ಶಿವಮೊಗ್ಗ(ಮೇ.28): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ಖಾತ್ರಿ ಸೇರಿ ವಿವಿಧ ಯೋಜನೆಗಳಲ್ಲಿ ಉದ್ಯೋಗ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪತ್ರಿಕಾಭವನದಲ್ಲಿ ಬುಧವಾರ ಪ್ರೆಸ್‌ ಟ್ರಸ್ಟ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಎಲ್ಲ ಗ್ರಾಮೀಣ ಭಾಗದಲ್ಲಿ ಉದ್ಯೋಗ ಹಾಗೂ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. 49 ತಾಲೂಕು ಬರಪೀಡಿತವಾಗಿದ್ದು, ಇಲ್ಲಿ ನೀರು ಪೂರೈಕೆಗೆ ತಲಾ ಒಂದು ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅಲ್ಲದೆ ಇನ್ನುಳಿದ ತಾಲೂಕುಗಳಿಗೆ ತಲಾ 50 ಲಕ್ಷ ರು. ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಖಾತ್ರಿ ಸೇರಿ ವಿವಿಧ ಯೋಜನೆಗಳಡಿ ಅನೇಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನರೇಗಾದಲ್ಲಿ ಎಷ್ಟೇ ಜನ ಬಂದರೂ ಉದ್ಯೋಗ ದೊರಕಿಸಿ ಕೊಡಲಾಗುವುದು. ಮೇ 26ರಂದು ಒಂದೇ ದಿನ ರಾಜ್ಯದಲ್ಲಿ ಸರಿಸುಮಾರು 9.26 ಲಕ್ಷ ಜನರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ತಿಂಗಳು ಕೇಂದ್ರ ಸರ್ಕಾರ ನರೇಗ ಯೋಜನೆಗಾಗಿ 1861 ಕೋಟಿ ರು. ಅನುದಾನ ನೀಡಿದ್ದು, ಅದರಲ್ಲಿ 800 ಕೋಟಿ ರು. ಬಾಕಿಮೊತ್ತ ಬಿಡುಗಡೆ ಮಾಡಲಾಗಿದೆ. ಉಳಿದ ಒಂದು ಸಾವಿರ ಕೋಟಿ ರು.ಗಳಲ್ಲಿ ನರೇಗಾ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನರೇಗಾ ಕೂಲಿ ಒಂದು ವಾರದಲ್ಲಿ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ ಎಂದು ಹೇಳಿದರು.

ಖಾತ್ರಿ ಕೂಲಿ 249 ರು.ನಿಂದ 275 ರು.ಗೆ ಹೆಚ್ಚಿಸಲಾಗಿದೆ. ನರೇಗಾ ಯೋಜನೆಯಡಿ ಇಂಗುಗುಂಡಿ, ಬಾಳೆ, ತೆಂಗು ಬೆಳೆ, ಬದು ನಿರ್ಮಾಣ, ಮೀನು ಸಾಕಾಣಿಕೆ, ಕೆರೆ ಹೂಳು ತೆಗೆಯುವುದು, ಪುಷ್ಕರಣಿ ನಿರ್ಮಾಣ ಸೇರಿದಂತೆ ರೈತರಿಗೆ ಅನುಕೂಲವಾಗುವ ಹಲವು ಕಾಮಗಾರಿಗಳನ್ನು ನಡೆಸಬಹುದಾಗಿದೆ ಎಂದರು.

ಪ್ಯಾಕೇಜ್‌ನ ಪರಿಹಾರ ಶೀಘ್ರ ಬಿಡುಗಡೆ: ಸಚಿವ ಜಗದೀಶ ಶೆಟ್ಟರ್‌

ಅಲ್ಲದೆ ಇಲಾಖೆಯಿಂದ ಅಂತರ್ಜಲ ಚೇತನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪೈಲೆಟ್‌ ಯೋಜನೆಯಾಗಿ ಶಿವಮೊಗ್ಗದಲ್ಲಿ ಯೋಜನೆ ಪ್ರಾರಂಭವಾಗಿದೆ. ಇದಕ್ಕೆ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಕೂಡ ಕೈಜೋಡಿಸಿದೆ. ತುಮಕೂರು, ಕೋಲಾರ, ಚಿತ್ರದುರ್ಗ ಸೇರಿದಂತೆ 9 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಕೈಗೊಳ್ಳಲಾಗುವುದು ಎಂದರು.

