ದೇವರಹಿಪ್ಪರಗಿ: ಈ ಶಾಲೆಯ ಮಕ್ಕಳ ಶೌಚಕ್ರಿಯೆಗೆ ಬಯಲೇ ಗತಿ!

ಸೌಲಭ್ಯ ವಂಚಿತ ಭೈರವಾಡಗಿ ಪ್ರೌಢಶಾಲೆ| 18 ವರ್ಷದಿಂದ ನಿಂತಿಲ್ಲ ಕುಡಿವ ನೀರಿಗಾಗಿ ಮಕ್ಕಳ ಪರದಾಟ| ಪ್ರೌಢಶಾಲೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಶಾಲಾ ಆವರಣ ಗೋಡೆ, ಅಸ್ವಚ್ಛತೆ, ನೀರಿನ ಮೂಲಗಳಿಲ್ಲದೆ ಕೊರಗುತ್ತಿದೆ| ನೀರು, ಶೌಚಾಲಯಗಳಿಲ್ಲದೆ ಪರದಾಡುತ್ತಿರುವ ಮಕ್ಕಳು|

No Toilet Facility in Government School in Devarahipparagi in Vijayapura District

ಹುಸೇನ್‌ ಆರ್‌ ಕೊಕಟನೂರ 

ದೇವರಹಿಪ್ಪರಗಿ(ಡಿ.26): ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು, ಉತ್ತಮ ಶಿಕ್ಷಣಕ್ಕಾಗಿ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಕೋಟ್ಯಂತರ ರು. ಖರ್ಚು ಮಾಡಿದರೂ ಏನೊಂದೂ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದ ಜಿ.ಎಚ್‌.ಪಾಟೀಲ ಸರ್ಕಾರಿ ಪ್ರೌಢಶಾಲೆಯೇ ನೇರ ಸಾಕ್ಷಿ.

ಹೌದು, 2001-2002ನೇ ಸಾಲಿನಲ್ಲಿ ಆರಂಭಗೊಂಡಿರುವ ಪ್ರೌಢಶಾಲೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಶಾಲಾ ಆವರಣ ಗೋಡೆ, ಅಸ್ವಚ್ಛತೆ, ನೀರಿನ ಮೂಲಗಳಿಲ್ಲದೆ ಕೊರಗುತ್ತಿದೆ. ಸದ್ಯ ಪ್ರೌಢಶಾಲೆಯಲ್ಲಿ 8ರಿಂದ 10ನೇ ವರ್ಗದವರೆಗೆ ತರಗತಿ ನಡೆಯುತ್ತಿದ್ದು, ಒಟ್ಟು 115 ಮಕ್ಕಳು ಓದುತ್ತಿದ್ದಾರೆ. ಇವರಿಗೆ ಕಲಿಕೆಗೆ ಅಗತ್ಯವಾದ 10 ಸುಸಜ್ಜಿತ ಕೊಠಡಿ ಹಾಗೂ 6 ಜನ ಶಿಕ್ಷಕರು ಸೇರಿದಂತೆ 8 ಜನ ಸಿಬ್ಬಂದಿ ವರ್ಗದವರಿದ್ದು, ಪಾಠ ಬೋಧನೆಗೇನೂ ಕೊರತೆಯಿಲ್ಲ. ಆದರೆ ದೈನಂದಿನ ಅಗತ್ಯತೆಗಳಾದ ನೀರು, ಶೌಚಾಲಯಗಳಿಗೆ ಪರದಾಡುವಂತಾಗಿದೆ.

ನೀರಿನ ವ್ಯವಸ್ಥೆಗೆ ಆಗ್ರಹ:

