ಅಂಕೋಲಾ [ಡಿ.22]:  ಕೈ-ಕಾಲು ಕಟ್ಟಿ ವೃದ್ದ ದಂಪತಿಯನ್ನು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ (78) ಹಾಗೂ ಇವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68) ಕೊಲೆಯಾದವರು. 

ಕೈಕಾಲು ಕಟ್ಟಿ ಕೊಲೆ: ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ  ಒಳನುಗ್ಗಿದ್ದು, ದಂಪತಿ ಮೇಲೆ ಖಾರದ ಪುಡಿ ಎರಚಿ ಹತ್ಯೆಗೈದಿದ್ದಾರೆ. ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕಅವರ ಮೃತ ದೇಹವು ಕೈ-ಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ.

ಇನ್ನು ಸಾವಿತ್ರಿ ನಾಯಕ ಅವರ ಮೃತದೇಹವು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್ ನಿಂದ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಗಮ್ ಟೇಪ್ ಸುತ್ತಿ ಕೊಲೆ ಮಾಡಲಾಗಿದೆ. ಇಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಒದಗಿಸಿದ್ದಾರೆ.

ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು: ಸ್ಥಿತಿವಂತರಾದ ನಾರಾಯಣ ನಾಯಕ ದಂಪತಿಗಳ ಮೂವರು ಪುತ್ರರು, ಇಬ್ಬರು ಪುತ್ರಿಯರು ಕೆಲಸದ ನಿಮಿತ್ತ ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಒಬ್ಬ ಮಗ ಪ್ರಶಾಂತ ಮಾತ್ರ ಮನೆಯ ಹತ್ತಿರವಿರುವ ಇನ್ನೊಂದು ಮನೆಯಲ್ಲಿ ವಾಸವಾಗಿದ್ದನು.

ಆದರೆ, ಕಳೆದ 2 ದಿನದಿಂದ ಈತನು ತನ್ನ ಪತ್ನಿಯ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತೆರಳಿದ್ದರಿಂದ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಸಂಬಂಧಿ ಮಾರುತಿ ನಾಯಕ ಅವರು ಮೃತರ ಮೊಮ್ಮಗನನ್ನು ಬಿಡಲು ಮನೆಯ ಬಳಿ ಬಂದಾಗ ಘಟನೆ ನೋಡಿ ಹೌಹಾರಿ, ಪೊಲೀಸರಿಗೆ ಮಾಹಿತಿ ನೀಡಿದರು.

ಬಿಹಾರಿಗಳ ಮೇಲೆ ಪೊಲೀಸರ ಕಣ್ಣು: ನಾರಾಯಣ ನಾಯಕ ಅವರ ಮನೆಯ ಇನ್ನೊಂದು ಬದಿಯಲ್ಲಿ ಕಳೆದೊಂದು ವರ್ಷದಿಂದ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಕೆಲಸಕ್ಕೆ ಆಗಮಿಸಿದ್ದ ಮೂವರು ಬಿಹಾರ ರಾಜ್ಯದ ಕಾರ್ಮಿಕರು ಬಾಡಿಗೆಗೆ ಉಳಿದಿದ್ದರು ಎನ್ನಲಾಗಿದೆ. ಈ ಮೂವರು ಸಹ ಕಳೆದ ಮೂರು ತಿಂಗಳ ಹಿಂದೆ ಬಾಡಿಗೆ ಮನೆ ಬಿಟ್ಟು ತೆರಳಿದ್ದರು ಎಂದು ತಿಳಿದುಬಂದಿದೆ. ಅಪರಾಧದ ಶೈಲಿ ಗಮನಿಸಿದಲ್ಲಿ ಹೊರ ರಾಜ್ಯದ ದರೋಡೆಕೋರ ದುಷ್ಕರ್ಮಿಗಳ ಕೈವಾಡ ಇದೆಯೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದುಷ್ಕರ್ಮಿಗಳು ಕಾರೇಬೈಲ್ ಶಾಲೆಯ ಬದಿಯಿಂದ ಅಕ್ಕಿಯ ಗಿರಣಿಯ ಒಳ ಮಾರ್ಗದಿಂದ ಮನೆಯ ಹಿಂಬದಿಯಿಂದ ಬಂದು ಒಳನುಗ್ಗಿ ಕೃತ್ಯ ಎಸೆಗಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಷರು ಆಗಮಿಸಿ ಪರಿಶಿನೆ ನಡೆಸಿದ್ದಾರೆ. 

ದರೋಡೆಗಾಗಿ ಕೊಲೆ?: ಮನೆಯ  ಮಾಳಿಗೆಯ ಕಪಾಟಿನಲ್ಲಿ ಇಡಲಾಗಿದ್ದ ಹಣ ಮತ್ತು ಚಿನ್ನಾಭರಣವನ್ನು ದುರ್ಷ್ಕಮಿಗಳು ಕದ್ದೊಯ್ದಿದ್ದಾರೆ. ಆದರೆ, ಮಹಿಳೆಯ ಮೈ ಮೇಲೆ ಇದ್ದ 58 ಗ್ರಾಂನ ಮಂಗಳ ಸೂತ್ರ ಮತ್ತು ಚಿನ್ನದ ಬಳೆಯನ್ನು ಹಾಗೆಯೆ ಬಿಟ್ಟು ಹೋಗಿದ್ದು, ಪೊಲೀಸರ ತನಿಖೆಯ ಹಾದಿ ಕವಲೊಡೆಯಲು ಕಾರಣವಾಗಿದೆ. ಪ್ರಕರಣ ಮೇಲ್ನೊಟಕ್ಕೆ ದರೋಡೆಗಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಸ್ಳಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಡಿವೈಎಸ್ಫಿ ಶಂಕರ ಮಾರಿಹಾಳ, ಕಾರವಾರದ ಸಿಪಿಐ ಸಂತೋಷ ಶೆಟ್ಟಿ, ಅಂಕೊಲಾ ಠಾಣೆಯ ಪಿಎಸೈ ಸಂಪತ್‌ಕುಮಾರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.