ಕೊಬ್ಬರಿ ಖರೀದಿಗೆ ಮರು ನೋಂದಣಿಗೆ ಆದೇಶ ಸ್ವಾಗತಾರ್ಹ : ರೈತ ಸಂಘ
ನಫೆಡ್ ಕೊಬ್ಬರಿ ಖರೀದಿ ನೋಂದಣಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಸರ್ಕಾರ ಆಗಿರುವ ನೋಂದಣಿ ರದ್ದುಪಡಿಸಿ ಹೊಸದಾಗಿ ರೈತರ ನೋಂದಣಿ ಪ್ರಾರಂಭಿಸಲು ಆದೇಶಿಸಿರುವುದನ್ನು ಸ್ವಾಗತಿಸುತ್ತೇವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ ತಿಳಿಸಿದರು.
ತಿಪಟೂರು : ನಫೆಡ್ ಕೊಬ್ಬರಿ ಖರೀದಿ ನೋಂದಣಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಸರ್ಕಾರ ಆಗಿರುವ ನೋಂದಣಿ ರದ್ದುಪಡಿಸಿ ಹೊಸದಾಗಿ ರೈತರ ನೋಂದಣಿ ಪ್ರಾರಂಭಿಸಲು ಆದೇಶಿಸಿರುವುದನ್ನು ಸ್ವಾಗತಿಸುತ್ತೇವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ರೈತ ಸಂಘ, ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಫೆಡ್ ಕೊಬ್ಬರಿ ಖರೀದಿ ನೋಂದಣಿಯಲ್ಲಿ ಆಗಿರುವ ಅಕ್ರಮವನ್ನು ರೈತ ಸಂಘ ಸರ್ಕಾರದ ಗಮನಕ್ಕೆ ತಂದು, ಹಲವಾರು ಜಿಲ್ಲೆಗಳಲಿ ರೈತರ ನೋಂದಣಿ ವೇಳೆ ಅಕ್ರಮ ನಡೆದಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಅಕ್ರಮ ನೋಂದಣಿಯನ್ನು ರದ್ದುಗೊಳಿಸಿ ಮರು ನೋಂದಣಿ ಮಾಡಲು ಆಗ್ರಹಿಸಿತ್ತು. ಅದರಂತೆ ಸರ್ಕಾರ ಮರು ನೋಂದಣಿಗೆ ಆದೇಶಿಸಿದ್ದು ಸರಿಯಾಗಿದೆ ಎಂದರು.
ಮರು ನೋಂದಣಿ ಸಮಯದಲ್ಲಿ ಅನುಸರಿಸಬೇಕಾದ ಮಾನದಂಡಗಳು ಹಾಗೂ ಕೈಗೊಳ್ಳಬೇಕಾದ ಕೆಲವು ಕ್ರಮಗಳ ಬಗ್ಗೆ ರೈತಸಂಘಟನೆಗಳ ತಕರಾರಿದೆ ಎಂದು ತಿಳಿಸಿದರು.
ಒಟ್ಟಾರೆ 69500 ಮೆಟ್ರಿಕ್ ಟನ್ ಕೊಬ್ಬರಿಯನ್ನು ನಫೆಡ್ ಮೂಲಕ ಕೊಳ್ಳಲು ಉದ್ದೇಶಿಸಲಾಗಿದ್ದು ಮೊದಲು ಆದ ನೋಂದಣಿ ವೇಳೆ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್ ಕೊಬ್ಬರಿ ನೋಂದಣಿ ಮಾಡಲು ಇದ್ದ ಅವಕಾಶವನ್ನು ಮಾರ್ಪಾಡು ಮಾಡಿ ಒಬ್ಬ ರೈತನಿಂದ ಗರಿಷ್ಠ 15ಕ್ವಿಂಟಲ್ ಕೊಬ್ಬರಿಗೆ ಇಳಿಸಲಾಗಿದೆ. ಒಟ್ಟಾರೆ ಕೊಬ್ಬರಿ ಕೊಳ್ಳುವಿಕೆಯನ್ನು ಜಿಲ್ಲಾವಾರು ವಿಭಾಗ ಮಾಡಿ ಆಯಾ ಜಿಲ್ಲೆಯ ಕೊಬ್ಬರಿ ಇಳುವರಿಗೆ ಅನುಸಾರವಾಗಿ ನೋಂದಣಿ ಹಾಗೂ ಖರೀದಿ ನಿಗದಿಪಡಿಸಿದೆ. ಆದರೆ ತೋಟಗಾರಿಕೆ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಸರ್ಕಾರ ಖರೀದಿ ನಿಗದಿಪಡಿಸಿದೆ. ಆದರೆ ಈ ಅಂಕಿ ಅಂಶಗಳು ಅವೈಜ್ಞಾನಿಕವಾಗಿದ್ದು ಸರಿಯಾಗಿಲ್ಲದ ಕಾರಣ ಈ ಹಿಂದೆ ಎಲ್ಲ ಎಪಿಎಂಸಿಗಳಿಗೆ ರೈತರು ತರುವ ಕೊಬ್ಬರಿ ತೂಕದ ಅನುಸಾರ ತಾಲೂಕುವಾರು ಕೊಬ್ಬರಿ ಖರೀದಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಕೊಬ್ಬರಿ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ ಮಾತನಾಡಿ, ಈ ಹಿಂದೆ ಆರು ಬಾರಿ ನಫೆಡ್ ಮೂಲಕ ಕೊಬ್ಬರಿ ಖರೀದಿ ನಡೆಸಲಾಗಿದ್ದು ಪ್ರತಿ ಬಾರಿ ನಫೆಡ್ ಪ್ರಾರಂಭವಾದಾಗಲೂ ಮಾರುಕಟ್ಟೆ ಕೊಬ್ಬರಿ ಬೆಲೆ ಹೆಚ್ಚಾಗುತ್ತಿತ್ತು. ಆದರೆ ಕಳೆದ ಬಾರಿಯಿಂದ ನಫೆಡ್ ಪ್ರಾರಂಭವಾದರೂ ಮಾರುಕಟ್ಟೆ ಬೆಲೆ ಹೆಚ್ಚಾಗುತ್ತಿಲ್ಲ. ಆದ್ದರಿಂದ ಯಾವುದೇ ರೈತರಿಗೆ ಅನ್ಯಾಯವಾಗದಂತೆ ರೈತರಿಂದ ಕೊಬ್ಬರಿ ಖರೀದಿಸಬೇಕು ಹಾಗೂ ಈಗಿರುವ ಮಿತಿಯನ್ನು ಹೆಚ್ಚು ಮಾಡಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತರಾದ ಬಿಳಿಗೆರೆ ನಾಗೇಶ್, ಶ್ರೀಕಾಂತ್ ಕೆಳಹಟ್ಟಿ, ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮತ್ತಿತರಿದ್ದರು.