Asianet Suvarna News Asianet Suvarna News

ಬಿಬಿಎಂಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಹುಮ್ಮಸ್ಸು ತಂದ ಚುನಾವಣೆಯ ಆದೇಶ

ಬರುವ ಡಿಸೆಂಬರ್‌ 31ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿರುವುದರಿಂದ ಕಳೆದ ಎರಡು ವರ್ಷದಿಂದ ಚುನಾವಣೆ ಎದುರು ನೋಡುತ್ತಿರುವ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ಹುಮ್ಮಸ್ಸು ಬಂದಂತಾಗಿದೆ. 

order of election brought excitement among bbmp ticket aspirants gvd
Author
First Published Oct 1, 2022, 6:01 AM IST

ಬೆಂಗಳೂರು (ಅ.01): ಬರುವ ಡಿಸೆಂಬರ್‌ 31ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿರುವುದರಿಂದ ಕಳೆದ ಎರಡು ವರ್ಷದಿಂದ ಚುನಾವಣೆ ಎದುರು ನೋಡುತ್ತಿರುವ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ಹುಮ್ಮಸ್ಸು ಬಂದಂತಾಗಿದೆ. ಹೊಸದಾಗಿ ವಾರ್ಡ್‌ ಮೀಸಲಾತಿ ನಿಗದಿಪಡಿಸುವಂತೆ ಆದೇಶಿಸಿರುವುದರಿಂದ, ಹಿಂದಿನ ಮೀಸಲಾತಿ ನಿಗದಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದೇ ಇದ್ದವರು ಈಗ ಹೊಸ ಮೀಸಲಾತಿ ಪಟ್ಟಿಯಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದೆ ನಿಗದಿ ಮಾಡಿದ್ದ ಮೀಸಲಾತಿಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸದಸ್ಯರು, ತಮ್ಮ ಪಕ್ಷದ ನಾಯಕರ ವಿರುದ್ಧವೂ ಅಸಮಧಾನಗೊಂಡಿದ್ದರು. ಇದೀಗ ಹೊಸ ಮೀಸಲಾತಿ ಪಟ್ಟಿಯಲ್ಲಾದರೂ ತಮ್ಮ ಪರವಾಗಿ ಮೀಸಲಾತಿ ನಿಗದಿ ಮಾಡುವಂತೆ ಶುಕ್ರವಾರ ಸಂಜೆಯಿಂದಲೆ ತಮ್ಮ ಪಕ್ಷದ ನಾಯಕರ ಬಳಿ ದಂಬಾಲು ಬೀಳಲು ಆರಂಭಿಸಿದ್ದಾರೆ.

BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ : ಸಚಿವ ಶ್ರೀರಾಮುಲು

ವರ್ಷಾಂತ್ಯಕ್ಕೂ ಚುನಾವಣೆ ಡೌಟು?: ಡಿ.31ರ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸುವ ಕುರಿತಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಳ್ಳುವವರೆ ಪಾಲಿಕೆ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಬಿಜೆಪಿ ಸರ್ಕಾರವಿದ್ದರೆ ಚುನಾವಣೆ ಇಲ್ಲವೇ?: ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಬಿಎಂಪಿ ಚುನಾವಣೆಗೆ ನಿಗದಿತ ಅವಧಿಯಲ್ಲಿ ನಡೆದಿದ್ದೇ ಇಲ್ಲ. ಕಳೆದ 2006ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸರ್ಜಿಸಿ ಬಿಬಿಎಂಪಿಯನ್ನು ರಚಿಸಲಾಯಿತು. ಆ ಕಾರಣದಿಂದಾಗಿ ಬರೋಬ್ಬರಿ 3 ವರ್ಷ 4 ತಿಂಗಳು ಬೆಂಗಳೂರು ಸ್ಥಳೀಯ ಆಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿಲ್ಲದಂತಾಗಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ, ಅದೇ ರೀತಿ ಬಿಬಿಎಂಪಿ ಅವಧಿ ಮುಗಿದು ಎರಡು ವರ್ಷವಾಗಿದೆ. ಆದರೆ, ಚುನಾವಣೆ ಮಾಡಲು ರಾಜ್ಯ ಸರ್ಕಾರ ಒಂದಿಲ್ಲೊಂದು ನೆಪ ಹೇಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.

80 ಲಕ್ಷ ಮತದಾರರು: ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿರುವ ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯಲ್ಲಿ 41,14,383 ಪುರುಷ ಮತದಾರರು, 38,03,747 ಮಹಿಳಾ ಮತದಾರರು, 1,433 ಇತರೆ ಮತದಾರರು ಸೇರಿದಂತೆ ಒಟ್ಟು 79,19,563 ಮತದಾರರಿದ್ದಾರೆ.

ಹೊಸ ಮೀಸಲು ಪಟ್ಟಿಗಾಗಿ ಸಮಿತಿ ರಚನೆ ಬಗ್ಗೆ ಚರ್ಚೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ವಾರ್ಡ್‌ ಮೀಸಲಾತಿ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಆದೇಶಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಬೇಕಾ ಅಥವಾ ಅಧಿಕಾರಿಗಳಿಂದಲೇ ಮಾಡಿಸಬೇಕಾ ಎಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಪಾಲಿಕೆ ಚುನಾವಣೆಯನ್ನು ಡಿ.31ರೊಳಗೆ ನಡೆಸಲು ಹೈಕೋರ್ಟ್‌ ಹೇಳಿದೆ. ವಾರ್ಡ್‌ ಮೀಸಲಾತಿ ಸರಿಪಡಿಸುವಂತೆಯೂ ತಿಳಿಸಿದೆ. ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಲ್ಲ. ಅದಕ್ಕೂ ಮುನ್ನ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕೆಂಬುದು ಸರ್ಕಾರ ಇಚ್ಛೆಯಾಗಿದೆ. ಹೀಗಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿ ಹೈಕೋರ್ಟ್‌ ಆದೇಶವನ್ನು ಪೂರ್ಣ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಚುನಾವಣೆ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದರಿಂದಲೇ ಮೀಸಲಾತಿ ಪ್ರಕಟ ಮಾಡಲಾಗಿತ್ತು ಎಂದು ತಿಳಿಸಿದರು.

BBMP Election: 1 ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸಿದ್ಧರಾಗಿದ್ದೇವೆ. ರಾಜ್ಯ ಚುನಾವಣಾ ಆಯೋಗ ನೀಡುವ ನಿರ್ದೇಶನದಂತೆ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಚುನಾವಣಾ ಕೆಲಸ ಮಾಡುತ್ತೇವೆ. ಈಗಾಗಲೇ ಮತದಾರರ ಅಂತಿಮ ಪಟ್ಟಿಪ್ರಕಟಿಸಲಾಗಿದೆ.
-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತರು, ಬಿಬಿಎಂಪಿ

Follow Us:
Download App:
  • android
  • ios