ ಇದೆ ಎಂದು ಎಲ್ಲರೂ ಅಲ್ಲಿಗೆ ಹೋಗಲು ಆಗುವುದಿಲ್ಲ. ಜಿಲ್ಲೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವೇ ಕೊಟ್ಟಿರುವುದರಿಂದ ಅದನ್ನು ಬಳಕೆ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಎಂಎಸ್‌ಪಿಎಲ್‌ನವರು ಆಸಕ್ತಿಯನ್ನು ತೋರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಶ್ರೀನಿವಾಸ್ ಗುಪ್ತಾ, ಕೆ.ಎಂ. ಸೈಯದ್, ಪೀರಾ ಹುಸೇನ್ ಹೊಸಳ್ಳಿ, ಡಾ. ಕೆ.ಜಿ. ಕುಲಕರ್ಣಿ, ಬಸವರಾಜ ಬಳ್ಳೊಳ್ಳಿ, ಮಹೇಶ ಮುದಗಲ್, ಪ್ರವೀಣ ಮೆಹ್ತಾ, ಸಿದ್ದಣ್ಣ ನಾಲ್ವಾಡ್, ಶಾಹೀದ್ ತಹಸೀಲ್ದಾರ, ಅಲಿಮುದ್ದೀನ್, ಸಂಜಯ ಕೊತಬಾಳ ಇತರರು ಪಾಲ್ಗೊಂಡಿದ್ದರು.
ಬಿಜೆಪಿ ಸಮಾವೇಶಲ್ಲಿ ಖಾತ್ರಿ ಕಾರ್ಮಿಕರು?: ಹಣ ನೀಡಿದ ಫೋಟೋ ಬಿಡುಗಡೆ
26ರಂದು ಡಿಸಿ ಜತೆ ಚರ್ಚೆ
ಕೊರೋನಾ ಹಿನ್ನೆಲೆ ಕಂಪನಿಯ ಮುಖ್ಯಸ್ಥರು ಹೊರಗಡೆ ಬಂದಿಲ್ಲ. ಎಲ್ಲವೂ ಡಿಜಿಟಲ್‌ನಲ್ಲಿಯೇ ವಹಿವಾಟು ನಡೆದಿದೆ. ಹಾಗಾಗಿ ಉಡಾನ್ ಯೋಜನೆಯ ಅನುಷ್ಠಾನಕ್ಕೆ ಕಂಪನಿಯ ನಿರ್ಧಾರದ ಕುರಿತಂತೆ ಫೆ. 26ರಂದು ಡಿಸಿ ಅವರ ಜತೆ ಚರ್ಚೆ ನಡೆಸಲಾಗುವುದು ಎಂದು ಕಂಪನಿಯ ಪ್ರತಿನಿಧಿ ಪ್ರಭು ತಿಳಿಸಿದರು. ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಡಾನ್ ಯೋಜನೆಯ ಅನುಷ್ಠಾನದ ಕುರಿತು ಡಿಸಿ ವಿಕಾಸ್ ಕಿಶೋರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖರ ಸಮಾಲೋಚನಾ ಸಭೆ ಜರುಗಿತು.
ಯೋಜನೆ ಜಾರಿಗಾಗಿ ಸಿಎಂಗೆ ಮನವಿ
ಜಿಲ್ಲೆಗೆ ಮಂಜೂರಾಗಿರುವ ಉಡಾನ್ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಂಗಳವಾರ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ಸಕಾರಾತ್ಮಕ ಸ್ಪಂದಿಸಿದ ಸಿಎಂ ಅವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಢೇಸ್ಗೂರು, ಪರಣ್ಣ ಮುನವಳ್ಳಿ, ಅಂದಣ್ಣ ಅಗಡಿ, ಕೆ. ಶರಣಪ್ಪ, ದೊಡ್ಡನಗೌಡ ಪಾಟೀಲ್, ತಿಪ್ಪೇರುದ್ರಸ್ವಾಮಿ, ಶರಣು ತಳ್ಳಿಕೇರಿ, ಅಮರೇಶ ಕರಡಿ, ನವೀನ್ ಗುಳಗಣ್ಣನವರ್ ಇದ್ದರು.