ಹುಬ್ಬಳ್ಳಿ(ಜು.24):  ಕೊನೆಗೂ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ ಯೂ ತನ್ನ ನೌಕರರ ಸಂಬಳ ಕಡಿತ ಮಾಡಿದೆ! ಮೇ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಸಂಬಳವನ್ನು ರಜೆ ನೆಪದಲ್ಲಿ ಕಡಿತಗೊಳಿಸಿದೆ. ಇನ್ನು ಜೂನ್‌ ತಿಂಗಳ ಸಂಬಳ ಜುಲೈ ಕೊನೆ ವಾರಕ್ಕೆ ಬಂದರೂ ಇನ್ನೂ ಪಾವತಿಯಾಗಿಲ್ಲ. ನೌಕರರು ಅಕ್ಷರಶಃ ಕಂಗಾಲಾಗಿದ್ದಾರೆ. ಆದರೆ ಸಾರಿಗೆ ಸಂಸ್ಥೆ ಇದನ್ನು ತಳ್ಳಿಹಾಕಿದ್ದು, ಮೇ ತಿಂಗಳ ಸಂಬಳವನ್ನು ಎಲ್ಲ ನೌಕರರಿಗೂ ವಿತರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಶಿರಸಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ನಗರ ಸಾರಿಗೆ ಘಟಕ ಸೇರಿದಂತೆ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮವಿದು. ಇಲ್ಲಿ ಬರೋಬ್ಬರಿ 23250ಕ್ಕೂ ಹೆಚ್ಚು ಜನ ನೌಕರರಿದ್ದಾರೆ. ಇದರಲ್ಲಿ 16 ಸಾವಿರಕ್ಕೂ ಅಧಿಕ ಚಾಲಕ ನಿರ್ವಾಹಕರಿದ್ದರೆ, ಉಳಿದವರು ಅಧಿಕಾರಿ ವರ್ಗ, ಮೆಕ್ಯಾನಿಕ್‌, ಡಿ. ಗ್ರೂಪ್‌ ನೌಕರರು ಸೇರಿದ್ದಾರೆ.

'ಸಂಬಳವಿಲ್ಲದೇ KSRTC ಸಿಬ್ಬಂದಿ ಪರದಾಟ'

ಈ ಎಲ್ಲರಿಗೂ ಸಂಬಳ ನೀಡಲು ಪ್ರತಿ ತಿಂಗಳು ಬರೋಬ್ಬರಿ 70 ಕೋಟಿ ಬೇಕಾಗುತ್ತದೆ. ಆದರೆ ಮೊದಲೇ ಹಾನಿಯಲ್ಲಿರುವ ನಿಗಮವೂ ಇದೀಗ ಕೊರೋನಾದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಮಾರ್ಚ್‌ 18ರಿಂದ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ನಲ್ಲಿ ಯಾವ ಬಸ್‌ಗಳನ್ನು ಓಡಿಸಲಿಲ್ಲ. ಇದರಿಂದ ಸಂಸ್ಥೆಯ ಆದಾಯ ಖೋತಾ ಆಗಿತ್ತು. ಇದೀಗ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಸರ್ಕಾರವೇ ಎಲ್ಲರ ಸಂಬಳವನ್ನು ಕೊಟ್ಟಿತ್ತು. ಮೇ ತಿಂಗಳ ಸಂಬಳವನ್ನು ಕೂಡ ಸರ್ಕಾರವೇ ಕೊಟ್ಟಿದೆ. ಎಲ್ಲರಿಗೂ ಕೊಟ್ಟಿದೆ ಎಂಬುದು ಸಾರಿಗೆ ಸಂಸ್ಥೆಯ ತಿಳಿಸುತ್ತದೆ.

ನೌಕರರ ಆರೋಪವೇನು?

ಮೇ ತಿಂಗಳಲ್ಲಿ ಶೇ. 25 ರಷ್ಟು ಜನ ನೌಕರರ ಸಂಬಳವನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ ಸಂಚಾರ ಇಲ್ಲದ ಕಾರಣ ಕೆಲವರಿಗೆ ಸಂಸ್ಥೆಯೇ ರಜೆ ಮೇಲೆ ಕಳುಹಿಸಿತ್ತು. ಆಗ ಸಂಬಳವನ್ನು ಕೊಟ್ಟಿತ್ತು. ಲಾಕ್‌ಡೌನ್‌ ಮುಗಿದ ಮೇಲೆ ಬಸ್‌ ಸಂಚಾರ ಪ್ರಾರಂಭವಾಗಿದ್ದರೂ ಸರಿದಾರಿಗೆ ಬರಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಕಾರಣ ಬಸ್‌ ಸಂಚಾರ ಆರಂಭವಾಗಿದ್ದರೂ ಇಲಾಖೆಗೆ ಹೇಳಿಕೊಳ್ಳುವಂತಹ ಆದಾಯ ಮಾತ್ರ ಬರುತ್ತಿಲ್ಲ. ಇದರಿಂದ ಎಲ್ಲ ಕೆಲಸಗಾರರಿಗೆ ಕೆಲಸವೇ ಇಲ್ಲದಂತಾಗಿದೆ. ಹೀಗಾಗಿ, ಕೆಲ ನೌಕರರಿಗೆ ಕೆಲಸವಿಲ್ಲ ಮನೆಗೆ ಹೋಗಿ ಎಂದು ಅಧಿಕಾರಿ ವರ್ಗವೇ ಕಳುಹಿಸಿದೆ. ಹೀಗಾಗಿ ನಾವು ರಜೆ ಮೇಲೆ ತೆರಳಿದ್ದೆವು. ಆದರೆ, ವಾಪಸ್‌ ಬಂದ ಮೇಲೆ ರಜೆ ಚೀಟಿ ಕೊಟ್ಟರೂ ಅದನ್ನು ಮಾನ್ಯ ಮಾಡದೇ ಗೈರು ಹಾಜರಿ ಎಂದು ತೋರಿಸಲಾಗಿದೆ. ಗೈರು ಹಾಜರಿ ಲೆಕ್ಕದ ಮೇಲೆ ಎಂಟ್ಹತ್ತು ದಿನದ ಸಂಬಳವನ್ನು ಕಡಿತಗೊಳಿಸಲಾಗಿದೆ. ಹೀಗೆ ಒಂದೊಂದು ಘಟಕದಲ್ಲಿ 200 ಜನರ ಸಂಬಳವನ್ನು ಕಡಿತ ಮಾಡಲಾಗಿದೆ ಎಂಬ ಆರೋಪ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ ಹಾಗೂ ಕಾಂಗ್ರೆಸ್‌ ಮಜ್ದೂರು ಯೂನಿಯನ್‌ದ್ದು.

