ಬೆಂಗಳೂರು [ಸೆ.10]:  ವರಮಹಾಲಕ್ಷ್ಮೀ ಹಾಗೂ ಗೌರಿ-ಗಣೇಶ ಹಬ್ಬಕ್ಕೆ ಹೆಚ್ಚಾಗಿದ್ದ ತರಕಾರಿ ಬೆಲೆ ಇಳಿಕೆ ಕಂಡಿದ್ದು, ಜನರಲ್ಲಿ ನಿರಾಳ ಮೂಡಿಸಿದೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗ ತೊಡಗಿದೆ. ಗಗನಕ್ಕೇರಿದ್ದ ಟೊಮೆಟೋ ದರ ಸಗಟು ಮಾರುಕಟ್ಟೆಯಲ್ಲಿ 6-8 ರು. ವರೆಗೆ ಕುಸಿದಿದೆ.

ಬಹುತೇಕ ತರಕಾರಿ ಬೆಲೆಯಲ್ಲಿ ಶೇ.20ರಷ್ಟುಕಡಿಮೆಯಾಗಿದೆ. ಈ ಬಾರಿ ಉತ್ತಮ ಮಳೆ ಅಗಿರುವುದರಿಂದ ವಿವಿಧ ತರಕಾರಿ ಸಾಕಷ್ಟು ಬೆಳೆಯಲಾಗಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾಸಿಪಾಳ್ಯದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಸೇರಿದಂತೆ ತರಕಾರಿ, ಸೊಪ್ಪು ಆವಕ ಆಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಕೆಲವು ದಿನಗಳ ಹಿಂದಷ್ಟೇ ಬೆಲೆ ಏರಿಕೆಯಿಂದ ಕಂಗೆಡಿಸಿದ್ದ ಟೊಮೆಟೋ ಸಗಟು ದರ ಕೆ.ಜಿ. 6ರಿಂದ 8ಕ್ಕೆ ನಿಗದಿಯಾಗಿದ್ದು, ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ರೈತರು ಹಾಗೂ ವ್ಯಾಪಾರಿಗಳು ನಷ್ಟಅನುಭವಿಸುವಂತಾಗಿದೆ. ಕೆ.ಆರ್‌.ಮಾರುಕಟ್ಟೆಯಲ್ಲಿ ಟೊಮೆಟೋ ಕೆ.ಜಿ. 10ರಿಂದ 15 ರು.ಗೆ ಮಾರಾಟವಾಗುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಬೀನ್ಸ್‌ ಕೆ.ಜಿ. 25-40 ರು., ಕ್ಯಾರೆಟ್‌ ನಾಟಿ ಕೆ.ಜಿ. 25-32 ರು., ಕ್ಯಾರೆಟ್‌ ಊಟಿ ಕೆ.ಜಿ. 34-40 ರು., ಬೀಟ್‌ರೂಟ್‌ ಕೆ.ಜಿ. 20ರಿಂದ 26 ರು., ಬೆಂಡೆಕಾಯಿ ಕೆ.ಜಿ. 16-22 ರು., ಹಿರೇಕಾಯಿ 22ರಿಂದ 26 ರು., ಹಸಿಮೆಣಸಿನಕಾಯಿ 26-27 ರು., ದಪ್ಪ ಮೆಣಸಿನಕಾಯಿ ಕೆ.ಜಿ. 24-30 ರು., ನವಿಲುಕೋಸ್‌ ಕೆ.ಜಿ. 10-16 ರು., ಮೂಲಂಗಿ 10ರಿಂದ 14 ರು., ಹೂಕೋಸು ಒಂದಕ್ಕೆ 8-16 ರು., ಗುಂಡು ಬದನೆಕಾಯಿ ಕೆ.ಜಿ. 8-12 ರು., ಮೈಸೂರು ಬದನೆಕಾಯಿ ಕೆ.ಜಿ. 18ರಿಂದ 28 ರು.ಗೆ ಮಾರಾಟವಾಗುತ್ತಿದೆ. ಕೆ.ಆರ್‌.ಮಾರುಕಟ್ಟೆಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆಯಲ್ಲಿ ವ್ಯತ್ಯಾಸವಿದೆ ಎನ್ನುತ್ತಾರೆ ಎಪಿಎಂಸಿಯ ಚಂದ್ರಶೇಖರ್‌.

 ಈರುಳ್ಳಿ ಬೆಲೆ 45​​-50 ರು.!

ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯನ್ನೇ ನೆಪವಾಗಿಸಿಕೊಂಡ ವರ್ತಕರು, ದಾಸ್ತಾನುಗಾರರು ಈರುಳ್ಳಿಗೆ ಬೇಡಿಕೆ ಸೃಷ್ಟಿಸಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ದಪ್ಪ ಗಾತ್ರದ ಈರುಳ್ಳಿ ಕೆ.ಜಿ. 27ರಿಂದ 30 ರು., ಹೊಸ ಈರುಳ್ಳಿ ಕೆ.ಜಿ. 27-28 ರು.ಗೆ ನಿಗದಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 45ರಿಂದ 50ರು. ಗೆ ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.

ಕರ್ನಾಟಕದಲ್ಲಿ ಹೊಸ ಬೆಳೆ ಬರುವವರೆಗೆ ದರ ಏರಿಕೆಯತ್ತ ಸಾಗಲಿದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಬೆಳೆ ಕಟಾವಿಗೆ ಬರುವುದರಿಂದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಸದ್ಯ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಎಪಿಎಂಸಿಗೆ ಶುಕ್ರವಾರ 150 ಲೋಡ್‌, ಶನಿವಾರ 200 ಲೋಡ್‌ ಈರುಳ್ಳಿ ಸರಬರಾಜಾಗಿದೆ. ಚಿತ್ರದುರ್ಗ ಚಳ್ಳಕೆರೆಯಿಂದ 30ರಿಂದ 40 ಗಾಡಿ ಬಂದಿದೆ. ನೆರೆ ಹಾವಳಿಯಿಂದ ಈರುಳ್ಳಿ ಬೆಳೆಗೆ ಹೊಡೆತ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಲಿದೆ ಎಂದು ಎಪಿಎಂಸಿ ಈರುಳ್ಳಿ ವರ್ತಕರಾದ ಬಿ.ರವಿಶಂಕರ್‌ ಮಾಹಿತಿ ನೀಡಿದರು.