ನಮ್ಮ ಬದುಕೇ ದೇವರ ಪೂಜೆಯಾಗಬೇಕು: ಪೇಜಾವರ ಶ್ರೀ
ನಮ್ಮ ಬದುಕೇ ಪೂಜೆಯಾಗಬೇಕು ಎಂದು ಉಡುಪಿಯ ಪೇಜಾವರದ ವಿಶ್ವಪ್ರಸನ್ನ ಶ್ರೀಪಾದರು ಪ್ರತಿಪಾದಿಸಿದರು.
ತುಮಕೂರು : ನಮ್ಮ ಬದುಕೇ ಪೂಜೆಯಾಗಬೇಕು ಎಂದು ಉಡುಪಿಯ ಪೇಜಾವರದ ವಿಶ್ವಪ್ರಸನ್ನ ಶ್ರೀಪಾದರು ಪ್ರತಿಪಾದಿಸಿದರು.
ಅವರು ತುಮಕೂರಿನ ಕೆ.ಆರ್. ಬಡಾವಣೆಯ ಕೃಷ್ಣ ಮಂದಿರದಲ್ಲಿ ಏರ್ಪಡಿಸಿದ್ದ ಬ್ರಹ್ಮಕಲಶೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ನಾವು ಮಾಡುವ ಪ್ರತಿಯೊಂದು ಕೆಲಸವೂ ಪರಿಶುದ್ಧತೆಯಿಂದ ಕೂಡಿರಬೇಕು. ಪ್ರತಿಫಲಾಪೇಕ್ಷೆಯಿಲ್ಲದೆ ದೈವವನ್ನು ಸ್ಮರಿಸುತ್ತ ಮಾಡುವ ಕಾಯಕವು ಸಂತೃಪ್ತಿಯನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ನಮ್ಮ ಇಡೀ ಜೀವನವೇ ದೇವರ ಆರಾಧನೆಯಾಗಬೇಕು ಎಂದರು.
ಸಮಾಜದಲ್ಲಿರುವ ಶ್ರೀಮಂತರು ಅಶಕ್ತರನ್ನು ಮೇಲೆತ್ತಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅದೇರೀತಿ ಮಾನವ ಜೀವನದಲ್ಲಿ ಯಾರಿಗೂ ನೋವುಂಟು ಮಾಡದೆ, ಹಿಂಸಿಸದೆ, ಬದುಕಿದರೆ ಭಗವಂತ ಸಂಪ್ರೀತನಾಗುತ್ತಾನೆ ಎಂಬ ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖಿಸಿದ ಶ್ರೀಗಳು, ಮಕ್ಕಳಿಗೆ ಚಿಕ್ಕಂದಿನಿಂದಲೇ ಸೂಕ್ತ ಸಂಸ್ಕಾರವನ್ನು ನೀಡಲು ಪೋಷಕರು ಪ್ರಾರಂಭಿಸಬೇಕು. ಆಗ ಮಾತ್ರ ಅವರ ಬದುಕು ಶಿಸ್ತುಬದ್ಧವಾಗಿ ಸುವ್ಯವಸ್ಥಿತವಾಗಿರುತ್ತದೆ. ಈ ದಿಸೆಯಲ್ಲಿ ಶ್ರೀ ಕೃಷ್ಣಮಂದಿರವು ದೇವರ ಆರಾಧನೆಯ ಜೊತೆಗೆ ಸಂಸ್ಕಾರ ಕೇಂದ್ರವೂ ಆಗಲಿ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಮಂದಿರವು ನಿರ್ಮಾಣಗೊಂಡು 13 ವರ್ಷಗಳು ಸಂದಿದ್ದು, ದೇವಾಲಯದ ನವೀಕರಣ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಸರಸ್ವತಿ ಉಪಾಧ್ಯ, ಜಿ.ಕೆ.ಶ್ರೀನಿವಾಸ್, ದಯಾರಾಮ್ ಸೇರಿದಂತೆ ಅನೇಕ ದಾನಿಗಳನ್ನು ಶ್ರೀಗಳು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ದೇಗುಲದ ಗೌರವ ಸಲಹೆಗಾರ ಕೆ.ಎಸ್.