ಸ್ಪಷ್ಟನೆ:

ಆದರೆ ಸಾರಿಗೆ ಸಂಸ್ಥೆ ಮಾತ್ರ ಯಾರ ಸಂಬಳವನ್ನು ಕಡಿತಗೊಳಿಸಿಲ್ಲ. ಎಲ್ಲರ ಸಂಬಳವನ್ನು ಸರಿಯಾಗಿ ನೀಡಲಾಗಿದೆ. ನಿರ್ದಿಷ್ಟವಾಗಿ ಇಂಥವರ ಸಂಬಳ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರೆ ಕರೆದು ವಿಚಾರಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸುತ್ತಾರೆ. ಒಟ್ಟಿನಲ್ಲಿ ಸಾರಿಗೆ ಸಂಸ್ಥೆಯಲ್ಲೀಗ ಸಂಬಳದ ವಿಷಯವಾಗಿ ಸಾಕಷ್ಟು ಗೊಂದಲಗಳಾಗುತ್ತಿವೆ. ನೌಕರರು ಸಂಬಳ ಕಡಿತಗೊಳಿಸಿದೆ ಎಂದು ಆರೋಪಿಸಿದರೆ, ಸಂಸ್ಥೆ ಮಾತ್ರ ಎಲ್ಲರಿಗೂ ಸಂಬಳ ಕೊಡಲಾಗಿದೆ ಎಂದೇ ವಾದಿಸುತ್ತಿದೆ.

ಜೂನ್‌ ತಿಂಗಳ ಸಂಬಳ ಯಾವಾಗ?

ಈ ನಡುವೆ ಜೂನ್‌ ತಿಂಗಳ ಸಂಬಳ ಈ ವರೆಗೂ ಬಂದಿಲ್ಲ. ಜುಲೈ ಕೊನೆ ವಾರವಾದರೂ ಈ ವರೆಗೂ ಸಂಬಳ ಕೊಟ್ಟಿಲ್ಲ. ಕೊರೋನಾ ಹಾವಳಿ ಮುಗಿದು ಎಲ್ಲ ಬಸ್‌ ಸಂಚಾರ ಶುರುವಾಗುವವರೆಗೂ ಸರ್ಕಾರವೇ ಸಂಬಳ ಕೊಡಬೇಕು ಎಂಬುದು ನೌಕರರ ಆಗ್ರಹ. ಈ ನಡುವೆ ಜೂನ್‌ ತಿಂಗಳ ಸಂಬಳವನ್ನು ಸರ್ಕಾರವೇ ಕೊಡಲಿ ಎಂದು ನಿಗಮವೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹೌದು ಸುಮಾರು 1000 ನೌಕರರ ಸಂಬಳವನ್ನು ಕಡಿತಗೊಳಿಸಿದ್ದಾರೆ. ಅಧಿಕಾರಿಗಳು ತಾವು ಖರ್ಚು ಕಡಿಮೆ ಮಾಡಿದ್ದೇವೆ ಎಂಬುದನ್ನು ತೋರಿಸುವುದೋಸ್ಕರ ಸಂಬಳ ಕಡಿತ ಮಾಡಿದ್ದಾರೆ. ಕೂಡಲೇ ಕಡಿತ ಮಾಡಿರುವ ಎಲ್ಲ ನೌಕರರ ಸಂಬಳ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಯೂನಿಯನ್‌ ರಾಜ್ಯ ಉಪಾಧ್ಯಕ್ಷ ಆರ್‌.ಎಫ್‌. ಕವಳಿಕಾಯಿ ಅವರು ತಿಳಿಸಿದ್ದಾರೆ.

ಯಾವುದೇ ನೌಕರನ ಸಂಬಳವನ್ನೂ ಕಡಿತಗೊಳಿಸಿಲ್ಲ. ಹಾಗೊಂದು ವೇಳೆ ಅಧಿಕಾರಿಗಳೇನಾದರೂ ಕಡಿತಗೊಳಿಸಿದ್ದರೆ, ಯಾವ ನೌಕರ, ಎಷ್ಟು ಕಡಿತಗೊಳಿಸಲಾಗಿದೆ ಎಂಬುದನ್ನು ತೋರಿಸಲಿ, ಸರಿಪಡಿಸಿಕೊಡಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಅವರು ಹೇಳಿದ್ದಾರೆ.