ಶಿವಮೊಗ್ಗ[ಜ.17]  ಕಾಂಗ್ರೆಸ್ ಹಾಗು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿ ಗುರುವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿನ ಬಿ. ಎಸ್. ಯಡಿಯೂರಪ್ಪರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿ. ಎಸ್.ಯಡಿಯೂರಪ್ಪ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಅವರ ಹೆಸರಿನಲ್ಲಿ ಆಸ್ಪತ್ರೆ ಚೀಟಿ ಪಡೆದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕುವ ವಿಷಯ ತಿಳಿದಿದ್ದ ಪೊಲೀಸರು ಯಡಿಯೂರಪ್ಪ ಮನೆಗೆ ಭದ್ರತೆ ಒದಗಿಸಿದ್ದರು.

ಬಿ.ಎಸ್.ಯಡಿಯೂರಪ್ಪ ಅವರು ಬುದ್ಧಿ ಭ್ರಮಣೆ ಆದವರಂತೆ ವರ್ತಿಸುತ್ತಿದ್ದಾರೆ. ಪದೇ ಪದೇ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದ್ದಾರೆ. ಅವರ ಮಕ್ಕಳು ಕೂಡ ಕುದುರೆ ವ್ಯಾಪಾರದಲ್ಲಿ ತಲ್ಲೀನರಾಗಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಿಡಿಸಿದರು.

ಯಡಿಯೂರಪ್ಪನವರು ಅಧಿಉಕಾರವಿಲ್ಲದೇ ಹತಾಶರಾಗಿದ್ದಾರೆ. ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಬೇಕೆಂಬ ಭ್ರಮೆಯಲ್ಲಿದ್ದಾರೆ. ಈ ಆಟ ಇನ್ನು ಮುಂದೆ ನಡೆಯುವುದಿಲ್ಲ. ಇನ್ನಾದರೂ ಅವರು ಇಂತಹ ಬುದ್ದಿ ಭ್ರಮಣೆ ವರ್ತನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೊನೆಗೂ ಮುಂಬೈ ಭೇಟಿ ಕಾರಣ ಬಿಚ್ಚಿಟ್ಟ ‘ಅತೃಪ್ತ’ ಶಾಸಕ

ಅಧಿಕಾರದ ಆಸೆಗಾಗಿ ಶಾಸಕರನ್ನು ಖರೀದಿಸುವ ಯತ್ನ ನಡೆಸಿದ್ದಾರೆ. ಅನೇಕರಿಗೆ ಹಲವು ರೀತಿಯಲ್ಲಿ ಆಮಿಷವೊಡ್ಡಿದ್ದಾರೆ. ಹಲವು ಬಾರಿ ಇಂತಹ ಘಟನೆ ಮರುಕಳಿಸಿದೆ. ಬಿಜೆಪಿ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿಲ್ಲಿಸದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಮುಖಂಡರಾದ ಎಚ್.ಸಿ.ಯೋಗೀಶ್, ಕೆ.ರಂಗನಾಥ್, ಹೆಚ್.ಪಿ.ಗಿರೀಶ್, ನಿತಿನ್, ಮಯೂರ, ಆರ್.ಕಿರಣ್, ಟಿ.ವಿ.ರಂಜಿತ್, ಬಿ.ಲೋಕೇಶ್, ರಾಹುಲ್, ಮೊಹಮ್ಮದ್ ಇಯಾತ್ ಮತ್ತಿತರರು ಪಾಲ್ಗೊಂಡಿದ್ದರು.