ಗೋಪಾಲಕೃಷ್ಣರಾವ್, ಕಾರ್ಯಾಧ್ಯಕ್ಷ ಎಚ್. ಶ್ರೀನಿವಾಸ ಹತ್ವಾರ್, ಕಾರ್ಯದರ್ಶಿ ಎಂ.ಎಸ್. ಸೂರ್ಯನಾರಾಯಣರಾವ್, ಟೂಡಾ ಮಾಜಿ ಸದಸ್ಯ ಜಿ.ಕೆ. ಶ್ರೀನಿವಾಸ್, ವ್ಯವಸ್ಥಾಪಕ ಎಚ್.ಎಲ್. ಜನಾರ್ಧನಭಟ್ಟ, ಕೆ. ನಾಗರಾಜಧನ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕೃಷ್ಣಮಂದಿರದಲ್ಲಿ ನವಗ್ರಹಹೋಮ, ಪವಮಾನಹೋಮ, ಮೂಲಮಂತ್ರಹೋಮ, ವಾಸ್ತುಹೋಮ, ಸುದರ್ಶನಹೋಮ ಸೇರಿದಂತೆ ವಿವಿಧ ಪೂಜಾದಿಗಳು ನಡೆದವು. ಶ್ರೀನಿವಾಸ ಹತ್ವಾರ್ ಸ್ವಾಗತಿಸಿದರು. ಸೂರ್ಯನಾರಾಯಣರಾವ್ ಕಾರ್ಯಕ್ರಮ ನಿರೂಪಿಸಿದರು.
ಹೇಳಿಕೆಗೂ ಮುನ್ನ ಸೂಕ್ತ ಆಧಾರ ನೀಡಬೇಕು: ಪೇಜಾವರ ಶ್ರೀ
ತುಮಕೂರು: ಹೇಳಿಕೆ ಕೊಡುವುದಕ್ಕೂ ಮುನ್ನ ಸೂಕ್ತ ಆಧಾರ ಕೊಡಬೇಕು ಎಂದು ಉಡುಪಿ ಪೇಜಾವರ ಶ್ರೀಗಳು ಹೇಳಿದರು.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೇಜಾವರ ಮಠಕ್ಕೆ ಮುಸ್ಲಿಮರು ಜಾಗ ಕೊಟ್ಟಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿ, ಗಂಗಾ ನದಿಯ ತಟದಲ್ಲಿ ತುರುಷ್ಕ ರಾಜ ಮದ್ವಾಚಾರ್ಯರಿಗೆ ಭೂಮಿ ಕೊಟ್ಟಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಯುವ ಕಾಂಗ್ರೆಸ್ ಮುಖಂಡ ರೈ ಈ ಹೇಳಿಕೆ ಕೊಟ್ಟಿದ್ದಾರೆ. ಯಾರೇ ಯಾವುದೇ ಹೇಳಿಕೆಯನ್ನು ಕೊಡಬಹುದು. ಆದರೆ ಅಂತಹ ಹೇಳಿಕೆ ಕೊಡಬೇಕಾದರೆ ಅದಕ್ಕೂ ಮುಂಚೆ ಅದಕ್ಕೆ ಸೂಕ್ತವಾದಂತ ಒಂದು ಆಧಾರ ಕೊಟ್ಟರೆ ಆ ಮಾತಿಗೆ ಬೆಲೆ ಇರುತ್ತದೆ. ಆಧಾರ ರಹಿತವಾಗಿ ಏನು ಬೇಕಾದರೂ ಹೇಳಬಹುದು. ಆಧಾರ ರಹಿತ ಹೇಳಿಕೆಯನ್ನು ಚರ್ಚೆಗೆ ತೆಗೆದುಕೊಳ್ಳುತ್ತಾರೆ ಎಂದರೆ ಅದು ಅರ್ಥಹೀನ ಎನ್ನುವುದು ನನ್ನ ಭಾವನೆ. ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು. ಕೃಷ್ಣಮಠದ ಸನ್ನಿಧಾನ ಇರಬಹುದು. ಇದಕ್ಕೆ ಜಾಗವನ್ನು ರಾಮಭೂಜ ಎನ್ನುವಂತ ರಾಜರು ದಾನ ಕೊಟ್ಟಿದ್ದಾರೆ. ಇದಕ್ಕೆ ದಾಖಲೆ ಇದೆ. ಶಿಲಾ ಶಾಸನಗಳಿವೆ. ಗುರುಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ಕೊಡಬಾರದು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.