ನನಗೆ ಅಧಿಕಾರಕ್ಕಿಂತ, ಸಮಾಜ ಮುಖ್ಯ : ಶ್ರೀರಾಮುಲು

ಬಳ್ಳಾರಿಯಲ್ಲಿ ನ.20ರಂದು ನಡೆಯುವ ಪ.ಪಂಗಡ ಸಮಾವೇಶದ ಮೂಲಕ ರಾಜ್ಯ, ರಾಷ್ಟ್ರಕ್ಕೆ ಹೊಸ ಸಂದೇಶ ನೀಡುವ ಜೊತೆಗೆ ಶಕ್ತಿ ಪ್ರದರ್ಶನ ಆಗಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Our Society Is important Than Power Says Sriramulu snr

 ಮೈಸೂರು (ಅ.27):  ಬಳ್ಳಾರಿಯಲ್ಲಿ ನ.20ರಂದು ನಡೆಯುವ ಪ.ಪಂಗಡ ಸಮಾವೇಶದ ಮೂಲಕ ರಾಜ್ಯ, ರಾಷ್ಟ್ರಕ್ಕೆ ಹೊಸ ಸಂದೇಶ ನೀಡುವ ಜೊತೆಗೆ ಶಕ್ತಿ ಪ್ರದರ್ಶನ ಆಗಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರ ಬಿಜೆಪಿ (BJP)  ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಿಂದ ಈ ಸಮಾವೇಶಕ್ಕೆ 20 ರಿಂದ 30 ಸಾವಿರ ಮಂದಿ ಪಾಲ್ಗೊಳ್ಳಬೇಕು. ನನಗೆ ಅಧಿಕಾರಕ್ಕಿಂತ, ಸಮಾಜ (Society)  ಮುಖ್ಯ. ಅದಕ್ಕಾಗಿ ನಾನು ಕೊನೆಯವರೆಗೂ ದುಡಿಯುತ್ತೇನೆ ಎಂದರು.

ಸಮುದಾಯ ನನಗೆ ಎಲ್ಲವನ್ನೂ ನೀಡಿದೆ. ನನಗೆ ಬಂಧು, ಬಳಗವೆಲ್ಲ ನಮ್ಮ ಸಮಾಜವೇ ಆಗಿದೆ. ನಾನು ಕೊಟ್ಟಮಾತನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸಿದ್ದಾರೆ. ಶ್ರೀರಾಮುಲು ಬೆಳೆಯಲು ಸಮಾಜ ಕಾರಣ, ನಮ್ಮ ನಾಯಕ ಸಮುದಾಯದವರು ಬಿಜೆಪಿ ಪರವಾಗಿ ಇರಬೇಕು. ಮುಂದೆಯೂ ಬಿಜೆಪಿ ಸರ್ಕಾರ ನಮ್ಮ ಸಮಾಜ ಗುರುತಿಸಬೇಕಾದರೆ ನಾವು ಬಿಜೆಪಿ ಪರ ನಿಲ್ಲಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪ.ಪಂಗಡಕ್ಕೆ ಅನುಕೂಲ ಕಲ್ಪಿಸಿದೆ. ನಾವು ಇದಕ್ಕಾಗಿ ಪ್ರಧಾನಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕಿದೆ. ಮೈಸೂರಿನಲ್ಲಿ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಪ.ಪಂಗಡಕ್ಕೆ ಸೇರಿದ ಶಿವಕುಮಾರ್‌ ಅವರನ್ನು ಆಯ್ಕೆ ಮಾಡಲಾಯಿತು. ತಳವಾರ ಮತ್ತು ಪರಿವಾರ ಪದಗಳನ್ನು ಪ.ಪಂಗಡಕ್ಕೆ ಸೇರಿಸಲಾಯಿತು ಎಂದರು.

