Asianet Suvarna News

ಚಿತ್ರದುರ್ಗ ಜಿಲ್ಲೆಯ ನರೇಗಾ ಯೋಜನೆಗೆ 300 ಕೋಟಿ ರುಪಾಯಿ ಅನುದಾನ..!

ಲಾಕ್‌ಡೌನ್‌ನಿಂದಾಗಿ ನಗರ ತೊರೆದು ಸಾಕಷ್ಟು ಮಂದಿ ತವರಿಗೆ ಮರಳಿದ್ದಾರೆ. ನರೇಗಾ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ 300 ಕೋಟಿ ರುಪಾಯಿ ಅನುದಾನ ದೊರೆತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

NREGA 300 Crore Rupess Grant Sanctioned for Chitradurga District
Author
Chitradurga, First Published May 22, 2020, 12:11 PM IST
  • Facebook
  • Twitter
  • Whatsapp

ಚಿತ್ರದುರ್ಗ(ಮೇ.22): ಕಳೆದ ಮಾ. 24 ರಿಂದ ಲಾಕ್‌ಡೌನ್‌ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಕೆಲಸ ಇಲ್ಲದೆ ಪರದಾಡುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬಾ ತಿಳಿಸಿದ್ದಾರೆ.

ಲಾಕ್‌ಡೌನ್‌ ಕಾರಣದಿಂದಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಕೆಲಸ ಮಾಡಲು ವಲಸೆ ಹೋದವರು ಇದೀಗ ಸ್ವಂತ ಜಿಲ್ಲೆಗೆ ವಾಪಸ್ಸಾಗುತ್ತಿದ್ದಾರೆ. ಇಂತಹ ಕೂಲಿ ಕಾರ್ಮಿಕರಿಗೂ ಜಾಬ್‌ ಕಾರ್ಡ್‌ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ ಜಾಬ್‌ ಕಾರ್ಡ್‌ ಹೊಂದಿರುವ ಕುಟುಂಬಗಳ ಪಟ್ಟಿಯಲ್ಲಿ ಜಿಲ್ಲೆಗೆ ವಾಪಸ್‌ ಬಂದ ಕುಟುಂಬ ಸದಸ್ಯರ ಹೆಸರು ಇದ್ದರೂ ಅಂತಹವರಿಗೂ ಉದ್ಯೋಗ ನೀಡಲು ಸೂಚನೆ ನೀಡಲಾಗಿದೆ. ಈ ವರ್ಷ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಯನ್ನು ಆರಂಭಿಸಲಾಗಿದ್ದು, ರೈತರು ವೈಯಕ್ತಿಕವಾಗಿ ತಮ್ಮ ಹೊಲಗಳಲ್ಲಿ ಕೃಷಿಹೊಂಡ ಅಥವಾ ಬದು ನಿರ್ಮಾಣದಂತಹ ಕಾಮಗಾರಿ ಕೈಗೊಳ್ಳಬಹುದಾಗಿದೆ. ಸದ್ಯದಲ್ಲೇ ಮಳೆಗಾಲ ಆರಂಭವಾಗಲಿದ್ದು, ಮಳೆ ನೀರು ಹೆಚ್ಚು ನಿಂತಲ್ಲಿ ಭೂಮಿಯ ಫಲವತ್ತು ಹಾಗೂ ಬೆಳೆಯ ಉತ್ತಮ ಇಳುವರಿಗೆ ಇದು ನೆರವಾಗಲಿದೆ ಎಂದು ಹೊನ್ನಾಂಬಾ ತಿಳಿಸಿದರು.

ಜಿಲ್ಲೆಯ 188 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನರೇಗಾ ಯೋಜನೆಯಡಿ 4.03 ಲಕ್ಷ ಮಾನವ ದಿನ ಸೃಜನೆಯಾಗಿದ್ದು, 27 ಸಾವಿರ ಕೂಲಿ ಕಾರ್ಮಿಕರು ನಾನಾ ಕೆಲಸ ಮಾಡುತ್ತಿದ್ದಾರೆ. ಈ ವರ್ಷ 75 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ಹೊಂದಲಾಗಿದ್ದು, 300 ಕೋಟಿ ರು. ನರೇಗಾ ಯೋಜನೆಗಾಗಿಯೇ ಅನುದಾನ ಖರ್ಚು ಮಾಡುವ ಗುರಿ ಇದೆ. ಈಗಾಗಲೇ ರು. 10 ಕೋಟಿ. ಕೂಲಿ ಬಾಬ್ತು ಪಾವತಿಸಲಾಗಿದೆ ಎಂದಿದ್ದಾರೆ.

