ದಯಾಶಂಕರ ಮೈಲಿ

ಹಾಸನ [ಸೆ.30]:  ಜಿಲ್ಲೆಯ 2 ನಗರಸಭೆ ಮತ್ತು 3 ಪುರಸಭೆಗಳಿಗೆ ಚುನಾವಣೆ ನಡೆದು, ಅಲ್ಲಿಗೆ ಜನಪ್ರತಿನಿಧಿಗಳು ಸಂವಿಧಾನಬದ್ದವಾಗಿ ಆಯ್ಕೆಯಾಗಿ ಬರೋಬ್ಬರಿ ಒಂದು ವರ್ಷ 3 ತಿಂಗಳುಗಳೇ ಆಗಿವೆ. ಆದರೂ ಆ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆ ಆಗಿಲ್ಲ.

ಇದರಿಂದ ಜನಪ್ರತಿನಿಧಿಗಳು ಚುನಾಯಿತರಾಗಿದ್ದರೂ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಅಧಿಕಾರಿಗಳ ಆಡಳಿತ ವ್ಯವಸ್ಥೆ ಜಾರಿಯಾಗಿದೆ. ಹಾಸನ ನಗರಸಭೆ, ಅರಸೀಕೆರೆ ಪುರಸಭೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಸಕಲೇಶಪುರ ಪುರಸಭೆಗಳಿಗೆ ಚುನಾವಣೆ ನಡೆದಿದೆ. ಆದರೆ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರ ಇಲ್ಲ.

ಹಾಸನ ನಗರಸಭೆಗೆ 35, ಅರಸೀಕೆರೆ ನಗರಸಭೆಗೆ 31, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಪುರಸಭೆಗಳಿಗೆ ತಲಾ 23 ಸದಸ್ಯರು ಚುನಾಯಿತರಾಗಿದ್ದಾರೆ. ಒಟ್ಟು 2 ನಗರಸಭೆ, 3 ಪುರಸಭೆಗಳಿಗೆ 135 ಸದಸ್ಯರು ಸಂವಿಧಾನಬದ್ದವಾಗಿ ನಡೆದ ಚುನಾವಣೆ ಮೂಲಕವೇ ಜನರಿಂದ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮೀಸಲಾತಿ ಸರಿಯಾಗಿಲ್ಲ ಎಂಬ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿರುವುದರಿಂದ ಅವರೆಡು ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯದೇ ಸ್ಥಗಿತಗೊಂಡಿದೆ. ನ್ಯಾಯಾಲಯದಲ್ಲಿ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ನಿರೀಕ್ಷಿತ ಪ್ರಮಾಣದಲ್ಲಿ ಗಮನಹರಿಸುತ್ತಿಲ್ಲ.

ಇದರಿಂದ ಆಯಾ ಸ್ಥಳೀಯ ಜನರ ಆಶೋತ್ತರಗಳು ಈಡೇರುತ್ತಿಲ್ಲ. ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿವ ನೀರು, ಒಳ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಸೌಲಭ್ಯ ಸೇರಿದಂತೆ ಅನೇಕ ಸವಲತ್ತುಗಳು ಸರಿಯಾಗಿ, ಸಕಾಲದಲ್ಲಿ ಜನರಿಗೆ ಲಭ್ಯವಾಗುತ್ತಿಲ್ಲ. ಅಲ್ಲದೇ, ಮನೆ ನಿರ್ಮಾಣ ಮಾಡಲು ಬೇಕಾದ ನಕ್ಷೆ ನಿರಾಪೇಕ್ಷಣಾ ಪತ್ರ ಮತ್ತಿತರ ಕೆಲಸಗಳು ಆಗುತ್ತಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನಪ್ರತಿನಿಧಿಗಳು ಇದ್ದರೇ ಅವರ ಮೂಲಕ ನಗರಸಭೆ, ಪುರಸಭೆಗಳಲ್ಲಿ ಕೆಲಸ ಮಾಡಿಸಿಕೊಳ್ಳುವುದು ಜನರಿಗೆ ಸುಲಭ. ಆದರೆ, ಈಗ ನಗರಸಭೆ ಮತ್ತು ಪುರಸಭೆಗಳಲ್ಲಿ ಜನಪ್ರತಿನಿಧಿಗಳು ಇಲ್ಲದೇ ಕಾರಣ ಎಲ್ಲದಕ್ಕೂ ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ಜನರು ಅವಲಂಬಿಸಬೇಕಿದೆ. ಆದರೆ, ಅಧಿಕಾರಿಶಾಹಿ ಸುಖಾಸುಮ್ಮನೆ ಸರಿಯಾದ ಕಾಲಕ್ಕೆ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂದು ನಾಗರಿಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಳ ಸಮಸ್ಯೆ ಗೊತ್ತಿರುವುದಿಲ್ಲ:

