ಅಧಿಕಾರಿ, ಗುತ್ತಿಗೆದಾರರ ಕಳಪೆ ಕಾಮಗಾರಿ, ಬಾವಿಗಳ ನೀರು ಉಪ್ಪಾಗಿ ಪರಿವರ್ತನೆ

* ಅಧಿಕಾರಿ ಗುತ್ತಿಗೆದಾರರ ಕಳಪೆ ಕಾಮಗಾರಿ, ಕಾರವಾರದ ಹಲವು  ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಷ್ಟ
* ಕಾರವಾರದ ಹಲವು  ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಷ್ಟ
* ಹಲವಾರು ಬಾವಿಗಳ ನೀರು ಉಪ್ಪಾಗಿ ಪರಿವರ್ತನೆ

Officers And contractors negligence Karwar Peoples Face Drinking Water Problem rbj

ಭರತ್‌ರಾಜ್ ಕಲ್ಲಡ್ಕ

ಕಾರವಾರ, (ಏ.12): ಅದು ಸಮುದ್ರದಲ್ಲಿ ವಿಲೀನವಾಗೋ ನದಿಗೆ‌ ಹೊಂದಿಕೊಂಡಿರುವಂತಹ ಹಳ್ಳಿ. ನದಿಯಲ್ಲಿ‌ ಮಿಶ್ರಣವಾಗೋ‌ ಉಪ್ಪು ನೀರು ಗ್ರಾಮೀಣ ಭಾಗದತ್ತ ಹರಿಯದಂತೆ ಕೋಟಿಗಟ್ಟಲೆ ವೆಚ್ಚದಲ್ಲಿ ಸುಮಾರು 16 ಸ್ಥಳಗಳಲ್ಲಿ ಸಿಮೆಂಟ್ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಕೇವಲ ನಾಮ್ ಕೆ ವಾಸ್ತೆ ಕಳಪೆ ಕಾಮಗಾರಿ ನಡೆಸಿರುವ ಕಾರಣದಿಂದ ಹಲವಾರು ಬಾವಿಗಳ ನೀರು ಉಪ್ಪಾಗಿ ಪರಿವರ್ತನೆಗೊಂಡಿದೆ. ತಮ್ಮ ಮನೆಗಳಲ್ಲಿ ಬಾವಿಗಳಿದ್ದರೂ ಜನರು  ವಾಟರ್ ಟ್ಯಾಂಕ್‌ಗೆ ಅವಲಂಭಿತರಾಗಬೇಕಾದ ಪರಿಸ್ಥಿತಿಯುಂಟಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ಹೊರಭಾಗದಲ್ಲಿರುವ ಹಣಕೋಣ, ಹೊಟೆಗಾಳಿ, ಅಂಬಿಗವಾಡ, ಪಾಟ್ಲೋವಾಡಾ, ಬಾಬುನಾಯ್ಕವಾಡಾ ಮುಂತಾದೆಡೆ ಸುಮಾರು 35ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಸಾರ್ವಜನಿಕ ಬಾವಿ ಸೇರಿ ಸುಮಾರು 20ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳಿವೆ. ಈ ಗ್ರಾಮ ಪಂಚಾಯತ್‌ಗಳ ನಡುವೆಯೇ ಕಾಳಿ  ನದಿ ಹರಿದು ಸಮುದ್ರ ಸೇರುತ್ತಿದೆ. ಕಾರವಾರದಿಂದ ಕೊಂಚ ದೂರದಲ್ಲೇ ಕಾಳಿ ನದಿ ಹಾಗೂ ಸಮುದ್ರ ಸಂಗಮವಾಗುವುದರಿಂದ ಇಲ್ಲಿ ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಿಂದಕ್ಕೆ ಹರಿಯುತ್ತಿದೆ. 

ಈ ಕಾರಣದಿಂದಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ಸುಮಾರು 16 ಕಡೆಗಳಲ್ಲಿ ಸಿಮೆಂಟ್‌ನ‌ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆಗಳ ಕಾಮಗಾರಿ ಕಳಪೆಯಾಗಿದ್ದರಿಂದ ತಡೆಗೋಡೆಗಳೇ ತುಂಡು ತುಂಡಾಗಿ ಉದುರಿ ಬೀಳುತ್ತಿವೆ. ಅಲ್ಲದೇ, ತಡೆಗೋಡೆ ಭಾಗದಲ್ಲಿ ಗುಂಡಿಗಳೂ ಕಾಣಿಸತೊಡಗಿವೆ. ಇನ್ನು  ತಡೆಗೋಡೆಯ ಅಡಿಭಾಗದಲ್ಲಿ ಗಟ್ಟಿ ಹಲಗೆಗಳನ್ನು ಅಳವಡಿಸಬೇಕಾಗಿತ್ತಾದರೂ ಸಪೂರ ಹಲಗೆಗಳನ್ನು ಅಳವಡಿಸಿ ಬೇಕಾಬಿಟ್ಟಿ ಕೆಲಸಗಳನ್ನು ನಡೆಸಲಾಗಿದೆ. ಇದರಿಂದಾಗಿ ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪಾಗತೊಡಗಿದೆ. ಅಲ್ಲದೇ, ಈ ಭಾಗದಲ್ಲಿ ರಾಶಿಯಾಗಿ ಪೊದೆಗಳು ನಿರ್ಮಾಣಗೊಂಡಿದ್ದು, ಇವುಗಳಡಿ ಹಾಗೂ ಬದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿರುವುದರೊಂದಿಗೆ ನೀರು ಕೊಳೆತು ಇಡೀ ಊರಿಗೆ ಊರೇ ವಾಸನೆ ಬರುತ್ತಿದೆ. 

