ಬೆಂಗಳೂರು [ಅ.05]:  ರಸ್ತೆಯ ಇಕ್ಕೆಲಗಳಲ್ಲೂ ಬಣ್ಣ ಬಣ್ಣಗಳ ಹೂವುಗಳ ರಾಶಿ, ವಿವಿಧ ಬಗೆಯ ಹಣ್ಣು, ತರಕಾರಿ, ಪೇರಿಸಿಟ್ಟಬಾಳೆ ಕಂದುಗಳದ್ದೇ ಕಾರುಬಾರು. ಭಾರಿ ಜನಸಂದಣಿ ನಡುವೆಯೂ ಬತ್ತದ ಹಬ್ಬದ ಉತ್ಸಾಹ. ಇದು ನಗರದ ಬಹುಮುಖ್ಯ ವ್ಯಾಪಾರಿ ಕೇಂದ್ರವಾದ ಕೆ.ಆರ್‌.ಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯಾವಳಿ.

ಶರನ್ನವರಾತ್ರಿಯ ಕೊನೆಯ ದಿನದಂದು ಆಚರಿಸುವ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಯ ವಹಿವಾಟು ಜೀವ ತಳೆದಿದೆ. ಮಳೆಯ ನಡುವೆಯೂ ಜನರು ಹಬ್ಬಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಆಯುಧಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಕೆಲವು ಹೂವು, ಹಣ್ಣುಗಳ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿದೆ. ಆದರೂ ಹಬ್ಬವನ್ನು ಮಾಡುವ ಅನಿವಾರ್ಯಕ್ಕೆ ಸಿಲುಕಿ ತರಕಾರಿ, ಹಣ್ಣು, ಹೂವುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದ ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿವಿಧ ಬೆಲೆಯಲ್ಲಿ ವ್ಯಾಪಾರಿಗಳು ಹಣ್ಣು, ಹೂವು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಸ್ಥಿರತೆ ದಾಖಲಿಸಿದ್ದ ಕೆಲ ಹೂವುಗಳ ಬೆಲೆ ಮಾತ್ರ ಹೆಚ್ಚಳಗೊಂಡಿದೆ. ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಸಹ ಇಳಿಕೆಯಾಗಿದ್ದು, ಕೆ.ಜಿ. 30ರಿಂದ 60 ರು. ಗೆ ಮಾರಾಟವಾಗುತ್ತಿದೆ. ಕೆಲ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಈ ವರ್ಷ ಮಳೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ಅಡ್ಡಿಯಾಗದ ಮಳೆ:

ನಗರದಲ್ಲಿ ಸುರಿಯುತ್ತಿರುವ ಮಳೆ ಹಬ್ಬದ ವಹಿವಾಟಿಗೆ ತಡೆಯುಂಟು ಮಾಡಿಲ್ಲ. ನಗರದ ಗಾಂಧಿಬಜಾರ್‌, ಜಯನಗರ, ವಿಜಯನಗರ, ಮಲ್ಲೇಶ್ವರಂ, ಮೈಸೂರು ರಸ್ತೆ, ಮಡಿವಾಳ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಜನರು ಮಳೆಯ ನಡುವೆಯೇ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿ ಮನೆಗೊಯ್ಯುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ಮಾವಿನ ಸೊಪ್ಪು, ಬೇವು, ಬಾಳೆ ಕಂದು ಬಂದಿವೆ.

ವೀಳ್ಯೆದೆಲೆ ಕಟ್ಟಿಗೆ 50ರಿಂದ 70 ರು., ಮಾವಿನ ಸೊಪ್ಪು ಒಂದು ಕಟ್ಟಿಗೆ 10-30 ರು., ಬಾಳೆ ಕಂದು 40 ರಿಂದ 400ರು.ವರೆಗೂ ಮಾರಾಟಗೊಳ್ಳುತ್ತಿದೆ.

ರಸ್ತೆಯ ಇಕ್ಕೆಲಗಳಲ್ಲಿ ಗಾಡಿ ವ್ಯಾಪಾರಿಗಳು, ಬಾಳೆ ಕಂದು, ಮಾವು-ಬೇವಿನ ಎಲೆ ಮಾರಾಟ ಮಾಡಲು ಜಮಾಯಿಸಿರುವುದರಿಂದ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಒಂದೆಡೆ ಗಿಜಿಗುಡುವ ವಾಹನಗಳು, ಇನ್ನೊಂದೆಡೆ ತ್ಯಾಜ್ಯದಿಂದ ಕೂಡಿದ್ದ ರಸ್ತೆ ಜನರನ್ನು ಹೈರಣಾಗಿಸಿತ್ತು.

