Asianet Suvarna News Asianet Suvarna News

ಕನ್ನಡಪರ ಹೋರಾಟಗಾರರ ವಿರುದ್ಧ ಜಾಮೀನು ರಹಿತ ಪ್ರಕರಣ

ಹಿಂದಿ ಭಾಷೆಯಲ್ಲಿ ಬರೆದಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.

Non Bailable Case Against Pro Kannada Activists In Bengaluru
Author
Bengaluru, First Published Aug 19, 2019, 7:48 AM IST

ಬೆಂಗಳೂರು [ಆ.19]:  ಶಿವಾಜಿನಗರದಲ್ಲಿ ಸಂಪೂರ್ಣವಾಗಿ ಹಿಂದಿ ಭಾಷೆಯಲ್ಲಿ ಬರೆದಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಬಂಧಿಸಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಸಂಬಂಧ ಭಾನುವಾರ ಸಂಜೆ ನಗರದ ಆನಂದರಾವ್‌ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೂಡಲೇ ಪ್ರಕರಣ ವಾಪಸ್‌ ಪಡೆದು ಬಂಧಿತರನ್ನು ಬಿಡುಗಡೆ ಮಾಡದಿದ್ದರೆ, ರಾಜ್ಯಾದ್ಯಂತ ಉಗ್ರ ರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿಮಾತನಾಡಿ, ಕನ್ನಡಿಗರು ಹಾಗೂ ಕನ್ನಡ ಹೋರಾಟಗಾರರ ವಿರುದ್ಧ ನಡೆಯುತ್ತಿರುವ ಪಿತೂರಿ ನಿಲ್ಲಿಸಬೇಕು. ಇದೀಗ ಕನ್ನಡಿಗರು ಹಾಗೂ ಕನ್ನಡ ಹೋರಾಟಗಾರರು ಒಂದಾಗಿರುವುದರಿಂದ ಹೋರಾಟ ಯಾವ ಮಟ್ಟತಲುಪುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಂಧಿತ ಆರು ಮಂದಿ ರಾಜ್ಯದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಈ ಮೂಲಕ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕೆಂದು ಆ.14 ಮತ್ತು 15ರಂದು 24 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಇಂತಹವರನ್ನು ಜಾಮೀನು ರಹಿತ ಪ್ರಕರಣ ದಾಖಲಿಸಿ ಬಂಧಿಸಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್‌ ಪಾಟೀಲ್‌, ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ರಮೇಶ್‌ ಗೌಡ, ಕನ್ನಡ ರಣಧೀರ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ಬ್ಯಾನರ್‌ ಪರ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌

ಈ ಮಧ್ಯ ಘಟನೆ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವೀಟ್‌ನಲ್ಲಿ ‘ಬೆಂಗಳೂರಿನಲ್ಲಿರುವ ಜೈನ್‌ ಸಹೋದರರ ಹಿಂದಿ ಬ್ಯಾನರನ್ನು ಕೆಲವು ರೌಡಿ ಎಲಿಮೆಂಟ್ಸ್‌ ಹರಿದು ಹಾಕಿರುವುದು ತುಂಬಾ ನೋವಾಗಿದೆ. ಇವರು ಯಾವತ್ತೂ ಉರ್ದು ಬ್ಯಾನರ್‌ ಹಾಕುವುದನ್ನು ಪ್ರಶ್ನಿಸಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡುವ ಶಾಂತಿಯುತ ಜೈನರ ಮೇಲೆ ಆಕ್ರಮಣ ಮಾಡುವುದು ನಿಜವಾದ ಕನ್ನಡ ಪ್ರಿಯರಿಗೆ ಮತ್ತು ಕಾರ್ಯಕರ್ತರಿಗೆ ಅಪಚಾರ ತರುತ್ತದೆ’ ಎಂದಿದ್ದಾರೆ.

ಆದರೆ ಕನ್ನಡ ಕಾರ್ಯರ್ತರನ್ನು ಗೂಂಡಾಗಳು ಎಂದು ಕರೆದಿರುವುದಕ್ಕೆ ಸಂಸದರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಫೋಟೋ: ಕನ್ನಡ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಭಾನುವಾರ ಸಂಜೆ ನಗರದ ಆನಂದರಾವ್‌ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Follow Us:
Download App:
  • android
  • ios