ಅನಾಥೆಯ ಬಾಳಿಗೆ ಬೆಳಕಾದ ಜಿಲ್ಲಾಡಳಿತ, ಇಲ್ಲಿ ಜಿಲ್ಲಾಧಿಕಾರಿಯೇ ಬಂಧು- ಶಾಸಕರೇ ಅಣ್ಣ
ಉಡುಪಿಯಲ್ಲಿ ಸರಕಾರವೇ ಕುಟುಂಬದ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಮಹಿಳಾ ನಿಲಯದ ಹೆಣ್ಣೊಬ್ಬಳ ಕೌಟುಂಬಿಕ ಬದುಕಿಗೆ ದಾರಿದೀಪವಾಗಿದೆ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಅ.28): ಯುವತಿಯೊಬ್ಬಳ ಅನಾಥ ಪ್ರಜ್ಞೆ ಹೋಗಲಾಡಿಸುವ ಮಾದರಿ ಕಾರ್ಯವೊಂದು ಉಡುಪಿಯಲ್ಲಿ ನಡೆದಿದೆ. ಸರಕಾರವೇ ಮುಂದೆ ನಿಂತು ಅನಾಥೆಯೊಬ್ಬಳ ಬದುಕಿಗೆ ಬೆಳಕಾಗಿದೆ. ಉಡುಪಿಯ ಸ್ಟೇಟ್ ಹೋಂ ಇಂತಹ ಮಾದರಿ ವಿವಾಹವೊಂದಕ್ಕೆ ಸಾಕ್ಷಿ ಆಯ್ತು. ಇಲ್ಲಿ ಸರಕಾರವೇ ಕುಟುಂಬದ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಮಹಿಳಾ ನಿಲಯದ ಹೆಣ್ಣೊಬ್ಬಳ ಕೌಟುಂಬಿಕ ಬದುಕಿಗೆ ದಾರಿದೀಪವಾಗಿದೆ. ಮನೆಯವರಿಂದ ದೂರವಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ 25ರ ಹರೆಯದ ಯುವತಿ ಜಯಶ್ರೀ ಗೆ ವಿವಾಹ ಯೋಗ ಕೂಡಿಬಂದಿದೆ. ಹೊರ ಜಿಲ್ಲೆಯ ಕೃಷಿ ಕುಟುಂಬದ ಯುವಕ ಮಲ್ಲೇಶ್ ಮುಂದೆ ಬಂದು ಮದುವೆಯಾಗಿದ್ದಾನೆ. ಶುಕ್ರವಾರ ನಡೆದ ಈ ಮದುವೆಯಲ್ಲಿ ಜಿಲ್ಲಾಡಳಿತ ಸಂಭ್ರಮದಿಂದ ತೊಡಗಿಸಿಕೊಂಡಿತ್ತು. ಯುವಕನೇ ಮದುವೆಯ ಪ್ರಸ್ತಾವ ಇಟ್ಟಿದ್ದು, ಆತನ ಜಿಲ್ಲೆಯ ಅಧಿಕಾರಿಗಳ ಮೂಲಕ ಯುವಕನ ಗುಣ-ನಡತೆ, ಕುಟುಂಬಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಈ ವರದಿಗಳನ್ನು ರಾಜ್ಯ ಮಹಿಳಾ ನಿಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೂ ಆಗಿರುವ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿತ್ತು. ಬಳಿಕ ಅನುಮೋದನೆ ನೀಡಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಾಹ ಖರ್ಚಿಗೆ 5 ಸಾವಿರ ರೂ. ನೀಡಲಾಗುತ್ತದೆ. 15 ಸಾವಿರ ರೂ.ಗಳನ್ನು ಯುವತಿಯ ಹೆಸರಿನಲ್ಲಿ ಸರಕಾರ ಠೇವಣಿ ಇಡುತ್ತದೆ. ದಾನಿಗಳೂ ನೆರವಿಗೆ ಮುಂದೆ ಬಂದಿದ್ದು ಜೇಷ್ಠ ಡೆವಲಪರ್ಸ್ ಸಂಸ್ಥೆಯು ಯುವತಿಗೆ ಕರಿಮಣಿ ಸರ, ಮದುವೆಯ ಸೀರೆ ನೀಡಿದ್ದಾರೆ. ನಗರಸಭಾಧ್ಯಕ್ಷೆ ಜವುಳಿಯನ್ನು ನೀಡಿದ್ದಾರೆ. ಅಂಬ ಲಪಾಡಿ ದೇವಸ್ಥಾನದಿಂದ ಮಧ್ಯಾಹ್ನ ದೂಟದ ವ್ಯವಸ್ಥೆ ಮಾಡಲಾಗಿತ್ತು.