ಮೈಸೂರು ಭಾಗದವರೇ ಮುಖ್ಯಮಂತ್ರಿ ಆಗಿದ್ದಾಗ 2017ರಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಅವಕಾಶ ಇದ್ದರೂ ಮುಂದಾಗಲಿಲ್ಲ. ಬರೀ ಮಾತನಾಡಿಕೊಂಡು ಬಂದರೇ ಹೊರತು ಮೀಸಲಾತಿ ಬಗ್ಗೆ ಗಮನಿಸಲಿಲ್ಲ. ಸವಾಜ ಕಲ್ಯಾಣ ಇಲಾಖೆುಂಲ್ಲಿ ಇದ್ದ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆಯನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಸಚಿವಾಲಯ ಮಾಡಲಾಯಿತು. ಅಂತೆಯೇ ನನ್ನನ್ನು ಮೊದಲ ಸಚಿವನನ್ನಾಗಿ ಮಾಡಲಾಯಿತು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಆಗಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ ಎಂದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರಗಳು ಯಾವುದೇ ಸಹಾಯ ಮಾಡಲಿಲ್ಲ. ಬೆಂಗಳೂರಿನಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸಿದ್ದು ಬಿಟ್ಟರೆ ಬೇರೇನು ಕೆಲಸ ಮಾಡಲಿಲ್ಲ. ಈ ವಿಷಯದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸುತ್ತಿದ್ದಂತೆಯೇ ಅಪಸ್ವರ ತೆಗೆಯಲಾಗಿದೆ. ಆದರೆ, ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿ ರಾತ್ರೋರಾತ್ರಿ ಅನುಷ್ಠಾನಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳಿದರು.

ಮೀಸಲಾತಿ ಹೆಚ್ಚಿಸುವುದು ಸುಲಭದ ವಿಷಯವಲ್ಲ, ಅದೊಂದು ಕಠಿಣ ತೀರ್ಮಾನ. ಮುಂದೆ ಯಾವುದೇ ಪರಿಣಾಮ ಎದುರಿಸಬೇಕಾಗಿ ಬರಬಹುದು. ಇದೆಲ್ಲ ಗೊತ್ತಿದ್ದೂ ಲೆಕ್ಕಿಸದೆ ತೀರ್ಮಾನಿಸಿದ್ದರಿಂದ ಐತಿಹಾಸಿಕ ಸಮಾವೇಶದ ಮೂಲಕ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ಇಂದಿನಿಂದ ಮನೆ ಮನೆಗೆ ಹೋಗಿ ಮನವರಿಕೆ ಮಾಡಿ ಜನರನ್ನು ಸೇರಿಸುವ ಕೆಲಸ ಮಾಡಬೇಕು. ನೂರು ಕಿ.ಮೀ.ವರೆಗೆ ವಾಹನ ನಿಲ್ಲಿಸುವಂತೆ ಇರಬೇಕು. ಮೀಸಲಾತಿ ಹೆಚ್ಚಿಸುವುದು ಕಷ್ಟದ ಕೆಲಸ. ಅದಕ್ಕಾಗಿ ಎಷ್ಟುನೋವು ಅನುಭವಿಸಿದ್ದೇನೆ ಎಂಬುದು ಗೊತ್ತಿದೆ. ಎಷ್ಟುಜನರು ಬೈದಿದ್ದಾರೆ, ಎಷ್ಟೋ ಜನರು ಫೋಟೋ ಹಿಡಿದು ಒದೆದಿದ್ದಾರೆ. ರಾಜೀನಾಮೆ ಕೊಡಲಿ ಎನ್ನುವ ಮಾತು ಹೇಳಿದ್ದಾರೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಶ್ರೀರಾಮುಲು ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಂತೆ ಬೆಳೆಯಲು ಶಕ್ತಿ ತುಂಬಬೇಕು. ಅವರು ಉಪ ಮುಖ್ಯಮಂತ್ರಿ ಸ್ಥಾನಕ್ಕಿಂತ ನನಗೆ ಮೀಸಲಾತಿ ಕೊಡಿಸುವುದು ಮುಖ್ಯ ಎಂದು ಹೇಳಿ ನುಡಿದಂತೆ ನಡೆದರು. ಮುಂದೆಯೂ ಸಮಾಜ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

ಮೇಯರ್‌ ಶಿವಕುಮಾರ್‌, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌, ಜಂಗಲ್‌ ಲಾಡ್ಜ್‌ ಅಧ್ಯಕ್ಷ ಎಂ. ಅಪ್ಪಣ್ಣ, ಬಿಜೆಪಿ ಎಸ್ಟಿಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್‌, ರಾಜ್ಯ ಉಪಾಧ್ಯಕ್ಷ ಮಲ್ಲೇಶ್‌ ನಾಯಕ, ಕಾರ್ಯದರ್ಶಿ ಮಂಜುಳಾ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಪ.ಪಂಗಡ ಮೋರ್ಚಾ ಅಧ್ಯಕ್ಷ ಕೆ.ಎಸ್‌. ಅಣ್ಣಯ್ಯ ನಾಯಕ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios