ಇದೀಗ ಮತ್ತೋರ್ವ ಜೆಡಿಎಸ್ ಶಾಸಕ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆಪ್ರಸ್ತಾಪಿಸಿದ್ದಾರೆ. ತಾವು ಮನಸ್ಸು ಮಾಡಿದ್ದರೆ ಈಗಾಗಲೆ ಸಚಿವರಾಗಿ ಇರಬಹುದಿತ್ತೆಂದು ಹೇಳಿದ್ದಾರೆ.

ಅರಸೀಕೆರೆ(ಆ.18):  ಅಂದು ನಾನು ಧೈರ್ಯ ಮಾಡಲಿಲ್ಲ. ಅದಕ್ಕೆ ಶಾಸಕನಾಗಿದ್ದೀನಿ. ಗೋಪಾಲಣ್ಣ ಧೈರ್ಯ ಮಾಡಿದರು. ಹಾಗಾಗಿ ಇಂದು ಸಚಿವರಾಗಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

ನಗರದ ಪೋಲಿಸ್‌ ಕ್ವಾರ್ಟರ್ಸ್‌ ಬಳಿ 7 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್‌ ವಸತಿ ಸಮ್ಮುಚ್ಛಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ಎಚ್‌.ಡಿ ರೇವಣ್ಣನವರ ಋುಣ ನನ್ನ ಮೇಲಿದೆ. ಮೂರು ಬಾರಿ ಶಾಸಕನನ್ನಾಗಿ, ಗೃಹ ಮಂಡಲಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅದನ್ನು ಮರೆತು ಮೋಸ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಹಾಗಾಗಿ ನಾನು ಬಿಜೆಪಿ ಸೇರುವ ಯೋಚನೆ ಮಾಡಲಿಲ್ಲ ಎಂದರು.

'ಬಿಜೆಪಿ ಸೇರಲು ಜೆಡಿಎಸ್‌ನ ನಾಲ್ವರು ಶಾಸಕರ ಉತ್ಸುಕ'...

ಇದರಿಂದ ವೇದಿಕೆಯ ಮೇಲಿದ್ದ ಸಚಿವ ಗೋಪಾಲಯ್ಯಗೆ ಇರುಸುಮುರುಸು ಉಂಟಾದಂತಾಯಿತು. ಆಗ ಶಾಸಕರು ಗೋಪಾಲಣ್ಣ ಧೈರ್ಯ ಮಾಡಿ ಬಿಜೆಪಿಗೆ ಹೋದರು. ಕಷ್ಟ-ನಷ್ಟಗಳನ್ನು ಅನುಭವಿಸಿದರು. ಜನರಿಂದ ಆಯ್ಕೆಯಾದ ಮಂತ್ರಿಯಾಗಿದ್ದಾರೆ. ನಾನು ಧೈರ್ಯ ಮಾಡಲೂ ಇಲ್ಲ, ಮಂತ್ರಿಯಾಗಲೂ ಇಲ್ಲ. ಗೋಪಾಲಣ್ಣ ನಾವು ಒಟ್ಟಿಗೆ ಶಾಸಕರಾದವರು. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಸಂತೋಷದ ವಿಚಾರ ಎಂದರು.

ಸರ್ಕಾರದ ಮನೆಹಾಳು ನಿರ್ಧಾರ ಎಂದ ಕುಮಾರಸ್ವಾಮಿಯಿಂದ ಎಚ್ಚರಿಕೆ ಸಂದೇಶ..

ಗುಣಕ್ಕೆ ಮತ್ಸರ ಬೇಡ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಇದ್ದ ವೇದಿಕೆಯಲ್ಲೆ 530ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಅನುಷ್ಠಾನ ಹಾಗೂ ಎತ್ತಿನ ಹೊಳೆ ಯೋಜನೆಗೆ ಹಣ ನೀಡಿದ ಸಿದ್ದರಾಮಯ್ಯನವರನ್ನು ವೇದಿಕೆಯಲ್ಲೆ ಹಾಡಿ ಹೊಗಳಿದ್ದೀನಿ. ಇದೇ ರೀತಿ ಸಚಿವ ಈಶ್ವರಪ್ಪ, ಬಸವರಾಜ್‌ ಬೊಮ್ಮಾಯಿ ಮಾಡಿರುವ ಕೆಲಸದ ಬಗ್ಗೆ ಜನರಿಗೆ ತಿಳಿಸಿ ಹೊಗಳಿದ್ದೀನಿ, ಸನ್ಮಾನಿಸಿದ್ದೀನಿ ಎಂದು ಇದೇ ವೇದಿಕೆಯಲ್ಲಿ ಪ್ರಸ್ತಾಪಿಸಿದರು.