ಉತ್ತರಕನ್ನಡ: ಬಸ್‌ಗಾಗಿ ವಿದ್ಯಾರ್ಥಿಗಳ ಬೇಡಿಕೆ, ಕ್ಯಾರೇ ಅನ್ನದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಪ್ರದೇಶಗಳಲ್ಲಿ ಇನ್ನೂ ಬಸ್ ಸೇವೆಗಳೇ ಇಲ್ಲ. ಇದರಿಂದಾಗಿ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇಂದಿಗೂ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡೇ ಸಾಗುತ್ತಿದ್ದಾರೆ.

Officers Did Not Respond Students Problems in Uttara Kannada grg

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಆ.07): ಉತ್ತರಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆಗಳ ಕೊರತೆಯಿರೋದ್ರಿಂದ ಇಲ್ಲಿ ಸರಕಾರಿ ಬಸ್‌ಗಳದ್ದೇ ಕಾರುಬಾರು. ಆದರೆ, ಜಿಲ್ಲೆಯ ಸಾಕಷ್ಟು ಪ್ರದೇಶಗಳಲ್ಲಿ ಇನ್ನೂ ಬಸ್ ಸೇವೆಗಳೇ ಇಲ್ಲ. ಇದರಿಂದಾಗಿ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇಂದಿಗೂ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡೇ ಸಾಗುತ್ತಿದ್ದಾರೆ. ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗದ ಕಾರಣ ಇದೀಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ರಾಜ್ಯದ ಎರಡನೇ ದೊಡ್ಡ ಜಿಲ್ಲೆಯಾಗಿರುವ ಉತ್ತರಕನ್ನಡ ಜಿಲ್ಲೆ ಪ್ರಕೃತಿ ಸಂಪದ್ಭರಿತವಾಗಿದ್ರೂ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿಂದಿದೆ. ಈ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ಯೋಜನೆ, ಹಲವು ಡ್ಯಾಂಗಳ ನಿರ್ಮಾಣದ ಮೂಲದ ದೇಶ ಹಾಗೂ ರಾಜ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿದ್ದರೂ, ಮೂಲಭೂತ ಸೌಕರ್ಯಗಳಿಂದ ಹಿಂದಿದೆ.‌ ಜಿಲ್ಲೆಯಲ್ಲಿ ಸಾಕಷ್ಟು ಹಳ್ಳಿ ಪ್ರದೇಶಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಬಸ್ ಸೇವೆ ಇಲ್ಲದ ಕಾರಣ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡೇ ಸಾಗಿ ಶಾಲಾ-ಕಾಲೇಜುಗಳತ್ತ ತೆರಳುತ್ತಿದ್ದಾರೆ. ಹೊನ್ನಾವರದ ಬೈಲು ಗದ್ದೆ, ಮಾಲ್ಕೋಡು, ನಗರಬಸ್ತಿಕೇರಿ ಸೇರಿ ಹಲವು ಭಾಗಗಳು ಮಾತ್ರವಲ್ಲದೇ, ಭಟ್ಕಳ, ಕುಮಟಾ, ಸಿದ್ಧಾಪುರ ಭಾಗದ ಗ್ರಾಮಾಂತರ ಪ್ರದೇಶಗಳಲ್ಲೂ ಇದೇ ಸಮಸ್ಯೆಯಾಗಿರೋದ್ರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೇ, ಜನ ಸಾಮಾನ್ಯರಿಗೂ ಇದರಿಂದ ತೊಂದರೆಯಾಗುತ್ತಿದೆ.

ಉತ್ತರಕನ್ನಡ: ಗ್ಯಾರೇಜ್‌ ಸೇರಿಕೊಂಡ ಜನಸೇವೆಗಿದ್ದ ಆ್ಯಂಬುಲೆನ್ಸ್‌..!

ಇನ್ನು ಕೆಲವೆಡೆಯಂತೂ ಲೆಕ್ಕ ಭರ್ತಿಗೆ ಬೆಳಗ್ಗೆ ಒಂದು ಟ್ರಿಪ್ ಹಾಗೂ ಸಂಜೆ ಒಂದು ಟ್ರಿಪ್ ಹೊಡೆಯಲಾಗುತ್ತದೆ‌. ಅದು ಕೂಡಾ ಯಾವ್ಯಾವುದೋ ಸಮಯದಲ್ಲಿ. ವಿದ್ಯಾರ್ಥಿಗಳು ಹೇಳೋ ಪ್ರಕಾರ, ಬೆಳಗ್ಗೆ 6.30ರ ಅಂದಾಜಿಗೆ ಕಾಲೇಜಿಗೆ ಹೊರಟರೂ, ಬೆಳಗ್ಗೆ 11 ಗಂಟೆಯಾದರೂ ಸಮಯಕ್ಕೆ ಬಸ್ ಬರುವುದೇ ಇಲ್ಲ. ಪ್ರತೀ ಬಾರಿಯೂ ನಾವು ತರಗತಿ ಮಿಸ್ ಮಾಡಬೇಕಾದ ಸ್ಥಿತಿ ಎದುರಾಗುತ್ತಿದೆ. ಕಳೆದ 3 ವರ್ಷಗಳಿಂದ ಬಸ್‌ ಸೇವೆಗಾಗಿ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಶಾಸಕರಲ್ಲಿ ಮನವಿ ಮಾಡಲಾಗಿದೆ. ಆದರೆ, ಪ್ರತೀ ಬಾರಿಯೂ ಬಸ್ ಸೇವೆ ಮಾಡಿಸಿಕೊಡ್ತೇವೆ ಅನ್ನೋ ಆಶ್ವಾಸನೆ ನೀಡ್ತಾರೆ ಹೊರತು ವಿದ್ಯಾರ್ಥಿಗಳ ಬೇಡಿಕೆಯನ್ನು ಯಾರೂ ಈಡೇರಿಸುತ್ತಿಲ್ಲ. ಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಪ್ರತಿ ಬಸ್‌ಗಳ ರಸ್ತೆಯನ್ನು ಬಂದ್ ಮಾಡಿ ನಾವು ಉಗ್ರ ಹೋರಾಟ ಮಾಡ್ತೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ 6 ಶಾಸಕರಿದ್ದರೂ ಇನ್ನೂ ಕೂಡ ಸಾಕಷ್ಟು ಪ್ರದೇಶಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಸೋತಿದ್ದಾರೆ. ಈ ಕಾರಣದಿಂದ ಜಿಲ್ಲೆಯ ವಿವಿಧೆಡೆ ಇಂದು ಕೂಡಾ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡೇ ಸಾಗುತ್ತಿದ್ದು, ಜನಸಾಮಾನ್ಯರು ಕೂಡ ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಮುಂದೆಯಾದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೇವೆ ಒದಗಿಸಬೇಕಿದೆ.
 

Latest Videos
Follow Us:
Download App:
  • android
  • ios