ಹಿಂದಿ ಭಾಷಿಕನೊಬ್ಬ 12 ವರ್ಷ ಬೆಂಗಳೂರಲ್ಲಿದ್ದರೂ, ಕನ್ನಡದ ಒಂದು ಶಬ್ದವೂ ಗೊತ್ತಿಲ್ಲ!
ಬೆಂಗಳೂರಿನಲ್ಲಿ 12 ವರ್ಷಗಳಿಂದ ವಾಸಿಸುತ್ತಿರುವ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬರಿಗೆ ಕನ್ನಡ ಬಾರದಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರೊಂದಿಗೆ ಮಾತನಾಡುವಾಗ, ಕನ್ನಡ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಅ.31): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ವಾಸ ಮಾಡುತ್ತಿರುವ ಉತ್ತರ ಭಾರತದ ಮೂಲದ ವ್ಯಕ್ತಿಗೆ ಒಂದೇ ಒಂದು ಕನ್ನಡ ಪದವೂ ಬರುವುದಿಲ್ಲ. ಕನಿಷ್ಠ ವ್ಯವಹಾರಿಕ ಜ್ಞಾನಕ್ಕಾದರೂ ಕನ್ನಡ ಕಲಿಯಿರಿ ಎಂದರೆ ಅದರ ಅಗತ್ಯವೇ ನಮಗಿಲ್ಲ, ನೀವೇ ಹಿಂದಿ, ಇಂಗ್ಲೀಷ್ ಕಲಿತು ನಮ್ಮೊಂದಿಗೆ ವ್ಯವಹರಿಸಿ ಎಂದು ಉಡಾಫೆ ಉತ್ತರ ಕೊಟ್ಟಿರುವ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದೇಶ ಹಾಗೂ ವಿಶ್ವದ ವಿವಿಧ ಮೂಲೆಗಳಿಂದ ಬಂದು ನೆಲೆಸಿದ ಜನರಿದ್ದಾರೆ. ಆದರೆ, ಕಳೆದೊಂದು ವರ್ಷದಿಂದ ಇಲ್ಲಿ ವಾಸ ಮಾಡುವವರು ಕನಿಷ್ಠ ವ್ಯವಹಾರಿಕ ಜ್ಞಾನಕ್ಕೆ ಬೇಕಾದರಷ್ಟು ಕನ್ನಡವನ್ನು ಮಾತನಾಡಿ ಎಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ, ಉತ್ತರ ಭಾರತ ಸೇರಿದಂತೆ ವಿವಿಧೆಡೆಯಿಂದ ಬಂದು ಸುಮಾರು ದಶಕಗಳ ಕಾಲ ವಾಸವಾಗಿದ್ದರೂ ಕನ್ನಡದ ಒಂದು ಪದವನ್ನೂ ಮಾತನಾಡುವುದಿಲ್ಲ. ಕನ್ನಡ ಮಾತನಾಡಿ ಎಂದರೆ ಅದರ ಅಗತ್ಯವೇ ನಮಗಿಲ್ಲ ಎಂದು ಉಡಾಫೆ ಉತ್ತರ ಕೊಟ್ಟು ಹೋಗಿದ್ದಾರೆ. ಆದರೆ, ಈ ವಿಡಿಯೋ ನೋಡಿದ ನೆಟ್ಟಿಗರು ಪರ, ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಬಹುತೇಕರು ಬೆಂಗಳೂರಿನಲ್ಲಿ ಕನ್ನಡ ಕಲಿಯಿರಿ ಎಂಬುದನ್ನು ಇದೀಗ ಟ್ರೆಂಡಿಂಗ್ ಮಾಡಿಕೊಂಡಿದ್ದೀರಿ. ಅದರಿಂದ ನೀವು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಅವಮಾನಿಸಿ, ಕನ್ನಡಿಗರನ್ನು ಕೆಣಕಿದ ಉತ್ತರ ಭಾರತೀಯನಿಗೆ ಕಾಲಿಗೆ ಬೀಳುವ ಪರಿಸ್ಥಿತಿ!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಂಜು ತನಯ (@ManjuKBye) ಎಂಬ ಖಾತೆಯನ್ನು ಹೊಂದಿದ ವ್ಯಕ್ತಿ ಈ ಸಂಭಾಷಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುಮಾರು ಒಂದೂವರೆ ನಿಮಿಷದ ವಿಡಿಯೋ ಒಂದು ದಿನದಲ್ಲಿ ಬರೋಬ್ಬರಿ 62 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 358 ಜನರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕನ್ನಡ ಮಾತನಾಡದ ಸೋಂಬೇರಿಗಳಿಗೆ ಇಂತಹ ಪ್ರಶ್ನೆ ಮಾಡುವುದು ಒಳ್ಲೆಯದು. ಕಳೆದ 12 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಕನ್ನಡವನ್ನು ಕಲಿಯುವುದಕ್ಕೆ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ. ಇದರಿಂದ ಎರಡು ವಿಷಯಗಳು ಅರ್ಥವಾಗುವುದೇನೆಂದರೆ ಕನ್ನಡ ಕಲಿಯಲಿಕ್ಕೆ ಆಸಕ್ತಿ ಇಲ್ಲದಿರುವುದು ಹಾಗೂ ಸ್ಥಳೀಯ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಕಲಿಯಲು ನಿರ್ಲಕ್ಷ್ಯ ಮನೋಭಾವನೆ ಹೊಂದಿರುವುದು ಎಂದು ಬರೆದುಕೊಂಡು ಪೋಸ್ಟ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಇರುವುದೇನು?