ಅಂದಹಾಗೆ, ಈ ತಡೆಗೋಡೆಯ ಅಡಿಭಾಗದಲ್ಲಿ ಉಪ್ಪು ನೀರು ಹಿನ್ನೀರಿನ ಜತೆ ಮಿಶ್ರಣವಾಗದಂತೆ ತಡೆಯಲು ಕಬ್ಬಿಣ ಅಥವಾ ಮರದ ದಪ್ಪ ಹಲಗೆಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಸಾಕಷ್ಟು ಸಮಯಗಳಿಂದ ಸಪೂರ ಹಲಗೆಯನ್ನು ಅಳವಡಿಸಲಾಗುತ್ತಿರುವುದಿಂದ ಇವುಗಳು ಕೊಳೆತು ಪ್ರತೀ 3ರಿಂದ 6 ತಿಂಗಳಿಗೊಮ್ಮೆ ಇವುಗಳು ತುಂಡಾಗಿ  ನೀರಿನಲ್ಲೇ ಕೊಚ್ಚಿ ಹೋಗುತ್ತಿವೆ. ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಈವರೆಗೆ ಶಾಶ್ವತ ಪರಿಹಾರ ಒದಗಿಸದ್ದರಿಂದ ಸ್ಥಳೀಯರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವುದು ಮುಂದುವರಿದಿದೆ.

 ಇನ್ನು ಈ ಬಗ್ಗೆ ಜಿಲ್ಲಾಪಂಚಾಯತ್ ಸಿಇಒ ಪ್ರಿಯಾಂಗಾ ಅವರಿಗೆ ದೂರು ಸಲ್ಲಿಸಲಾಗಿದ್ದು, ಅವರ ಸೂಚನೆಯಂತೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಉಪ್ಪು ನೀರು ಸೇರ್ಪಡೆಗೊಳ್ಳುವ ಕೆಲವು ಸ್ಥಳಕ್ಕೆ ಮಾತ್ರ ತೆರಳಿ ವರದಿ ನೀಡಿದ್ದಾರೆ. ಆದರೆ, ಜನರಿಗೆ ಪ್ರಮುಖವಾಗಿ ಸಮಸ್ಯೆಯಾಗುತ್ತಿರುವ ಸ್ಥಳಕ್ಕೆ ಕೂಡಾ ಭೇಟಿ ನೀಡದೆ ಕೇವಲ ಸಾಮಾನ್ಯ ಮರದ ಹಲಗೆ ಹಾಕುವ ವ್ಯವಸ್ಥೆ ಮಾಡಿಸಿ ಹಿಂತಿರುಗಿದ್ದಾರೆ. ಜನರಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸದೆ ಕೇವಲ ನಾಮ್ ಕೇ ವಾಸ್ತೆ ಕೆಲಸ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಹಲವು  ಗ್ರಾಮಗಳ ಜನರು ಕುಡಿಯುವ ನೀರಿನ ಸಂಕಷ್ಟ ಎದುರಿಸುತ್ತಿದ್ದಾರೆ. ಬೇಸಿಗೆಗಾಲದ ಈ ಕಠಿಣ ಪರಿಸ್ಥಿತಿಯಲ್ಲಾದರೂ ಅಧಿಕಾರಿಗಳು ಜನರ ಸಮಸ್ಯೆ ಪರಿಹರಿಸಿದಲ್ಲಿ ಕುಡಿಯುವ ನೀರಿಗೆ ಉಪ್ಪು ನೀರು ಸೇರೋದು ತಪ್ಪುತ್ತಲ್ಲದೇ, ಬಡ ಜನರಿಗೆ ಉತ್ತಮ ಶುದ್ಧ ಕುಡಿಯುವ ನೀರು ದೊರಕಿದಂತಾಗುತ್ತದೆ. 

Latest Videos
Follow Us:
Download App:
  • android
  • ios