ನಮ್ಮದ್ದು ಅಭಿವೃದ್ಧಿ ಮಂತ್ರ, ಸೋಲೊಪ್ಪಿಕೊಳ್ಳುವುದಲ್ಲ : ಸಾ.ರಾ. ಮಹೇಶ್
ನಮ್ಮದು ಏನಿದ್ದರೂ ಅಭಿವೃದ್ಧಿ ಮಂತ್ರವೇ ಹೊರತು ಬೇರೊಬ್ಬರ ಹಾಗೆ ಕಾಲಿಡಿದು ಎರಡು ಬಾರಿ ಸೋತಿದ್ದೇನೆ, ನನ್ನನ್ನು ಉಳಿಸಿ ಎಂದು ಕೇಳುತ್ತಾ ತಮ್ಮ ಸೋಲನ್ನು ತಾವೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಪರೋಕ್ಷವಾಗಿ (ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್) ವಿರುದ್ಧ ವಾಗ್ದಾಳಿ ನಡೆಸಿದರು.
ಸಾಲಿಗ್ರಾಮ : ನಮ್ಮದು ಏನಿದ್ದರೂ ಅಭಿವೃದ್ಧಿ ಮಂತ್ರವೇ ಹೊರತು ಬೇರೊಬ್ಬರ ಹಾಗೆ ಕಾಲಿಡಿದು ಎರಡು ಬಾರಿ ಸೋತಿದ್ದೇನೆ, ನನ್ನನ್ನು ಉಳಿಸಿ ಎಂದು ಕೇಳುತ್ತಾ ತಮ್ಮ ಸೋಲನ್ನು ತಾವೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಪರೋಕ್ಷವಾಗಿ (ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್) ವಿರುದ್ಧ ವಾಗ್ದಾಳಿ ನಡೆಸಿದರು.
ಸಾಲಿಗ್ರಾಮ ಪಟ್ಟಣದಲ್ಲಿ ಪಂಚರತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ 2018ರಲ್ಲಿ ಸ್ಪರ್ಧಿಸಿ ಒಮ್ಮೆ ಸೋತಿದ್ದರು. ಆದರೆ ಅವರೇ ಎರಡು ಬಾರಿ ಸೋತಿದ್ದೇನೆ ಎಂದು ಹೇಳುತ್ತಾ 2023ರ ಚುನಾವಣೆಯ ಸೋಲನ್ನು ಕೂಡ ಒಪ್ಪಿಕೊಂಡಿದ್ದಾರೆ ಎಂದರು.
ನಿಮ್ಮನ್ನು ಸಾಲಿಗ್ರಾಮ ಕ್ಷೇತ್ರದಿಂದ ಎರಡು ಬಾರಿ ಜಿಪಂ ಸದಸ್ಯನಾಗಿ ಆಯ್ಕೆ ಮಾಡಿದ್ದರು. ಜಿಪಂ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದೀರಿ. ಸಾಲಿಗ್ರಾಮ ಕ್ಷೇತ್ರಕ್ಕೆ ಎಷ್ಟುಅನುದಾನ ತಂದು ಅಭಿವೃದ್ಧಿ ಮಾಡಿದ್ದೀರಿ? 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂದು ಕೂಡ ಯಾವುದೇ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲ್ಲಿಲ್ಲ ಎಂದು ಕುಟುಕಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 25,000 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಪರ ಮತದಾರರ ಒಲವಿದ್ದು ಈ ಬಾರಿಯೂ ಕುಮಾರಣ್ಣ ಮುಖ್ಯಮಂತ್ರಿ ಆಗಲಿದ್ದಾರೆ. ಪಂಚರತ್ನ ಯೋಜನೆ ಜಾರಿಗೆ ತರಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಮಾತನಾಡಿ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾತ್ಯತೀತವಾಗಿ ಸಮಗ್ರ ಅಭಿವೃದ್ಧಿ ಮಾಡುತ್ತಾ ಬಂದಿರುವ ಶಾಸಕ ಸಾ.ರಾ. ಮಹೇಶ್ ಅವರು ಕೆ.ಆರ್. ನಗರ ಪಟ್ಟಣದಲ್ಲಿ ಅತ್ಯಾಧುನಿಕ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸ್ಥಳ ಮತ್ತು ಅನುದಾನ ತಂದು ನೂತನ ಭವನವನ್ನು ನಿರ್ಮಿಸಲು ಶಾಸಕರೇ ಕಾರಣ. ಇಂತಹ ಜನನಾಯಕರನ್ನು ಅತಿ ಹೆಚ್ಚಿನ ಮತಗಳಿಂದ ಜಯಗಳಿಸಬೇಕು ಎಂದರು.
ಇದಕ್ಕೂ ಮುನ್ನ ರಾಮನಾಥಪುರ ರಸ್ತೆಯಿಂದ ಮಹಿಳೆಯರು ಕಳಸಹೊತ್ತು ಸಾವಿರಾರು ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಬೃಹತ್ ದಾಳಿಂಬೆ ಹಣ್ಣಿನ ಹಾರವನ್ನು ಕ್ರೇನ್ ಮೂಲಕ ಹಾಕಿದರು. ಮುಸ್ಲಿಂ ಬಾಂಧವರು 501 ತೆಂಗಿನ ಕಾಯಿಗಳಿಂದ ಈಡುಗಾಯಿ ಹೊಡೆದು ಶುಭ ಕೋರಿದರು.
ಪಂಚರತ್ನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ತುರ್ತು ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮಹಿಳೆಯರು ರಸ್ತೆ ಉದ್ದಕ್ಕೂ ಸಾ.ರಾ. ಮಹೇಶ್ ಅವರಿಗೆ ಜೈಕಾರ ಹಾಕುತ್ತಾ ಸಾಗಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಅಚ್ಯುತಾನಂದ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ತಾಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಸೋಮಶೇಖರ್, ಮಾಜಿ ಅಧ್ಯಕ್ಷ ಎಸ್.ವಿ. ನಟರಾಜ್, ಸತೀಶ್, ಪ್ರಕಾಶ್, ದೇವಿಕಾ, ಸದಸ್ಯರಾದ ಮಂಜು, ಬಲರಾಮ್, ಮುಖಂಡರಾದ ಲಾಲೂ ಸಾಹೇಬ್, ಅಯಾಜ್ ಅಹಮದ್, ರಾಜು, ನಾಗೇಂದ್ರ, ಬಂಡಳ್ಳಿ ಕುಚೇಲ್, ಜಯರಾಮ್ ಸೇರಿ ಹಲವರು ಇದ್ದರು.