ಕನ್ನಡಿಗ: ಕಳೆದ 12 ವರ್ಷಗಳಿಂದ ಇಲ್ಲಿದ್ದೀರಿ ಕನ್ನಡ ಬರುವುದಿಲ್ಲವೇ ಎಂದು ಕೇಳಿದ್ದಾರೆ. ಯಾಕೆ ಕನ್ನಡ ಕಲಿತಿಲ್ಲ, ಕಲಿಯಬೇಕಲ್ಲವೇ.? ನೀವು ವಾಸವಾಗಿರುವ ಸ್ಥಳದ ಭಾಷೆ, ಸಂಸ್ಕೃತಿಗೆ ಗೌರವ ಕೊಡಬೇಕಲ್ಲವೇ' ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದಿ ಭಾಷಿಕ: 'ನನಗೆ ಅದು ಬೇಕಿಲ್ಲ, ನಿಮಗೆ ಹಿಂದಿ ಬರುತ್ತದೆಯೇ' ಎಂದು ಕೇಳಿದ್ದಾರೆ.
ಕನ್ನಡಿಗ : ವ್ಯಕ್ತಿ ಹೌದು ನನಗೆ ಕನ್ನಡ, ಹಿಂದಿ ಬರುತ್ತದೆ. ನಾನು ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತೇನೆ.
ಹಿಂದಿ ಭಾಷಿಕ : ನಾನು ಕೂಡ ಎಲ್ಲ ಭಾಷೆಗಳಿಗೆ ಗೌರವ ಕೊಡುತ್ತೇನೆ.
ಕನ್ನಡಿಗ : ಹಾಗಾದರೆ ನೀವು ಕನ್ನವನ್ನು ಗೌರವಿಸುವುದಾದರೆ, ಕನ್ನಡ ಮಾತನಾಡುವುದನ್ನು ಕಲಿಯಬೇಕು ಅಲ್ಲವೇ.?
ಹಿಂದಿ ಭಾಷಿಕ: ನನಗೆ ಕನ್ನಡ ಕಲಿಯುವ ಅಗತ್ಯವಿಲ್ಲ.
ಕನ್ನಡಿಗ : ಹಾಗಿದ್ದರೆ ಕರ್ನಾಟಕದಲ್ಲಿ ನೀವು ಏಕೆ ವಾಸವಾಗಿದ್ದೀರಿ. ನಿಮಗೆ ಇಲ್ಲಿನ ಕೆಲಸ ಬೇಕು, ಇಲ್ಲಿನ ಸಂಬಳ ಬೇಕು. ಆದರೆ, ಇಲ್ಲಿನ ಸ್ಥಳೀಯ ಭಾಷೆ ಮಾತ್ರ ಯಾಕೆ ಬೇಡ?
ಹಿಂದಿ ಭಾಷಿಕ: ನೀವು ನನ್ನೊಂದಿಗೆ ಯಾಕೆ ಜಗಳ ಮಾಡುತ್ತಿದ್ದೀರಿ ನನಗೆ ಗೊತ್ತಾಗುತ್ತಿಲ್ಲ.
ಕನ್ನಡಿಗ : ನಾನು ನಿಮ್ಮೊಂದಿಗೆ ಜಗಳ ಮಾಡುತ್ತಿಲ್ಲ, ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇನ್ನುಮೇಲಾದರೂ ಕನ್ನಡ ಕಲಿತುಕೊಳ್ಳಿ. ಇದು ಮುಂಬೈ ಅಥವಾ ಗುಜರಾತ್ ಅಲ್ಲ ಬೆಂಗಳೂರು. ಹಾಗಾಗಿ ಕನ್ನಡವನ್ನು ಕಲಿತು ಮಾತನಾಡಿ.
ಹಿಂದಿ ಭಾಷಿಕ: ನಾವು ಹೋದ ಎಲ್ಲ ರಾಜ್ಯಗಳಲ್ಲಿ ಆಯಾ ಭಾಷೆ ಕಲಿಯಬೇಕಿಲ್ಲ.
ಕನ್ನಡಿಗ : ಹೌದು ಸರ್, ನಾವೆಲ್ಲರೂ ಭಾರತೀಯರು.
ಹಿಂದಿ ಭಾಷಿಕ : ನಾನೂ ಕೂಡ ಭಾರತೀಯ. ಯಾಕೆ ನೀವು ಸುಮ್ಮನೆ ನಮ್ಮ ಮೇಲೆ ಎಗರಾಡುತ್ತಿದ್ದೀರಿ?
ಕನ್ನಡಿಗ : ನೀವು 12 ವರ್ಷದಿಂದ ಇಲ್ಲಿದ್ದರೂ ಕನ್ನಡ ಕಲಿಯದಿರುವುದು ನಿಮ್ಮ ತಪ್ಪಲ್ಲವೇ.
ಹಿಂದಿ ಭಾಷಿಕ : ನೋಡಿ ನಾನು ಈ ರಾಜ್ಯಕ್ಕೆ ಗೌರವಿಸುತ್ತೇನೆ. ಇಲ್ಲಿನ ಭಾಷೆ ಕಲಿಯಬೇಕೋ ಬೇಡವೋ ಎನ್ನುವುದು ನನ್ನ ಸ್ವಂತ ನಿರ್ಧಾರ.