ಮೊದಲು ಕುಡಿಯುವ ನೀರಿಗಾಗಿ ಮಕ್ಕಳು ಸಮೀಪದ ಕೆರೆಗೆ ಹೋಗುವಂತ ಪರಿಸ್ಥಿತಿ ಇತ್ತು. ಈಗ ಗ್ರಾಮ ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಸದ್ಯ ಕಳೆದೊಂದು ವರ್ಷದಿಂದ ಆ ಕೊಳವೆಬಾವಿಯೂ ಸುಸ್ಥಿತಿಯಲ್ಲಿಲ್ಲ. ಹೀಗಾಗಿ ಶಾಲಾ ಆವರಣದಲ್ಲಿ ಗಿಡಮರ ಬೆಳೆಸಲು ಹಾಗೂ ವಿದ್ಯಾರ್ಥಿಗಳಿಗೆ ಊಟಕ್ಕಿಂತ ಮುಂಚೆ ಕೈಕಾಲು ತೊಳೆಯಲು ಅಗತ್ಯವಾದ ಹೆಚ್ಚು ನೀರು ಸಿಗುತ್ತಿಲ್ಲ. ಅದಕ್ಕಾಗಿ ಶಾಲೆಯ ಆವರಣದಲ್ಲಿರುವ ಬೋರ್‌ವೆಲ್‌ ಅನ್ನು ಅದರ ಒಳಗಡೆ ಬಿದ್ದ ಮೋಟಾರ್‌ ಹೊರತೆಗೆದು ರಿಪೇರಿಗೊಳಿಸಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸಬೇಕು. ಜೊತೆಗೆ ಶಾಲಾ ರಕ್ಷಣೆಗೆ ಅತ್ಯಗತ್ಯವಾದ ಕಾಂಪೌಂಡ್‌ ನಿರ್ಮಿಸಿ ಸಾರ್ವಜನಿಕರ ಅತಿಕ್ರಮಣ ತಡೆಯಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.

ನಮ್ಮೂರ ಪ್ರೌಢಶಾಲೆಯಲ್ಲಿ ಸಾಕಷ್ಟುಸ್ಥಳಾವಕಾಶವಿದ್ದು, ಗಿಡಮರ ಬೆಳೆಸಲು ಅನುಕೂಲವಿದೆ. ಅದರಂತೆ ಪ್ರೌಢಶಾಲೆಗೆ ಕಾಂಪೌಂಡ್‌ ನಿರ್ಮಾಣ ಮಾಡಬೇಕು. ಉತ್ತಮ ರೀತಿಯ ಶೌಚಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ಶಾಲೆಯಲ್ಲಿ ಶೌಚ ಕ್ರಿಯೆಗಾಗಿ ನಾವು ದೂರದ ಗದ್ದೆಗಳಿಗೆ ತೆರಳುವ ಪ್ರಸಂಗ ಒದಗಿ ಬಂದಿದೆ. ವಿದ್ಯಾರ್ಥಿನಿಯರಿಗೆ ಇದರಿಂದ ಸಾಕಷ್ಟುತೊಂದರೆಯಾಗಿದೆ. ಶಾಲೆಯಲ್ಲಿ ಬೇಗನೆ ಶೌಚಾಲಯ ನಿರ್ಮಿಸಬೇಕು. ಇದರ ಜೊತೆಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪ್ರೌಢಶಾಲಾ ವಿದ್ಯಾರ್ಥಿನಿಯರು ಎಂದು ಆಗ್ರಹಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಬೈರವಾಡಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್‌.ವೈ.ಬಜಂತ್ರಿ ಅವರು,  ಶಾಲೆಗೆ ಕಾಂಪೌಂಡ್‌ ನಿರ್ಮಿಸುವಂತೆ ಜಿಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಶಾಲೆಯ 04 ಕೊಠಡಿಗಳು ರಿಪೇರಿಯಾಗಬೇಕಾಗಿದ್ದು, ಇವುಗಳ ಬಗ್ಗೆ ಗ್ರಾಮ ಪಂಚಾಯಿತಿ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ. 

ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಕುಂದು ಕೊರತೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸಂಬಂಧಿಸಿದ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಪ್ರೇಮಿಗಳಾದ ಮೊಹನಗೌಡ ಹಿರೇಗೌಡರ ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬಸವನಬಾಗೇವಾಡಿ ಪ್ರಭಾರಿ ಬಿಇಒ ಎಸ್‌ ಎಸ್‌ ಮಾಡಗಿ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಹಾಜರಾಗಿ ಕೆಲವೇ ದಿನಗಳಾಗಿದೆ. ತಕ್ಷಣವೇ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ. (ಚಿತ್ರ:ಸಾಂದರ್ಭಿಕ ಚಿತ್ರ)
 

Latest Videos
Follow Us:
Download App:
  • android
  • ios