ಉಡುಪಿ, [ಆ.31]: ರಾಷ್ಟ್ರದಲ್ಲಿ ವಿರೋಧ ಪಕ್ಷಗಳು ವಿಫಲವಾಗಿದ್ದು, ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೀಗೆಲ್ಲ ಮಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿಗೆ ಈ ಧೋರಣೆ ಮಾರಕ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವೀರಪ್ಪ ಮೊಯ್ಲಿ,  ಕೇಂದ್ರದ ವೈಫಲ್ಯ ಜನರಿಗೆ ತಲುಪಿಸಲು ಕಾಂಗ್ರೆಸ್ ನಾಯಕರು ಮೊದಲು ಎಚ್ಚೆತ್ತುಕೊಂಡು ಸಕ್ರಿಯ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಮುಂದಾಗಬೇಕು. ಇದು ಕಾಂಗ್ರೆಸ್‌ನ ರಾಷ್ಟ್ರೀಯ ಕರ್ತವ್ಯವೂ ಹೌದು ಎಂದು ಹೇಳಿದರು.

ಜಾರಿ ನಿರ್ದೇಶನಾಲಯ(ಇ.ಡಿ.) ಮೂಲಕ ಹೆದರಿಸುವ ಕೆಲಸ ಆಗುತ್ತಿದೆ. ಚಿದಂಬರಂ ಅವರನ್ನು ಒಳಗೆ ಹಾಕಿದ್ದಾರೆ. ಇನ್ನು ಡಿಕೆಶಿಯನ್ನೂ ಒಳಗೆ ಹಾಕುತ್ತಾರೆ. ಆದರೆ, ಪ್ರಜಾಪ್ರಭುತ್ವ ಹಿತರಕ್ಷಣೆಗೆ ಕಾಂಗ್ರೆಸ್ ನಾಯಕರು ಹೆದರಬಾರದು ಎಂದರು. 

ಪ್ರವಾಹದಿಂದ ಆಗಿರುವ ನಷ್ಟ ಐವತ್ತು ಸಾವಿರ ಕೋಟಿ ಅಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಕೋಟಿ ನಷ್ಟವಾಗಿದೆ. ಐಎಎಸ್ ಅಧಿಕಾರಿಗಳ ನಿಯೋಗದಿಂದ ಪ್ರಯೋಜನ ಇಲ್ಲ. ತಜ್ಞರ ಸಮಿತಿ‌ ಮಾಡಬೇಕು. ಕೇಂದ್ರ ಸರ್ಕಾರ ಪ್ರವೇಶ ಆಗಬೇಕು. ಇವತ್ತಿನವರೆಗೆ ಕೇಂದ್ರ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಪ್ರಧಾನಿ  ಅ. 7ಕ್ಕೆ ಬರುತ್ತಾರಂತೆ. ಅವರು ಬಂದು ಘೋಷಣೆ ಮಾಡಬೇಕು ಎನ್ನುವುದು ಏನಿದೆ? ಪರಿಹಾರ ಘೋಷಣೆಗೆ ಕಾಯುವುದು ಸರಿಯಲ್ಲ. ಗೃಹ ಸಚಿವರು ರಾಷ್ಟ್ರೀಯ ವಿಪತ್ತು ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅಮಿತ್ ಶಾ ರಾಜ್ಯದ ಸ್ಥಿತಿ ನೋಡಿದ್ದಾರೆ. ಹಾಗಿದ್ದರೂ ಪರಿಹಾರ ಘೋಷಣೆಗೆ ವಿಳಂಬ ಯಾಕೆ? ರಾಜ್ಯದಲ್ಲಿ ಸಿಎಂ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸ ಪಡೆದಿಲ್ಲ. ಪ್ರವಾಹದ ಕುರಿತು ಕರೆದು ಮಾತನಾಡಿಸಿಲ್ಲ, ಅಭಿಪ್ರಾಯ ಪಡೆದಿಲ್ಲ ಎಂದು ದೂರಿದರು.

ಇನ್ನು ಬ್ಯಾಂಕ್ ವಿಲೀನ ಬಗ್ಗೆ ಮಾತನಾಡಿದ ಅವರು, ಬ್ಯಾಂಕ್ ವಿಲೀನ ಪ್ರಧಾನಿ‌ ಮೋದಿಯ ಆತುರದ ನಿರ್ಧಾರ. ರಾತ್ರಿ ನಿರ್ಧಾರ ಮಾಡುತ್ತಾರೆ. ಬೆಳಗ್ಗೆ ಘೋಷಣೆ ಮಾಡುತ್ತಾರೆ. ಕಾಶ್ಮೀರ ವಿಚಾರದಲ್ಲೂ ಪ್ರಧಾನಿ ಆತುರದ ನಿರ್ಧಾರ ಮಾಡಿದ್ದಾರೆ ಎಂದು ಕಿಡಿಕಾರಿದರು. 

ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್‌ಗಳ ತೊಟ್ಟಿಲು. ಅವಿಭಜಿತ ಜಿಲ್ಲೆಗಳು ನಾಲ್ಕು ಬ್ಯಾಂಕ್‌ಗಳ ತವರು. ವಿಜಯ ಬ್ಯಾಂಕ್ ವಿಲೀನ ಆಯ್ತು. ಈಗ ಕೆನರಾ, ಸಿಂಡಿಕೇಟ್ ಕಾರ್ಪೋರೇಷನ್ ಬ್ಯಾಂಕ್ ಸರದಿ. ಬ್ಯಾಂಕ್ ವಿಲೀನದ ಸಾಧಕ ಬಾಧಕ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಈ ಎಲ್ಲ ಬ್ಯಾಂಕ್‌ಗಳಿಗೂ ಒಂದು ಅಸ್ಮಿತೆ ಇದೆ. ಜನರಿಂದ ಬ್ಯಾಂಕುಗಳನ್ನು ದೂರ ಕೊಂಡೊಯ್ಯಲಾಗುತ್ತಿದೆ. ವಿಲೀನ ಮಾಡುವ ಮೂಲಕ ದೊಡ್ಡ ಬ್ಯಾಂಕ್ ಮಾಡುತ್ತೇವೆ ಎನ್ನುತ್ತಾರೆ. ಈ ಬ್ಯಾಂಕುಗಳು ಇನ್ನು ಹಳ್ಳಿಗರಿಗೆ ತಲುಪಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದಾರೆ ಎಂದು ಆರೋಪಿಸಿದರು.