Mysuru : ನೂರು ದಿನವಾದ್ರೂ ಬಗೆಹರಿಯದ ಆದಿವಾಸಿಗಳ ಸಮಸ್ಯೆ
ಡಾ. ಮುಜಾಫರ್ ಅಸಾದಿ ವರದಿ ಅನ್ವಯ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ವಿವಿಧ ಹಾಡಿ ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ನೂರು ದಿನ ಸಮೀಪಿಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ (ಡಿ.05): ಡಾ. ಮುಜಾಫರ್ ಅಸಾದಿ ವರದಿ ಅನ್ವಯ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ವಿವಿಧ ಹಾಡಿ ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ನೂರು ದಿನ ಸಮೀಪಿಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
ಹಲವು ಬಾರಿ ಅಹೋರಾತ್ರಿ ಧರಣಿ ಆರಂಭಿಸಿದ ವೇಳೆ ಸ್ಥಳಕ್ಕಾಗಮಿಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಭರವಸೆಗಳು ಇನ್ನೂ ಈಡೇರದ ಕಾರಣ ಈ ಬಾರಿ ಸಮಸ್ಯೆಗೆ ಪರಿಹಾರ ಸಿಗದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಾಲೂಕಿನ ಮಾಲಂಗಿ ಗ್ರಾಪಂ ವ್ಯಾಪ್ತಿಯ ಬೋರನಕಟ್ಟೆ, ಮಾಲಂಗಿ ಗೋಮಾಳ, ಅಬ್ಬಳತಿ ಎ ಮತ್ತು ಬಿ ಪಂಚವಳ್ಳಿ ಗ್ರಾಪಂ ವ್ಯಾಪ್ತಿಯ ಉತ್ತೇನಹಳ್ಳಿ, ಚೌಕೂರು, ಚೌತಿ ಗ್ರಾಪಂ ವ್ಯಾಪ್ತಿಯ ಲಕ್ಷ್ಮಿಪುರ, ಹೊಸೂರು ಕೆರೆಮಾಳದ 452 ಕುಟುಂಬಗಳು (family) ನಿರ್ಧಿಸಿವೆ.
ಕರ್ನಾಟಕ ಅರಣ್ಯ ಮೂಲ ಬುಡಕಟ್ಟು (Tribes) ಸಮುದಾಯಗಳ ಒಕ್ಕೂಟ ನೇತೃತ್ವದಲ್ಲಿ ಹುಣಸೂರು- ಗೋಣಿಕೊಪ್ಪ ಮುಖ್ಯರಸ್ತೆಯ ಅಳಲೂರು ಬಳಿಯ ನಾಗರಹೊಳೆ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ವಸತಿ ಗೃಹ ಆವರಣದಲ್ಲಿ ಕಳೆದ ಸೆ. 6ರಂದು ಅಹೋರಾತ್ರಿ ನಿರಂತರ ಧರಣಿ ಆರಂಭಿಸಿ 100 ದಿನ ಸಮೀಪಿಸುತ್ತಿದ್ದರೂ, ಅವರ ಗೋಳು ಕೇಳಲು ಯಾರೂ ಮುಂದಾಗಿಲ್ಲ.
ಈ ಬಾರಿ ಯಾವುದೇ ಕಾರಣಕ್ಕೂ ಬೇಡಿಕೆಗಳು ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ವಿವಿಧ ಹಾಡಿಗಳ ವೃದ್ಧರು, ಮಹಿಳೆಯರು, ತಮ್ಮ ಮಕ್ಕಳೊಂದಿಗೆ ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ಕಾಲ ದೂಡುತ್ತಿದ್ದರು ಸಮಸ್ಯೆ ಬಗೆಹರಿಸುವ ಕುರಿತು ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ನಗರ ಪ್ರದೇಶಗಳಲ್ಲಿ ವಿಲಾಸಿ ಜೀವನ ನಡೆಸಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದೆ ಹಾಡಿ ನಿವಾಸಿಗಳ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜಾನಕಿ, ಮಹದೇವಮ್ಮ, ಶಾಂತಿ, ಸೌಮ್ಯ, ಕಮಲಮ್ಮ, ಸುಶೀಲ, ಬೋಜಿ, ಗೌರಮ್ಮ, ಜಯಮ್ಮ, ರಾಜಮ್ಮ, ಸವಿತಾ, ಕಾವೇರಿ, ಪುಟ್ಟಬಸಯ್ಯ ಸೇರಿದಂತೆ ಮತ್ತಿತರ ಪ್ರತಿಭಟನಾ ನಿರತರು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಆರಂಭವಾದಾಗಿನಿಂದ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಂದು ಮಾತ್ರ ನಮ್ಮ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಭರವಸೆ ನೀಡುತ್ತಾರೆಯೇ ಹೊರತು ಶೀಘ್ರ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂಬುದು ಹಾಡಿ ನಿವಾಸಿಗಳ ಆರೋಪವಾಗಿದೆ. ಈಗಾಗಲೇ ಸಾಮೂಹಿಕ ಹಕ್ಕು ಪತ್ರ ವಿತರಿಸಿದ್ದು, ಡಾ. ಮುಜಾಫರ್ ಅಸಾದಿ ವರದಿ ಅನ್ವಯ ವೈಯಕ್ತಿಕ ಹಕ್ಕುಪತ್ರ ವಿತರಣೆಗಾಗಿ 452 ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ.
ತಾಲೂಕಿನ ವಿವಿಧ ಹಾಡಿ ನಿವಾಸಿ ಕುಟುಂಬಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೀಘ್ರ ಅಗತ್ಯ ಕ್ರಮ ಕೈಗೊಂಡು ಪ್ರತಿಭಟನೆ ಅಂತ್ಯಗೊಳಿಸುತ್ತಾರಾ ಎಂದು ಕಾದು ನೋಡಬೇಕು.
ಪ್ರತಿಭಟನೆ ಆರಂಭವಾಗಿ 100 ದಿನ ಸಮೀಪಿಸುತ್ತಿದರು. ಹಾಡಿ ನಿವಾಸಿಗಳು ಚಳಿಮಳೆ ಗಾಳಿ ಎನ್ನದೆ ತಮ್ಮ ಕುಟುಂಬಗಳೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಸಮಸ್ಯೆ ಬಗೆಹರಿಸಲು ಮುಂದಾಗದಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡೆ ಅವರ ನಿರ್ಲಕ್ಷ್ಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
- ಜಾನಕಮ್ಮ, ಹಾಡಿ ನಾಯಕಿ ಹಾಗೂ ಗ್ರಾಪಂ ಸದಸ್ಯೆ
ಹಾಡಿ ನಿವಾಸಿಗಳು ಸಹ ಜೀವನ ನಡೆಸಲು ಪುನರ್ ವಸತಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಂಡು ಕೈ ಬಿಟ್ಟಿರುವ 452 ಕುಟುಂಬಗಳಿಗೆ ಶೀಘ್ರ ಪುನರ್ವಸತಿ ಕಲ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.
- ಶೈಲೇಂದ್ರ ಕುಮಾರ್, ಕಾರ್ಯದರ್ಶಿ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ
ಹಾಡಿ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸದನದಲ್ಲಿ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗಿದ್ದು ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೂ ಸರ್ಕಾರದ ಗಮನ ಸೆಳೆದು ಸರ್ಕಾರವನ್ನು ಮತ್ತಷ್ಟುಪರಿಣಾಮಕಾರಿಯಾಗಿ ಒತ್ತಾಯಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಕೆ. ಮಹದೇವ್, ಶಾಸಕರು