ರಾಜಕೀಯದಿಂದ ದೂರ ಎಂದು ಈಗಾಗಲೇ ಹಲವಾರು ಸಲ ಹೇಳಿದ್ದೇನೆ. ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ: ಮೈಸೂರು ರಾಜವಂಶಸ್ಥ ಯದುವೀರ್‌ ಕಷ್ಣರಾಜ ಒಡೆಯರ್‌ 

ಸುಂಟಿಕೊಪ್ಪ(ಮೇ.29): ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ. ಮೈಸೂರು ಅರಮನೆ ಪರಂಪರೆ ಮುಂದುವರೆಸಿಕೊಂಡು ಹೋಗಲು ಬದ್ಧ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕಷ್ಣರಾಜ ಒಡೆಯರ್‌ ಹೇಳಿದ್ದಾರೆ. ಸುಂಟಿಕೊಪ್ಪದಲ್ಲಿ ಭಾನುವಾರ ರಾಜ್ಯಮಟ್ಟದ ಡಿ.ಶಿವಪ್ಪ ಸ್ಮಾರಕ 25 ನೇ ವರ್ಷದ ಫುಟ್ಬಾಲ್‌ ಪಂದ್ಯಾವಳಿ ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್‌, ರಾಜಕೀಯದಿಂದ ದೂರ ಎಂದು ಈಗಾಗಲೇ ಹಲವಾರು ಸಲ ಹೇಳಿದ್ದೇನೆ. ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ ಎಂದು ಹೇಳಿದರು.

ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ, ಕೊಡಗಿನ ಕೋಲ್ಕೋತ್ತಾ ಎಂದು ಖ್ಯಾತಿ ಪಡೆದು ಫುಟ್ಬಾಲ್‌ ಕ್ರೀಡೆಗೆ ಹೆಸರಾಗಿರುವ ಸುಂಟಿಕೊಪ್ಪದಲ್ಲಿ 25 ವರ್ಷಗಳಿಂದ ಫುಟ್ಬಾಲ್‌ ಪಂದ್ಯಾಟ ಆಯೋಜಿಸುತ್ತಿರುವ ಡಿ. ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ. ಕೊಡಗಿನಲ್ಲಿ ಕ್ರೀಡಾಚಟುವಟಿಕೆಗೆ ಮುಂದಿನ ದಿನಗಳಲ್ಲಿಯೂ ತನ್ನಿಂದಾದ ಪ್ರೋತ್ಸಾಹ ನೀಡುವೆ ಎಂದು ಭರವಸೆ ನೀಡಿದರು.

ಮಾವು, ಹಲಸು ಸುಗ್ಗಿ ಆರಂಭ: ಕೊಡಗು ಮಾವು ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆ ಇರುವುದಾಗಿ ಸುದ್ದಿಗಾರರೊಂದಿಗೆ ಹೇಳಿದ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್‌ ಪಂದ್ಯಾಟದ ಪ್ರಾಯೋಜಕ ಉದ್ಯಮಿ ವಿಶಾಲ್‌ ಶಿವಪ್ಪ, ಶಾಸಕ ಡಾ.ಮಂಥರ್‌ ಗೌಡ ಅವರ ಸಹಕಾರದಿಂದ ಸುಂಟಿಕೊಪ್ಪಕ್ಕೆ ಸುಸಜ್ಜಿತ ಕ್ರೀಡಾಂಗಣ ರೂಪಿಸುವ ಚಿಂತನೆ ಇದೆ ಎಂದೂ ನುಡಿದರು. ತಂದೆಯವರಾದ ಬೆಟ್ಟಗೇರಿ ಎಸ್ಟೇಟ್‌ ಮಾಲೀಕ ವಿನೋದ್‌ ಶಿವಪ್ಪ ಪ್ರಯತ್ನದಿಂದ 25 ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದಾರೆ. ನಾನು ಮುಂದಿನ 25 ವರ್ಷಗಳೂ ಈ ಕ್ರೀಡಾ ಪರಂಪರೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದೂ ವಿಶಾಲ್‌ ಶಿವಪ್ಪ ಹೇಳಿದರು. ವಿನೋದ್‌ ಶಿವಪ್ಪ, ಹರಪಳ್ಳಿ ರವೀಂದ್ರ, ಕೆ.ಪಿ.ಚಂದ್ರಕಲಾ, ಶುಭ್ರ ಅಯ್ಯಪ್ಪ, ಎ.ಲೋಕೇಶ್‌ ಕುಮಾರ್‌ ಸೇರಿದಂತೆ ಗಣ್ಯರು ಹಾಜರಿದ್ದರು.