ಬೆಂಗಳೂರು(ಮಾ.10): ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದ ಆದೇಶ ಪಾಲಿಸಲು ವಿಳಂಬ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಬಿಬಿಎಂಪಿ ಆಯುಕ್ತರ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕಾಂಗ್ರೆಸ್ ವಿರುದ್ಧವೇ 'ಕೈ' ಶಾಸಕ ಹ್ಯಾರಿಸ್‌ ಆಕ್ರೋಶ

ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸಿ ಅವುಗಳನ್ನು ತೆರವುಗೊಳಿಸಬೇಕು. ಅದಕ್ಕೂ ಮುನ್ನ ಸಮೀಕ್ಷೆ ಹೇಗೆ ನಡೆಯಲಿದೆ ಎಂಬ ಬಗ್ಗೆ ಪಾಲಿಕೆ 2019ರ ಡಿ.18ರೊಳಗೆ ಕಾಲಮಿತಿ ಒಳಗೊಂಡ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಬಿಬಿಎಂಪಿಗೆ 2019 ನ.25ರಂದು ಹೈಕೋರ್ಟ್‌ ಆದೇಶಿಸಿತ್ತು. ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ ಪರ ವಕೀಲರು, ಸರ್ವೆ ಕಾರ್ಯವನ್ನು 2020ರ ಏ.1ನಂತರ ನಡೆಸಲಾಗುವುದು ಎಂದು ತಿಳಿಸಿದರು.

ಇದರಿಂದ ಆಕ್ರೋಶಗೊಂಡ ನ್ಯಾಯಪೀಠ, ಅಕ್ರಮ ಕಟ್ಟಡಗಳ ಸರ್ವೇ ನಡೆಸಲು ಹಾಗೂ ಆ ಸರ್ವೆ ವಿಧಾನದ ಕುರಿತು ವರದಿಯನ್ನು ಸಲ್ಲಿಸುವಂತೆ 2019ರ ನ.25ರಂದು ಆದೇಶಿಸಲಾಗಿತ್ತು. ಆದರೆ, ಈವರೆಗೂ ಸರ್ವೆ ನಡೆಸಿಲ್ಲ. ಮೇಲಾಗಿ ಏ.1ರ ನಂತರ ಸರ್ವೆ ನಡೆಸುವುದಕ್ಕೆ ಸೂಕ್ತ ಕಾರಣವೂ ನೀಡಿಲ್ಲ ಎಂದು ತರಾಟೆ ತೆಗೆದುಕೊಂಡಿತು.

ಬೆಂಗಳೂರಲ್ಲಿ ಕುಡಿಯೋ ನೀರಿನ ಮೇಲೆ ಕಲಾರಾ ಎಫೆಕ್ಟ್..?

ಅಲ್ಲದೆ, ನ್ಯಾಯಾಲಯದ ಆದೇಶ ಪಾಲಿಸದ ಬಿಬಿಎಂಪಿ ಆಯುಕ್ತರ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿ ಬಾರಿಯೂ ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ ಒಂದಲ್ಲ ಒಂದು ನೆಪ ಹೇಳಿ, ಸರ್ವೆ ಕಾರ್ಯ ಆರಂಭಿಸಲು ಕಾಲಾವಕಾಶ ಪಡೆಯುತ್ತಲೇ ಇದೆ. ಆಯುಕ್ತರಿಗೆ ಜವಾಬ್ದಾರಿ ಇಲ್ಲ. ಈ ಪ್ರಕರಣವಷ್ಟೇ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಕೋರ್ಟ್‌ ಆದೇಶವನ್ನು ಬಿಬಿಎಂಪಿ ಪಾಲಿಸದಿರುವುದು ಕಂಡು ಬಂದಿದೆ. ಈ ಹಿಂದೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸುವುದರಿಂದ ಕೋರ್ಟ್‌ ಹಿಂದೆ ಸರಿದಿತ್ತು. ಆದರೆ, ಕಠಿಣ ಕ್ರಮ ಜರುಗಿಸದ ಹೊರತು ಕೋರ್ಟ್‌ ಆದೇಶಗಳು ಪಾಲನೆಯಾಗುವುದಿಲ್ಲ. ಹೀಗಾಗಿ, ಆಯುಕ್ತರ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲಾಗುವುದು ಎಂದು ನುಡಿಯಿತು.

ಕ್ರಮವೇಕೆ ಜರುಗಿಸಬಾರದು?:

ನಂತರ ನಿಮ್ಮ ವಿರುದ್ಧ ಏಕೆ ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ಬಿಬಿಎಂಪಿ ಆಯುಕ್ತರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತು. ಜತೆಗೆ, ಸರ್ವೆ ನಡೆಸುವುದಕ್ಕೆ ಅಗತ್ಯವಾದ ಸಿಬ್ಬಂದಿ ಒದಗಿಸಲು ಬಿಬಿಎಂಪಿ ಮಾಡಿರುವ ಮನವಿಯನ್ನು ಪರಿಗಣಿಸಿ ಅಗತ್ಯ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ನಿರ್ದೇಶಿಸಿತು.