ಒಂದೂವರೆ ವರ್ಷದ ಬಳಿಕ ಅತ್ಯಂತ ಕನಿಷ್ಠ ಕೋವಿಡ್ ಕೇಸ್ : ಭಾರೀ ಇಳಿಕೆ
- ಕಳೆದ ಒಂದೂವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಅತ್ಯಂತ ಕನಿಷ್ಠ ಸಂಖ್ಯೆಯ ಕೋವಿಡ್ ಪ್ರಕರಣ
- ಸೋಮವಾರ ಒಂದೇ ದಿನ 50 ಪುರುಷರು ಮತ್ತು 33 ಮಹಿಳೆಯರು ಸೇರಿದಂತೆ ಒಟ್ಟು 83 ಸೋಂಕಿತ ಪ್ರಕರಣ
ಬೆಂಗಳೂರು (ಅ.19): ಕಳೆದ ಒಂದೂವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಅತ್ಯಂತ ಕನಿಷ್ಠ ಸಂಖ್ಯೆಯ ಕೋವಿಡ್ (Covid) ಪ್ರಕರಣಗಳು ಪತ್ತೆಯಾಗಿವೆ. ಸೋಮವಾರ ಒಂದೇ ದಿನ 50 ಪುರುಷರು ಮತ್ತು 33 ಮಹಿಳೆಯರು ಸೇರಿದಂತೆ ಒಟ್ಟು 83 ಸೋಂಕಿತ (Covid infected) ಪ್ರಕರಣಗಳು ದೃಢಪಟ್ಟಿವೆ.
ಮೊದಲ ಅಲೆಯ ಆರಂಭದ ದಿನಗಳಲ್ಲಿ ಮಾತ್ರ 100ಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಈ ಅರ್ಥದಲ್ಲಿ ರಾಜ್ಯದಲ್ಲಿ ಕೊರೋನಾ (Corona) ದಾಂಗುಡಿ ಆರಂಭದ ದಿನ ಹೊರತುಪಡಿಸಿದರೆ ಸೋಮವಾರ ಪತ್ತೆಯಾದ ಸೋಂಕಿತ ಪ್ರಕರಣಗಳು ಸಾರ್ವಕಾಲಿಕ ದಾಖಲೆಯೆಂದೇ (Record) ಪರಿಗಣಿಸಬಹುದು. ಹೊಸ ಪ್ರಕರಣಗಳ ಪತ್ತೆಯಿಂದ ಇದುವರೆಗಿನ ಸೋಂಕಿತರ ಸಂಖ್ಯೆ 12,49,501ಕ್ಕೆ ಏರಿಕೆಯಾಗಿದೆ. 88 ಪುರುಷರು, 63 ಮಹಿಳೆಯರು ಸೇರಿ 151 ಮಂದಿ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,26,541ಕ್ಕೆ ಹೆಚ್ಚಳವಾಗಿದೆ.
ಕೊರೋನಾ ಸೋಂಕಿಗೆ ಮೂವರು ಪುರುಷರು ಮತ್ತು ಓರ್ವ ಮಹಿಳೆ (woman) ಸೇರಿ ನಾಲ್ವರು ಮೃತಪಟ್ಟಿದ್ದು, ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,215ಕ್ಕೆ ಏರಿಕೆಯಾಗಿದೆ. ನಗರದಲ್ಲಿ 6,745 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ನಿತ್ಯ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬೆಳ್ಳಂದೂರು ವಾರ್ಡ್‌ನಲ್ಲಿ ಪ್ರತಿದಿನ ಸರಾಸರಿ 5, ದೊಡ್ಡನೆಕ್ಕುಂದಿ 4, ಹೆಮ್ಮಿಗೆಪುರ 4, ಹಗದೂರು 4, ನ್ಯೂತಿಪ್ಪಸಂದ್ರ 4, ಹೊರಮಾವು, ವರ್ತೂರು, ರಾಮಮೂರ್ತಿ ನಗರ, ರಾಜರಾಜೇಶ್ವರಿ ನಗರ (Rajarajeshwarinagar) ವಾರ್ಡ್‌ಗಳಲ್ಲಿ ತಲಾ 3 ಮತ್ತು ಸಿಂಗಸಂದ್ರ ವಾರ್ಡ್‌ನಲ್ಲಿ 2 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
38ಕ್ಕೆ ಇಳಿದ ಕಂಟೈನ್ಮೆಂಟ್
ಪಾಲಿಕೆ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ( Micro Containment) ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಬೊಮ್ಮನಹಳ್ಳಿ 10 (Bommanahalli), ಮಹದೇವಪುರ 9, ಪೂರ್ವ 5, ದಕ್ಷಿಣ 5, ಪಶ್ಚಿಮ 5, ರಾಜರಾಜೇಶ್ವರಿ ನಗರ ಮತ್ತು ಯಲಹಂಕ ವಲಯದಲ್ಲಿ ತಲಾ 2 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ದಾಸರಹಳ್ಳಿ (Dasarahalli) ವಲಯ ಮೈಕ್ರೋ ಕಂಟೈನ್ಮೆಂಟ್ ಮುಕ್ತವಾಗಿದೆ ಎಂದು ಬಿಬಿಎಂಪಿ (BBMP) ಮಾಹಿತಿ ನೀಡಿದೆ.