ಏನೇ ಇರಲಿ... ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ನಗರ ಮತ್ತು ಪಟ್ಟಣಗಳ ಬೇರು ಮಟ್ಟದ ಸಮಸ್ಯೆ ಗೊತ್ತಿರುವುದಿಲ್ಲ. ಅದನ್ನು ಮನವರಿಕೆ ಮಾಡಿಕೊಡಬೇಕಾದರೇ ಜನಪ್ರತಿನಿಧಿಗಳು ಬೇಕು. ಈಗ ಅವರಿಲ್ಲದ ಕಾರಣ ಅಧಿಕಾರಿಗಳಿಂದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹಾಸನ ನಗರ ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಆನಂದಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಗಳು ಏನೇನು?

ನಗರಸಭೆ ಮತ್ತು ಪುರಸಭೆಗಳಲ್ಲಿ 18ನೇ ಹಣಕಾಸು ಯೋಜನೆಯಡಿ ಬಿಡುಗಡೆ ಆಗಿರುವ ಹಣವನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಜನರಾಭಿವೃದ್ಧಿಗೆ ಸಮರ್ಪಕವಾಗಿ ವ್ಯಯ ಮಾಡಲು ಆಗುತ್ತಿಲ್ಲ.

ಮಳೆಯಿಂದ ನಗರ, ಪಟ್ಟಣದ ಬಹುತೇಕ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿವೆ. ಈ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡುವುದರಲಿ, ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ.

ಕುಡಿವ ನೀರು ಒದಗಿಸಲು ಭೂಮಿಯೊಳಗೆ ಅಳವಡಿಸಿರುವ ಪೈಪ್‌ಗಳು ಆಗಾಗ ಒಡೆದು ಹೋದಾಗ ತಕ್ಷಣ ರಿಪೇರಿ ಮಾಡಿ, ನೀರು ವ್ಯರ್ಥವಾಗುತ್ತಿದೆ.

ಸ್ವಚ್ಛ ಭಾರತ್‌ ಅಭಿಯಾನದ ಜೊತೆಗೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

ಮುಂದಿನ ದಿನಗಳಲ್ಲಿ ಬೇಸಿಗೆ ಆಗಮಿಸುತ್ತಿದೆ. ಆಗ ಎದುರಾಗುವ ಕುಡಿವ ನೀರಿನ ಸಮಸ್ಯೆಯನ್ನು ಎದುರಿಸಲು ಜನಪ್ರತಿನಿಧಿಗಳು ಇಲ್ಲದಿದ್ದರೇ ಕಷ್ಟಕರವಾಗುತ್ತದೆ.

ಪುರಸಭೆ, ನಗರಸಭೆಗಳ ಕಚೇರಿಗಳಿಗೆ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸುಲಭವಾಗಿ ಕೆಲಸಗಳು ಆಗುತ್ತಿಲ್ಲ.

ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಎಸ್ಸಿ, ಎಸ್ಟಿಗಳಿಗೆ 18 ನೇ ಹಣಕಾಸು ಯೋಜನೆಯಲ್ಲಿ ಮೀಸಲಾದ ಹಣವನ್ನು ಅವರ ಅಭಿವೃದ್ಧಿಗೆ ವೆಚ್ಚ ಮಾಡಲು ಆಗುತ್ತಿಲ್ಲ. ಕೂಡಲೇ ಮಂತ್ರಿಗಳು, ಶಾಸಕರು ನ್ಯಾಯಾಲಯದಲ್ಲಿ ಪ್ರಕರಣವನ್ನು ತ್ವರಿತಗತಿಯಲ್ಲಿ ಪರಿಹರಿಸುವ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸಬೇಕು

ಮರಿ ಜೋಸೆಫ್‌, ಸಂಚಾಲಕರು ಮಾನವ ಹಕ್ಕುಗಳ ಸಂರಕ್ಷಣಾ ಒಕ್ಕೂಟ

1985ರಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ಅಧಿಕಾರಿ ವಿಕೇಂದೀಕರಣ ಮಾಡುವ ಮೂಲಕ ಸ್ಥಳೀಯ ಜನರೇ ಆಡಳಿತ ನಡೆಸುವಂತೆ ಮಾಡಲಾಯಿತು. ಆದರೆ, ಈಗ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳು ಆಯ್ಕೆಯಾಗಿದ್ದರೂ ಆಡಳಿತ ನಡೆಸಲು ಸಾಧ್ಯವಾಗದಂತೆ ಆಗಿದೆ. ಇದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಟ್ಟು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಆಗಿರುವ ಗೊಂದಲವನ್ನು ಸರಿಪಡಿಸಬೇಕು