Asianet Suvarna News Asianet Suvarna News

ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ: ಪರಂ

ರಾಜ್ಯದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ತೀವ್ರ ಬರಗಾಲ ಆವರಿಸಿದ್ದು ಮಳೆ ಬೆಳೆ ಇಲ್ಲದೆ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಸ್ಪಂದಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

Officials act responsibly: Param snr
Author
First Published Nov 28, 2023, 8:34 AM IST

  ತಿಪಟೂರು :  ರಾಜ್ಯದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ತೀವ್ರ ಬರಗಾಲ ಆವರಿಸಿದ್ದು ಮಳೆ ಬೆಳೆ ಇಲ್ಲದೆ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಸ್ಪಂದಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬರ ನಿರ್ವಹಣೆಗಾಗಿ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು ಇಂತಹ ಬರಗಾಲವನ್ನು ಎಂದೂ ಕಂಡಿರಲಿಲ್ಲ. ಒಂದು ಭಾಗದಲ್ಲಿ ಮಳೆಯಾದರೆ ಮತ್ತೊಂದು ಭಾಗದಲ್ಲಿ ಮಳೆಯಾಗುತ್ತಿಲ್ಲ ಅಷ್ಟರ ಮಟ್ಟಿಗೆ ಬರ ತಾಂಡವವಾಡುತ್ತಿದೆ. ರಾಜ್ಯದಲ್ಲಿ 276 ತಾಲೂಕುಗಳಲ್ಲಿ 216 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶಗಳೆಂದು ಗುರುತಿಸಿದ್ದು ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸರ್ಕಾರ ಬದ್ಧವಾಗಿದೆ.

ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕರೆದು ಸೂಚನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ 600-800 ಕೋಟಿ ರು. ಇದ್ದು ಸರ್ಕಾರ 500 ಕೋಟಿ ರು. ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. ತುಮಕೂರು ಜಿಲ್ಲೆಗೆ 15 ಕೋಟಿ ರು. ನೀಡಲಾಗಿದ್ದು ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ಸೇರಿ ಒಟ್ಟು 33ಕೋಟಿ ರು. ನೀಡಲಾಗಿದೆ. ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ 18ಸಾವಿರ ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ ಕೈಕಟ್ಟಿ ಕೂರುವುದಿಲ್ಲ. ರೈತರಿಗೆ ನೀಡಬೇಕಾದ ಬರ ಪರಿಹಾರವನ್ನು ನೀಡಲಿದ್ದು, ಈಗಾಗಲೇ ಗುಬ್ಬಿ, ಚಿ.ನಾಹಳ್ಳಿ, ತಿಪಟೂರು ತಾಲೂಕುಗಳಲ್ಲಿ ಬರ ಸಮೀಕ್ಷೆ ನಡೆಸಲಾಗಿದ್ದು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬೇಜವಾಬ್ದಾರಿ ಬಿಟ್ಟು ನಿಮ್ಮ ತಾಲೂಕುಗಳಲ್ಲಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಬೇಕು. ಕೆಲವರು ಟೀಕೆ ಟಿಪ್ಪಣಿ ಮಾಡುತ್ತಾರೆ. ಆದರೆ ಸರ್ಕಾರಕ್ಕೆ ಮತ್ತು ನಮಗೆ ಮಾತ್ರ ಸತ್ಯ ಏನೆಂಬುದು ತಿಳಿದಿದ್ದು ಅಧಿಕಾರಿ ವರ್ಗದವರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಯನ್ನು ನೀಡಿದರೆ ಸರ್ಕಾರ ಬರ ನಿರ್ವಹಣೆಯ ಹಣವನ್ನು ಬಿಡುಗಡೆ ಮಾಡಲಿದೆ. ಆದ್ದರಿಂದ ಅಧಿಕಾರಿಗಳು ಅಭಿವೃದ್ಧಿಯ ದಿಕ್ಸೂಚಿಯಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳಬೇಕು ಎಂದರು

ಸಭೆಯಲ್ಲಿ ಕೃಷಿ ಇಲಾಖೆ, ಪಶುಸಂಗೋಪನೆ, ಕುಡಿಯುವ ನೀರು, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ವರದಿಗಳನ್ನು ಪರಿಶೀಲನೆ ನಡೆಸಿದರು.

ಶಾಸಕ ಕೆ. ಷಡಕ್ಷರಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಸಿ.ಇ.ಓ. ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬರದಗಡೆ, ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್, ಜಿಲ್ಲಾ ತೋಟಗಾರಿಕೆ ಇಲಾಖೆಯ ಶಾರದ, ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ದೊಡ್ಡಯ್ಯ, ಪಶು ಸಂಗೋಪನೆ ಇಲಾಖೆಯ ಡಾ. ನಂದೀಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios