ಬೆಂಗಳೂರು [ನ.30]:  ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಡಿಮೆಯಾಗಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೀಗಾಗಿ ಈರುಳ್ಳಿ ಈಗಲೂ ಗ್ರಾಹಕರಿಗೆ ದುಬಾರಿಯಾಗಿದೆ.

ಜತೆಗೆ, ಈರುಳ್ಳಿ ಬೆಲೆ ಇನ್ನೂ ಕೆಲವು ದಿನ ಇದೇ ರೀತಿ ಇದ್ದರೆ ಹೋಟೆಲ್‌ಗಳಲ್ಲಿ ವಿವಿಧ ತಿಂಡಿ- ತಿನಿಸುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಕಳೆದ 15 ದಿನದಿಂದ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದರಿಂದ ಒಂದು ವಾರದಿಂದೀಚೆಗೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಆದರೆ, ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 10 ಸಾವಿರ ರು. ಇದ್ದದ್ದು, ಈಗ 8 ಸಾವಿರಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆವ್ಯಾಪಾರಿಗಳು ಮಾತ್ರ ದರ ಇಳಿಸದೆ ಸಂದರ್ಭದ ಲಾಭ ಪಡೆಯುವಲ್ಲಿ ಮಗ್ನರಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೊಂದೆಡೆ ಹೋಟೆಲ್‌ ಉದ್ಯಮಿಗಳು, ಚಾಟ್ಸ್‌ ವ್ಯಾಪಾರಿಗಳು ಈರುಳ್ಳಿ ಬೆಲೆಗೆ ತತ್ತರಿಸಿದ್ದು, ಈರುಳ್ಳಿ ಹೆಚ್ಚಾಗಿ ಬಳಸಿ ತಯಾರಿಸುವ ಖಾದ್ಯಗಳನ್ನು ಕೆಲ ಹೋಟೆಲ್‌ಗಳು ಕಡಿಮೆ ಮಾಡಿವೆ. ಮುಂಬರುವ ದಿನಗಳಲ್ಲೂ ಈರುಳ್ಳಿ ದರ ಹತೋಟಿಗೆ ಬರದಿದ್ದರೆ ತಿಂಡಿ, ಪದಾರ್ಥಗಳ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್‌ ಉದ್ಯಮಿಗಳು.

ಸಗಟು ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕೆ.ಜಿ. 50ರಿಂದ 60, ಗುಣಮಟ್ಟದ್ದು 80 ರು. ನಿಗದಿಯಾಗಿದೆ. ಎರಡು ದಿನಗಳಲ್ಲಿ ಬೆಲೆ ಶೇ.5-10 ಕಡಿಮೆಯಾಗಿದೆ. ಕ್ವಿಂಟಾಲ್‌ಗೆ ಕನಿಷ್ಠ 2000ರಿಂದ 6000 ರು., ಗರಿಷ್ಠ 8000 ರು.ಗೆ ಖರೀದಿಯಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆ.ಜಿ. 50-60 ರು., ದಪ್ಪ ಗಾತ್ರದ್ದು 80ರಿಂದ 90 ರು., ಅತ್ಯುತ್ತಮ 100ರಿಂದ 120 ರು. ಇದೆ. ಮಾರುಕಟ್ಟೆಗಳಲ್ಲಿ ಖರ್ಚು ವೆಚ್ಚ ಸೇರಿಸಿ ಮಾರಾಟ ಮಾಡಲಾಗುತ್ತದೆ. ಹೊಸ ಬೆಳೆ ಬರುವವರೆಗೆ ಈರುಳ್ಳಿ ದರ ಏರಿಳಿತ ಕಾಣಲಿದೆ ಎಂದು ಎಪಿಎಂಸಿ ಈರುಳ್ಳಿ ವರ್ತಕರಾದ ಬಿ.ರವಿಶಂಕರ್‌ ತಿಳಿಸಿದರು.