ಬೆಂಗಳೂರು (ಡಿ.06):  ಪೂರೈಕೆ ಕೊರತೆಯಿಂದ ಈ ಹಿಂದೆ 100 ರು. ಗಡಿ ದಾಟಿದ್ದ ಈರುಳ್ಳಿ ದರ ಇದೀಗ ಮತ್ತಷ್ಟುಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 25-26 ರು.ಗೆ ಮಾರಾಟವಾಗುತ್ತಿದೆ.

ಈಗ ಮಾರುಕಟ್ಟೆಗೆ ಸಾಕಷ್ಟುಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿದೆ. ಇದರಿಂದ ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದರ ಕುಸಿತ ಕಂಡಿದೆ. ಒಂದೂವರೆ ತಿಂಗಳ ಹಿಂದೆ ಕೆ.ಜಿ. ಈರುಳ್ಳಿ 100ರ ಗಡಿ ದಾಟಿತ್ತು. ಬಳಿಕ ಹಂತ ಹಂತವಾಗಿ ಬೆಲೆ ಇಳಿಕೆಯಾಗಿತ್ತಾದರೂ ಇದೀಗ ಇನ್ನಷ್ಟುಕುಸಿತವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40-50 ರು., ಹಾಪ್‌ಕಾಮ್ಸ್‌ನಲ್ಲಿ 66 ರು.ಗೆ ಮಾರಾಟವಾಗುತ್ತಿದೆ.

ಕಿಚನ್‌ನಲ್ಲಿ exhaust fan ಇಲ್ವಾ? ಹೀಗ್ ಹೊಗೆ ಹೋಗಿಸಬಹುದು ನೋಡಿ ...

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಿಂದ 220 ಟ್ರಕ್‌ ಈರುಳ್ಳಿ   ಯಶವಂತಪುರ ಎಪಿಎಂಸಿಗೆ ಬಂದಿದೆ. ಜತೆಗೆ ಈಜಿಪ್ಟ್‌ ಮತ್ತು ಇರಾನ್‌ನಿಂದ ಐದು ಟ್ರಕ್‌ನಷ್ಟುಈರುಳ್ಳಿ ತರಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇದೆ, ಹೊಸ ಈರುಳ್ಳಿಯೂ ಬರುತ್ತಿರುವುದರಿಂದ ದರದಲ್ಲಿ ಸಾಕಷ್ಟುಇಳಿಕೆಯಾಗಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ -ಆಲೂಗಡ್ಡೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಉದಯಶಂಕರ್‌ ಹೇಳಿದರು.

ಈಗ ಎರಡು ದಿನಗಳಿಂದ ಜಡಿ ಮಳೆ ಹಿಡಿದಿದೆ. ಮಳೆ ಹೆಚ್ಚಾದರೆ ಈರುಳ್ಳಿ ಹಾಳಾಗುತ್ತದೆ. ಅದರಿಂದ ದರದಲ್ಲಿ ಸ್ವಲ್ಪ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಈಜಿಪ್ಟ್‌ ಈರುಳ್ಳಿ ಆಕರ್ಷಣೆ

ನಗರದ ವಿವಿಧ ಪ್ರದೇಶವಾರು ಮಾರುಕಟ್ಟೆಯಲ್ಲಿ ಗುಲಾಬಿ ಬಣ್ಣದ ದಪ್ಪ ಗಾತ್ರದ ಈರುಳ್ಳಿ ತಳ್ಳು ಗಾಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಇದರ ಬಗ್ಗೆ ಗ್ರಾಹಕರಿಗೆ ಹೆಚ್ಚು ಮಾಹಿತಿಯಿಲ್ಲ. ಆದರೆ ನೋಡಲು ಆಕರ್ಷಕವಾಗಿದ್ದು, ಕೊಳ್ಳುಗರನ್ನು ಸೆಳೆಯುತ್ತಿದೆ. ಇದು ಕೆ.ಜಿ.ಗೆ 60-70 ರು. ಇದೆ. ಈಜಿಪ್ಟ್‌ ಈರುಳ್ಳಿ ತುಸು ಖಾರವಿದ್ದು, ಸ್ಥಳೀಯ ಈರುಳ್ಳಿಯಂತೆ ರುಚಿಯಿರುವುದಿಲ್ಲ. ನೀರಿನಂಶ ಹೆಚ್ಚಿರುತ್ತದೆ. ಆದರೆ ಗ್ರಾಹಕರು ಉತ್ತಮ ಗುಣಮಟ್ಟದ ಈರುಳ್ಳಿ ಎಂದು ತಿಳಿದು ಖರೀದಿಸುತ್ತಿದ್ದಾರೆ.