ಬೂದು ಕುಂಬಳಕಾಯಿಗೆ ಬೇಡಿಕೆ

ನಾಡ ಹಬ್ಬ ದಸರಾ ಉತ್ಸವದೊಂದಿಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬ ಮಾರುಕಟ್ಟೆಯನ್ನು ರಂಗೇರಿಸಿದೆ. ಹಬ್ಬದಲ್ಲಿ ಪೂಜೆಗೆ ಬಹುಮುಖ್ಯವಾಗಿ ಬಳಸುವ ಬೂದು ಕುಂಬಳಕಾಯಿ ಮಾರುಕಟ್ಟೆಗೆ ಆಗಮಿಸಿದ್ದು, ಬಹುಬೇಡಿಕೆ ಕುದುರಿಸಿಕೊಂಡಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬೂದು ಕುಂಬಳಕಾಯಿಯ ಇಳುವರಿಗೆ ವರವಾಗಿ ಪರಿಣಮಿಸಿದೆ. ಆಯುಧ ಪೂಜೆ ಪ್ರಯುಕ್ತ ಮಾರಾಟಕ್ಕಾಗಿ ರಾಶಿಗಟ್ಟಲೆ ಬೂದು ಕುಂಬಳಕಾಯಿ ಈಗಾಗಲೇ ಮಾರುಕಟ್ಟೆಪ್ರವೇಶಿಸಿದ್ದು, ಇವುಗಳ ಬೆಲೆಗಳು ಗಗನಕ್ಕೇರಿದೆ. ಒಂದು ಬೂದು ಕುಂಬಳಕಾಯಿಗೆ ಗುಣಮಟ್ಟ, ಆಕಾರದ ಆಧಾರದ ಮೇಲೆ 60, 75, 100, 150 ರು. ವರೆಗೆ ರೈತರು, ವ್ಯಾಪಾರಿಗಳು ಬೆಲೆ ನಿಗದಿಗೊಳಿಸಿದ್ದಾರೆ. ಕೆ.ಜಿ.ಗೆ 25ರಿಂದ 30 ರು., ಗುಣಮಟ್ಟದ ಒಂದು ಕಾಯಿಗೆ 70ರಿಂದ 80 ರು. ವರೆಗೆ ಖರೀದಿಯಾಗುತ್ತಿದೆ.

ಈ ಬಾರಿ ಮಳೆ ಚೆನ್ನಾಗಿ ಬಂದಿರುವುದರಿಂದ ಬೂದುಗುಂಬಳ ಇಳುವಳಿಯೂ ಉತ್ತಮವಾಗಿದೆ. ಹಾಪ್‌ಕಾಮ್ಸ್‌ಗೆ 25ರಿಂದ 30 ಟನ್‌ ಬೂದುಗುಂಬಳ ಬಂದಿದೆ. ಹಬ್ಬದ ಸಂದರ್ಭದಲ್ಲಿ ಒಟ್ಟು 150 ಟನ್‌ ತರಕಾರಿ ಖರೀದಿಯಾಗುತ್ತದೆ. ಶೇ.25ರಿಂದ 30ರಷ್ಟುಮಾರಾಟ ಹೆಚ್ಚಾಗಿದೆ. ತರಕಾರಿ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಬೂದುಗುಂಬಳ ಬೆಲೆ ಕೆ.ಜಿ. 25, ಈರುಳ್ಳಿ ಬೆಲೆ ಕೆ.ಜಿ. 54 ರು. ಇದ್ದು, ಇಳಿಕೆಯಾಗಿದೆ.

-ಡಾ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಹಾಪ್‌ಕಾಮ್ಸ್‌.


ಹಾಪ್‌ಕಾಮ್ಸ್‌

ತರಕಾರಿಗಳು (ಕೆ.ಜಿ.ಗಳಲ್ಲಿ)

ಹುರುಳಿಕಾಯಿ 50 ರು.

ಗೋರಿಕಾಯಿ 48 ರು.

ದಪ್ಪ ಮೆಣಸಿನಕಾಯಿ 40 ರು.

ಊಟಿ ಕ್ಯಾರೆಟ್‌ 56 ರು.

ನಾಟಿ ಕ್ಯಾರೆಟ್‌ 48 ರು.

ಡಬಲ್‌ ಬೀನ್ಸ್‌ 93 ರು.

ಬೀನ್ಸ್‌ 58 ರು.

ಬೆಂಡೆಕಾಯಿ 47 ರು.

ಈರುಳ್ಳಿ 53 ರು.

ಈರುಳ್ಳಿ (ದಪ್ಪ) 54 ರು.

ಕೆ.ಆರ್‌.ಮಾರುಕಟ್ಟೆ

ಹೂವುಗಳು... (ಕೆ.ಜಿ.ಗೆ)

ಮಲ್ಲಿಗೆ 600-800 ರು.

ಕನಕಾಂಬರ 1000 ರು.

ಕಾಕಡ 500 ರು.

ಸುಗಂಧರಾಜ 150-200 ರು.

ರೋಜ್‌ 120-150 ರು.

ಸೇವಂತಿ 100-200 ರು.

ಚೆಂಡು ಹೂ 40-50 ರು.