ಮಹಿಳಾ ನಿಲಯದ ಎಲ್ಲಾ ನಿಲಯಾರ್ಥಿಗಳು, ಸಿಬ್ಬಂದಿ, ಅಧಿಕಾರಿ ವರ್ಗ ಪ್ರಸ್ತುತ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.
ಕರ್ನಾಟಕದ ಸರಕಾರದ ಲಾಂಛನ, ಆದಿ ಪೂಜಿತ ಗಣಪತಿ ದೇವರ ಚಿತ್ರದೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿತ್ತು. ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯ, ಆಯೋಜಕರು ಮತ್ತು ವಧು-ವರನ ಹೆಸರು ಮುದ್ರಿಸಿದ ಆಮಂತ್ರಣ ಪತ್ರಿಕೆಯನ್ನು ಹಂಚಿ, ನಿಟ್ಟೂರು ರಾಜ್ಯ ಮಹಿಳಾ ನಿಲಯಲ್ಲಿ ಮದುವೆ ಪೂರೈಸಲಾಗಿದೆ.
ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ರಾಜ್ಯ ಮಹಿಳಾ ನಿಲಯ ಅಧೀಕ್ಷಕರು ಶುಭಾಕಾಂಕ್ಷಿಗಳಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ನಿಲಯದ ವತಿಯಿಂದ ಪ್ರಸ್ತಾವ ಪರಿಶೀಲಿಸಿ ವಿವಾಹ ನೆರವೇರಿಸುವ ಬಗ್ಗೆ ವರದಿ ನೀಡಿದ್ದರು. ಅದರಂತೆ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಸಮಿತಿ ಒಪ್ಪಿಗೆ ನೀಡಿದೆ ಎಂದು ಮದುವೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೋರ್ಮಾರಾವ್ ತಿಳಿಸಿದ್ದಾರೆ.
ಮದುವೆ ಪ್ರಸ್ತಾವ ಬಂದ ಅನಂತರ 6 ತಿಂಗಳು ಕಾಲ ಎಲ್ಲ ಬಗೆಯ ಪರಿಶೀಲನೆ, ಪ್ರಕ್ರಿಯೆ ನಡೆದಿದೆ. ನಿಟ್ಟೂರು ಮಹಿಳಾ ನಿಲಯದಲ್ಲಿ ಸರಳವಾಗಿ ಶಾಸ್ರೋಕ್ತವಾಗಿ ವಿವಾಹ ಸಮಾರಂಭ ನಡೆಸಲಾಗಿದೆ.
ಆಶ್ರಮದಲ್ಲಿ ಬೆಳೆದ ಹೆಣ್ಣಿನ ಮದುವೆಯಲ್ಲಿ ಅಣ್ಣನ ಜವಾಬ್ದಾರಿ ಪೂರೈಸಿದ ಶಾಸಕ ರಘುಪತಿ ಭಟ್:
ಉಡುಪಿ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಬೆಳೆದ ಅನಾಥ ಹುಡುಗಿ ಜಯಶ್ರೀ ( ವಿಜಯಶ್ರೀ) ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ವಧುವಿನ ಅಣ್ಣನ ಸ್ಥಾನದಲ್ಲಿ ನಿಂತು ಹೊದಳ್ ಎರೆದರು. ನವದಂಪತಿಗಳಿಗೆ ಸ್ವತಹ ಶಾಸಕರು ಉಪಸ್ಥಿತರಿದ್ದು ಶುಭ ಹಾರೈಸಿದರು.