ಗ್ರಾಮೀಣರಿಗೆ ಕುಡಿಯುವ ನೀರು:

ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರು ದೊರಕಿಸಿಕೊಡಲು ಮನೆಮನೆಗೆ ನೀರು ಯೋಜನೆ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರದ ಅನುದಾನದಿಂದ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರಿನ ಸಂಪರ್ಕ ದೊರಕಿಸಿಕೊಡಲಾಗುವುದು ಎಂದರು.

ಸ್ಮಾರ್ಟ್‌ ಸಿಟಿ ಯೋಜನೆ:

ಜೂನ್‌ 1 ಮತ್ತು 2 ರಂದು ನಗರಾಭಿವೃದ್ಧಿ ಸಚಿವರು ಜಿಲ್ಲೆಗೆ ಆಗಮಿಸಲಿದ್ದು, ಸ್ಮಾರ್ಟ್‌ ಸಿಟಿ ಯೋಜನೆ ಸೇರಿದಂತೆ ಅನೇಕ ಕಾಮಗಾರಿ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.

ಈಗಾಗಲೇ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಯುಜಿಡಿ ಕಾಮಗಾರಿ ಪ್ರಗತಿ ಕಂಡಿದೆ. ಉದ್ಯಾನವನಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಗರದ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸಲಾಗುವುದು. ಹಾಗೂ ಶಾಲೆಗಳಿಗೆ ಶೌಚಾಲಯ ದೊರಕಿಸಿ ಕೊಡಲಾಗುವುದು ಎಂದರು.

ಅರಮನೆ ಅಭಿವೃದ್ಧಿ:

ನಗರದ ಶಿವಪ್ಪನಾಯಕ ಅರಮನೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ರಾಜಕಾಲುವೆ ಸ್ವಚ್ಛತೆ ಮಾಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ, ರಾಜಕಾಲುವೆ ಒತ್ತುವರಿ ಗಮನಕ್ಕೆ ಬಂದಿದೆ. ಯಾವುದೇ ಪ್ರಭಾವಿ ವ್ಯಕ್ತಿ ಇದ್ದರೂ ತೆರವು ಮಾಡಿಸಲಾಗುವುದು. ಅಲ್ಲದೆ ತುಂಗಾನದಿ ಮಲಿನಗೊಳ್ಳುವುದಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ತಡೆಗಟ್ಟುವಲ್ಲಿ ಜಿಲ್ಲಾ​ಧಿಕಾರಿ, ಜಿಲ್ಲಾ ರಕ್ಷಣಾಧಿ​ಕಾರಿ, ಸಿಇಒ, ಜಿಲ್ಲಾ ಆರೋಗ್ಯಾ​ಧಿಕಾರಿ ಸೇರಿ ಎಲ್ಲ ಇಲಾಖೆಗಳ ಅ​ಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮ ಹಾಕಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ಅಭಿನಂದಿಸಿದರು. ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ ಅಧ್ಯಕ್ಷ ಮಂಜುನಾಥ್‌ ವಹಿಸಿದ್ದರು. ಜಿಪಂ ಸಿಇಒ ವೈಶಾಲಿ ಉಪಸ್ಥಿತರಿದ್ದರು.

ಪಟ್ಟಭದ್ರ ಹಿತಾಸಕ್ತಿಗಳ ಬಲಿ ಹಾಕುತ್ತೇನೆ!

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಈ ಹಿಂದೆ ಹೇಳುವವರು, ಕೇಳುವವರು ಯಾರೂ ಇರಲಿಲ್ಲ. ಈ ಹಿಂದಿನ ಸಿಮ್ಸ್‌ ನಿರ್ದೇಶಕರು ಕೂಡ ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದರು. ಈ ಕುರಿತು ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಗಮನಹರಿಸಲಿಲ್ಲ. ಈ ಹಿಂದೆ ಇದ್ದ ನಿರ್ದೇಶಕರನ್ನು ಅಮಾನತುಪಡಿಸುವಂತೆ ಸದನದ ಗಮನಕ್ಕೂ ತಂದೆ. ಆದರೆ ಯಾವುದೋ ಪಟ್ಟಭದ್ರ ಹಿತಾಸಕ್ತಿ ಅವರಿಗೆ ಬೆಂಬಲ ನೀಡುತ್ತಿದೆ. ಅದು ಯಾರು ಎಂದು ಗೊತ್ತಿಲ್ಲ. ಗೊತ್ತಾದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಹುಡುಕಿ ಬಲಿ ಹಾಕುತ್ತೇನೆ ಎಂದು ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.