ಟಿ. ನರಸೀಪುರ [ಸೆ.19]: ಹಡೆದ ಮಕ್ಕಳೇ ಹೆತ್ತಮ್ಮನನ್ನು ಎಲ್ಲಾದರೂ ಸಾಯೋಗು ಅಂತ ಹೇಳಿದ್ದಕ್ಕೆ ಮನನೊಂದ ವೃದ್ಧೆಯೊಬ್ಬರು ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ತ್ರಿವೇಣಿ ಸಂಗಮದಲ್ಲಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಹೋಬಳಿಯ ತೆಳ್ಳನೂರು ಗ್ರಾಮದ ದಿ. ಪುಟ್ಟಬುದ್ಧಪ್ಪ ಪತ್ನಿ ಪದ್ಮಮ್ಮ (80) ಆತ್ಮಹತ್ಯೆ ಯತ್ನಿಸಿದ ವೃದ್ಧೆ. 80ರ ಗಡಿಯನ್ನು ದಾಟಿದ್ದರಿಂದ ಮಕ್ಕಳೇ ಸಾಯೋಗು ಅಂದದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಪಟ್ಟಣಕ್ಕೆ ಆಗಮಿಸಿದ್ದಾರೆ.

ತ್ರಿವೇಣಿ ಸಂಗಮದ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ ನೋಡಿದ ಯುವಕರು ವೃದ್ಧೆಯನ್ನು ನದಿಯಿಂದ ಮೇಲಕ್ಕೆ ಕರೆ ತಂದು ವಿಚಾರಿಸಿದಾಗ ವಿಳಾಸ ತಿಳಿಸಿದ್ದು, ನಾಲ್ವರು ಮಕ್ಕಳಲ್ಲಿ ಇಬ್ಬರು ಪುತ್ರಿಯರು ವಿವಾಹವಾಗಿದ್ದಾರೆ. ಇಬ್ಬರು ಪುತ್ರರಲ್ಲಿ ವಿವಾಹವಾಗಿರುವ ಹಿರಿಯ ವೃತ್ತಿಯಲ್ಲಿ ಪತ್ರಕರ್ತ ಆಗಿರುವ ಶಿವಬಸಪ್ಪ (ಗುರುರಾಜ…) ಬೈಯ್ದು ನರಸೀಪುರ ನದಿಗೆ ಬಿದ್ದು ಸಾಯದೇ ಬದುಕಿದ್ದೀಯಲ್ಲ ಅಂತ ಹೇಳಿದ್ದರಿಂದ ಸಾಯಲಿಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ನೀವು ಸಾಯೋದು ಬೇಡವೆಂದು ವೃದ್ಧೆಯ ಮನವೊಲಿಸಿದ ಯುವಕರು ನಿಮಗೆ ನೆರವು ನೀಡಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡವ ಸಮಾಜ ಸೇವಕ ಎಂ. ಮಾದೇಶ್‌ ಅವರನ್ನು ಭೇಟಿಯಾಗಿ ಎಂದಾಗ ಅವರನ್ನೇ ಇಲ್ಲಿಗೆ ಬರೋಕೆ ಹೇಳಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

ವೃದ್ಧೆಯ ಅಹವಾಲು ಆಲಿಸಿದ ಸಮಾಜ ಸೇವಕ ಎಂ. ಮಾದೇಶ ಅವರು ವೃದ್ಧಾಶ್ರಮದಲ್ಲಿ ವಾಸ್ತವ್ಯವಿರುವಂತೆ ಸಲಹೆ ನೀಡಿದ್ದಕ್ಕೆ ಆಸ್ತಿವಂತೆಯಾಗಿ, ಮಕ್ಕಳಿರುವ ನಾನು ಆಶ್ರಮಕ್ಕೆ ಹೋಗಲ್ಲವೆಂದು ಪದ್ಮಮ್ಮ ತಿಳಿಸಿದರು. ಹಾಗಾದರೆ ನಿಮ್ಮ ಮಕ್ಕಳನ್ನು ಸಂಪರ್ಕಿಸಿ ಕರೆ ಮಾಡಿ ಬರುವಂತೆ ಹೇಳುತ್ತೇವೆ ಎಂದು ಹಿರಿಯ ಜೀವವನ್ನು ಸಂತೈಸಿದ್ದಾರೆ. ಈಗ ವೃದ್ಧೆ ಪಟ್ಟಣದ ಪೊಲೀಸ್‌ ಠಾಣೆಯಲ್ಲಿದ್ದಾರೆ.