ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬದಲಾವಣೆಯ ಪ್ರಶ್ನೆಯೇ ಉದ್ಬವಿಸಿಲ್ಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ತಿಳಿಸಿದ್ದಾರೆ.

ಕೆ.ಆರ್‌.ಪೇಟೆ: ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬದಲಾವಣೆಯ ಪ್ರಶ್ನೆಯೇ ಉದ್ಬವಿಸಿಲ್ಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ತಿಳಿಸಿದ್ದಾರೆ.

ಜಿಲ್ಲೆಯ ಜೆಡಿಎಸ್‌ ಶಾಸಕರಾದ ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಎಂ.ಶ್ರೀನಿವಾಸ್‌, ಡಿ.ಸಿ.ತಮ್ಮಣ್ಣ, ಡಾ.ಅನ್ನದಾನಿ ಸೇರಿದಂತೆ ಎಂಎಲ…ಸಿ ಬೋಜೇಗೌಡ ಹಾಗೂ ಮಾಜಿ ಎಂಎಲ….ಸಿ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ನಾನು ಪಕ್ಷದ ಮುಖಂಡರು, ಪದಾಧಿಕಾರಿಗಳೊಂದಿಗೆ ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಿದಾಗ ಎಚ್‌.ಡಿ.ದೇವೇಗೌಡರು ಜಿಲ್ಲೆಯ ಎಲ್ಲಾ ಏಳು ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆದ್ದು ಬರುವಂತೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೆ.ಆರ್‌.ಪೇಟೆ ಅಭ್ಯರ್ಥಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕೆಲವರು ಉದ್ದೆಶ ಪೂರ್ವಕವಾಗಿ ಗಾಳಿ ಸುದ್ದಿಗಳನ್ನು ಹರಡಿ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ವಿಚಲಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡದಂತೆ ಮಾಜಿ ಪ್ರಧಾನಿಗಳು ತಿಳಿಸಿ ಜನಪರ ಕೆಲಸಗಳನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎಂದು ಎಚ್‌ .ಟಿ.ಮಂಜು ಮಾಹಿತಿ ನೀಡಿದ್ದಾರೆ. 

ಟಿಕೆಟ್ ಕಂಟಕ

 ಕೆ.ಆರ್‌.ಪೇಟೆ : ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಘೋಷಿತ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ಬದಲಿಸಿ ಕುರುಬ ಸಮುದಾಯಕ್ಕೆ ಸೇರಿದ ತಾಲೂಕಿನ ಆಲಂಬಾಡಿ ಕಾವಲು ಗ್ರಾಮಕ್ಕೆ ಸೇರಿದ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜನ್‌ ಅವರನ್ನು ಕಣಕ್ಕಿಳಿಸುವ ಹೊಸ ಚಿಂತನೆ ಜೆಡಿಎಸ್‌ ಪಾಳಯದಲ್ಲಿ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಕ್ಷೇತ್ರದ ಕೆಲವು ಪ್ರಭಾವಿ ಮುಖಂಡರ ವಿರೋಧದ ನಡುವೆಯೂ ಮನ್‌ಮುಲ್‌ ನಿರ್ದೇಶಕ ಎಚ್‌.ಟಿ.ಮಂಜು ಅವರಿಗೆ ಮೊದಲ ಸುತ್ತಿನಲ್ಲಿಯೇ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಚುನಾವಣೆ ಎದುರಿಸುವ ಉತ್ಸಾಹದೊಂದಿಗೆ ಎಚ್‌.ಟಿ.ಮಂಜು ತಾಲೂಕಿನಾದ್ಯಂತ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.

ಗೆಲ್ಲುವ ಅಭ್ಯರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಜೆಡಿಎಸ್‌ ಈಗಾಗಲೇ ಘೋಷಣೆ ಮಾಡಿರುವ ಸಂಭವನೀಯ ಅಭ್ಯರ್ಥಿಗಳಲ್ಲಿ ಕೆಲವು ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣದಿಂದ ರಾಜ್ಯಾದ್ಯಂತ ಜೆಡಿಎಸ್‌ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಕುರುಬ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜೆಡಿಎಸ್‌ ಪಾಳಯದಲ್ಲಿ ಹೊಸ ಚಿಂತನೆ ನಡೆಯುತ್ತಿದೆ.

ಕುರುಬ ಸಮುದಾಯದವರಿಗೆ ಟಿಕೆಟ್‌:

ಕಾಂಗ್ರೆಸ್‌ ವಿರುದ್ಧ ಕುರುಬ ಸಮಾಜ ತಿರುಗಿ ಬೀಳುವಂತೆ ಮಾಡಲು ಜೆಡಿಎಸ್‌ ಜಿಲ್ಲೆಗೊಬ್ಬರಂತೆ ಕುರುಬ ಸಮುದಾಯದ ಒಬ್ಬರಿಗೆ ಟಿಕೆಟ್‌ ನೀಡಲು ಚಿಂತಿಸಿದೆ. ಒಕ್ಕಲಿಗ ಬಾಹುಳ್ಯದ ಮಂಡ್ಯದ ಕೆ.ಆರ್‌.ಪೇಟೆಯಲ್ಲೇ ಇದನ್ನು ಪ್ರಯೋಗ ಮಾಡುವುದಕ್ಕೆ ಜೆಡಿಎಸ್‌ ಮುಂದಾಗಿದೆ ಎನ್ನಲಾಗಿದ್ದು, ಕೆ.ಆರ್‌.ಪೇಟೆಯಲ್ಲಿ ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ಬದಲಿಸಿ ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್‌ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚರ್ಚೆ ಆರಂಭವಾಗಿದೆ. ಹೀಗಾಗಿ ಘೋಷಿತ ಒಕ್ಕಲಿಗ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ತೆಗೆದು ಕುರುಬ ಸಮಾಜದ ಮಲ್ಲಿಕಾರ್ಜುನ್‌ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಾಳಯದಲ್ಲಿ ಮಲ್ಲಿಕಾರ್ಜುನ್‌:

ಮಲ್ಲಿಕಾರ್ಜುನ್‌ ಅವರು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಬಾವ ಮೈದುನ. ಅಲ್ಲದೇ, ಸದ್ಯ ಆರ್‌ಟಿಒ ಅಧಿಕಾರಿಯಾಗಿದ್ದು, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಮೂಲತಃ ಕೆ.ಆರ್‌.ಪೇಟೆ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದ ಜಮೀನ್ದಾರ್‌ ಕುಟುಂಬದ ಮಲ್ಲಿಕಾರ್ಜುನ್‌ ಕಳೆದ ಒಂದು ವರ್ಷದಿಂದ ನಾನಾ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದರು. ಮಲ್ಲಿಕಾರ್ಜುನ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಚಿಂತಿಸಿದ್ದರು. ಇದಕ್ಕೆ ಒಂದು ಹಂತದಲ್ಲಿ ಮಲ್ಲಿಕಾರ್ಜುನ್‌ ಕೂಡ ಒಪ್ಪಿಗೆ ನೀಡಿದ್ದರು. ಜಿಲ್ಲಾ ನಾಯಕರು ಸಹಮತ ತೋರಿಸಿದ್ದರು. ಆದರೆ, ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್‌ ಆಗಮನದ ಸದ್ದು ಕ್ಷೇತ್ರ ಕಾಂಗ್ರೆಸ್‌ ಪಾಳಯವನ್ನು ಗೊಂದಲದ ಗೂಡಾಗಿಸಿದೆ.