ಬದು ನಿರ್ಮಾಣ ಮಾಸಾಚರಣೆ

ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ವಿಶೇಷವಾಗಿ ಅಂತರ್ಜಲ ಅಭಿವೃದ್ಧಿಗಾಗಿ ಹೊಲ, ತೋಟಗಳಲ್ಲಿ ಬದು ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಈ ಬಾರಿ ಒತ್ತು ನೀಡಲಾಗಿದೆ. ಇದಕ್ಕಾಗಿ ನರೇಗಾ ಯೋಜನೆಯಡಿ ಮೇ 19 ರಿಂದ ಜೂನ್‌ 18 ರವರೆಗೆ ಬದು ನಿರ್ಮಾಣ ಮಾಸಾಚರಣೆ ಆಯೋಜಿಸಿದ್ದು, ಎಲ್ಲ ತಾಲೂಕುಗಳಲ್ಲಿಯೂ ಇದನ್ನು ಅಭಿಯಾನವನ್ನಾಗಿ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ 55 ಜಲಾನಯನ ಪ್ರದೇಶಗಳನ್ನು ಇದಕ್ಕಾಗಿ ಗುರುತಿಸಿ, ಎಲ್ಲ ರೈತರಿಗೆ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಇಂದಿನಿಂದ ಜೆಜೆಎಂನಲ್ಲೇ ಕೋವಿಡ್‌-19 ಪರೀಕ್ಷೆ

ನರೇಗಾ ಯೋಜನೆಯಡಿ ಪ್ರಸ್ತುತ ವೈಯಕ್ತಿಕ ಕಾಮಗಾರಿಗಳು, ಬದುಗಳ ನಿರ್ಮಾಣ, ಕೃಷಿ ಹೊಂಡ, ಅರಣ್ಯದಲ್ಲಿ ಗುಂಡಿ ತೆಗೆಯುವಿಕೆ, ಅರಣ್ಯದಲ್ಲಿ ನೀರು ಇಂಗಿಸುವ ಕಾಮಗಾರಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಕೃಷಿ ಇಲಾಖೆಯ ವತಿಯಿಂದ ಬದು ನಿರ್ಮಾಣ, ಸಮುದಾಯ ಆಧಾರಿತ ಕಾಮಗಾರಿಗಳಾದ ಕೆರೆ ಮತ್ತು ಗೋಕಟ್ಟೆಹೂಳೆತ್ತುವುದು, ಕನ್ವರ್ಜೆನ್ಸ್‌ ಕಾಮಗಾರಿಗಳು ನಡೆಯುತ್ತಿವೆ.

75 ಲಕ್ಷ ಮಾನವ ದಿನ ಸೃಜನೆ ಗುರಿ

ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 75 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಕನಿಷ್ಠ 300 ಕೋಟಿ ರು. ವೆಚ್ಚ ಮಾಡುವ ಅಂದಾಜು ಮಾಡಿಕೊಳ್ಳಲಾಗಿದೆ. ಇದಕ್ಕಿಂತ ಹೆಚ್ಚಿನ ಮಾನವ ದಿನಗಳ ಸೃಜನೆಯಾದರೂ, ಸರ್ಕಾರ ಅನುದಾನ ನೀಡಲು ಅವಕಾಶ ಕಲ್ಪಿಸಿದೆ. ಸರ್ಕಾರವು ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ ರು.275 ನಿಗದಿಪಡಿಸಿದ್ದು, ಕೂಲಿ ಕಾರ್ಮಿಕರು ಸಲಕೆ, ಗುದ್ದಲಿ ಮುಂತಾದ ಸಲಕರಣೆಗಳನ್ನು ಕೊಂಡೊಯ್ದರೆ ಹೆಚ್ಚುವರಿಯಾಗಿ ರು. 10 ಕೂಲಿ ನೀಡಲಾಗುವುದು.

ಕೋವಿಡ್‌-19 ಸೋಂಕು ಹರಡದಂತೆ ತಡೆಗಟ್ಟಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಸ್ಯಾನಿಟೈಸರ್‌ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಕಿಟ್‌ ಪೂರೈಕೆ ಮಾಡಲಾಗಿದೆ. ಪ್ರತಿಯೊಬ್ಬರು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ತಿಳಿಸಿದ್ದಾರೆ.
 

Follow Us:
Download App:
  • android
  • ios